ಗಣಪತಿ ಅಲ್ಲ ಸಾರ್, ಇಲಿಚಪ್ಪನೇ ನಮ್ಗೆ ದೊಡ್ಡ ದೇವ್ರು! ಈ ಸಮುದಾಯದಲ್ಲಿ ಗಣೇಶನ ಬದಲು ಇಲಿರಾಯನಿಗೆ ಪೂಜೆ!

Kannadaprabha News   | Kannada Prabha
Published : Sep 16, 2026, 07:30 AM IST
Ganesha chaturthi 2026

ಸಾರಾಂಶ

ವಿಜಯನಗರ, ಬಳ್ಳಾರಿ ಸೇರಿದಂತೆ ವಿವಿಧೆಡೆ ವಾಸಿಸುವ ನೇಕಾರ ಸಮುದಾಯದವರು ಗಣೇಶ ಚತುರ್ಥಿಯಂದು ಗಣಪತಿಯ ಬದಲು ಇಲಿರಾಯನ (ಇಲಿಚಪ್ಪ) ಮೂರ್ತಿಯನ್ನು ಪೂಜಿಸುತ್ತಾರೆ. ತಮ್ಮ ಕುಲಕಸುಬಾದ ನೇಯ್ಗೆಯ ನೂಲನ್ನು ಇಲಿಗಳು ಕಡಿಯದಿರಲಿ ಎಂದು ಬೇಡಿಕೊಳ್ಳಲು ಮೂರು ದಿನಗಳ ಕಾಲ ಈ ವಿಶಿಷ್ಟ ಆಚರಣೆ ಮಾಡುತ್ತಾರೆ

ಭೀಮಣ್ಣ ಗಜಾಪುರ ಕೂಡ್ಲಿಗಿ

ಎಲ್ಲಿ ನೋಡಿದರೂ ಗಣೇಶನ ಪೂಜೆ ಸಂಭ್ರಮವಾದರೆ ವಿಜಯನಗರ ಜಿಲ್ಲೆ ಕೂಡ್ಲಿಗಿ, ಕೊಟ್ಟೂರು ತಾಲೂಕುಗಳು ಅಲ್ಲದೇ ಬಳ್ಳಾರಿ, ಚಿತ್ರದುರ್ಗ, ಹಾವೇರಿ ಹಾಗೂ ಆಂಧ್ರದ ಅನಂತಪುರ ಜಿಲ್ಲೆ ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ವಾಸಿಸುವ ನೇಕಾರ ಸಮುದಾಯದವರು ಮಾತ್ರ ಗಣೇಶನ ಬದಲಿಗೆ ವಿಘ್ನನಿವಾರಕನ ವಾಹನವಾದ ಇಲಿರಾಯನ ಮಣ್ಣಿನ ಮೂರ್ತಿ ಮಾಡಿ 3 ದಿನಗಳ ಕಾಲ ವಿಶೇಷ ಪೂಜೆ ಮಾಡಿ ಗಣೇಶನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.

ಇಲಿರಾಯನ ಮಣ್ಣಿನ ಮೂರ್ತಿ ಮಾಡಿ 3 ದಿನಗಳ ಕಾಲ ವಿಶೇಷ ಏಕೆ?

ನೇಕಾರರು ತಮ್ಮ ಕುಲಕಸುಬಾದ ಬಟ್ಟೆ ನೇಯ್ಗೆಗೆ ತೊಂದರೆ ಬಾರದಿರಲಿ ಎಂದು ಬೇಡಿಕೊಳ್ಳುವ ಸಲುವಾಗಿ ಇಲ್ಲಿ ಗಣೇಶನ ಮೂರ್ತಿ ಬದಲು ಇಲಿರಾಯನ ಮೂರ್ತಿ ಕೂರಿಸುತ್ತಾರೆ. ನೇಕಾರರು ಬಟ್ಟೆ, ಸೀರೆ ಹೆಣೆಯಲು ದುಬಾರಿಯ ರೇಷ್ಮೆ ಇತರ ನೂಲು ತಂದು ತಮ್ಮ ಮನೆಗಳಲ್ಲಿ ಇಟ್ಟಿರುತ್ತಾರೆ. ಮನೆಯಲ್ಲಿನ ಇಲಿಗಳು ನೂಲು ಕಡಿದು ಬಿಟ್ಟರೆ ಸಹಸ್ರಾರು ರುಪಾಯಿ ನಷ್ಟವನ್ನು ನೇಕಾರರೇ ಹೊರಬೇಕಾಗುತ್ತಿದೆ. ನೂರು ಇನ್ನೂರು ಕೂಲಿಗಾಗಿ ಸಾವಿರಾರು ಮೌಲ್ಯದ ರೇಷ್ಮೆ ನೂಲನ್ನು ತಂದು ಬಟ್ಟೆಯ ನೇಯುವ ಕುಟುಂಬಗಳಿಗೆ ನೂಲನ್ನು ಇಲಿಗಳು ಕಡಿದುಬಿಟ್ಟರೆ ಅವರ ಬದುಕು ಮೂರಾಬಟ್ಟೆಯಾಗುತ್ತದೆ. ಹೀಗಾಗಿ ಇವರು ಇಲಿರಾಯನಿಗೆ ದೇವರ ಸ್ಥಾನಮಾನ ನೀಡುತ್ತಾರೆ. ಇಲಿರಾಯ ನಮ್ಮ ನೂಲು ಕಡಿಯದಿರಲಿ ಎಂದು ಪ್ರತಿ ವರ್ಷ ಗಣೇಶನ ಹಬ್ಬದ ಸಂದರ್ಭದಲ್ಲಿ 3 ದಿನಗಳ ಕಾಲ ಇಲಿರಾಯನ ಮೂರ್ತಿ ಕೂರಿಸಿ, ಪೂಜಿಸಿ, ಸಿಹಿ ಮಾಡಿ ನೇಕಾರ ಕುಟುಂಬದರವರೆಲ್ಲರೂ ಸಂಭ್ರಮಿಸುತ್ತಾರೆ.

ಇಲಿರಾಯ ನಮ್ಮ ನೂಲು ಕಡಿಯದಿರಲಿ ಎಂಬ ನಂಬಿಕೆ

ನೂಲು ಮುಟ್ಟುವ ಹಾಗಿಲ್ಲ: ಗಣೇಶನಂತೆ ಮಣ್ಣಿನಿಂದ ಮಾಡಿದ ಇಲಿರಾಯನ ಮೂರ್ತಿಯನ್ನು 3 ದಿನಗಳ ಕಾಲ ಮನೆಯಲ್ಲಿ ಕೂರಿಸಿ ಪ್ರತಿದಿನ ಕುಟುಂಬದವರೆಲ್ಲರೂ ಭಕ್ತಿಯಿಂದ ಪೂಜೆ ಮಾಡಿ, 3 ದಿನಗಳ ನಂತರ ಇಲಿರಾಯನನ್ನು ನೀರಿಗೆ ಬಿಡುತ್ತಾರೆ. ನೀರಲ್ಲಿ ಬಿಡುವಾಗ ಕಡುಬನ್ನು ಜತೆಗೆ ಬಿಟ್ಟು ಬರುತ್ತಾರೆ. ಇಲಿ ಮೂರ್ತಿ ಜತೆಗೆ ತಮಗೆ ಅನ್ನ ನೀಡುವ ಕೈಮಗ್ಗಕ್ಕೂ ಗಣೇಶನ ಹಬ್ಬದ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಾರೆ. ಆದರೆ ಯಾರೂ 3 ದಿನಗಳ ಕಾಲ ನೇಯ್ಗೆ ಮಾಡುವುದಿಲ್ಲ. ಪೂರ್ವಜರ ಕಾಲದಿಂದಲೂ ಇಂತಹ ಆಚರಣೆ ಮಾಡುತ್ತಾ ಬಂದಿದ್ದಾರೆ. ನೂಲು ನೇಯ್ಗೆಯಿಂದ ಜೀವನ ಸಾಗಿಸುವ ನೇಕಾರ ಕುಟುಂಬಗಳಿಗೆ ನೂಲಿನ ದರ ಹೆಚ್ಚಳ ಆಗುತ್ತಿದ್ದು, ನೇಯುವ ಕೂಲಿ ದರ ಕಡಿಮೆಯಾಗುತ್ತಿದ್ದರಿಂದ ಬಹುತೇಕ ನೇಕಾರರು ಈಗ ತಮ್ಮ ಕುಲಕಸುಬು ಬಿಟ್ಟು ಬೇರೆ ಉದ್ಯೋಗ ಆರಂಭಿಸಿದ್ದಾರೆ.

ನಾವ್ಯಾರೂ ಗಣೇಶನನ್ನ ಕೂರಿಸೋದಿಲ್ಲ ಸಾರ್..

ನಾವ್ಯಾರೂ ಗಣೇಶನನ್ನು ಕೂರಿಸೋದಿಲ್ಲ ಸಾರ್, ಇಲಿಚಪ್ಪನೇ ನಮ್ಗೆ ಶ್ರೇಷ್ಠ ದೇವ್ರು, ಗಣೇಶನ ಮೂರ್ತಿಯಂತೆ ಇಲಿಚಪ್ಪನ ಮೂರ್ತಿ ತಂದು 3 ದಿನ ಮನೆಯಲ್ಲಿ ಕೂಡ್ಸಿ ಕಡುಬು ಮಾಡಿ ಕಡುಬಿನ ಜತೆಗೇ ನೀರಲ್ಲಿ ಬಿಟ್ಟು ಬರ್ತೀವಿ. ಮೂರು ದಿನ ಯಾವ ನೇಕಾರರು ನೂಲು ಮುಟ್ಟೋದಿಲ್ಲ, ಕೈಮಗ್ಗದಲ್ಲಿ ಬಟ್ಟೆ ನೇಯೋದಿಲ್ಲ, ಒಂದು ವೇಳೆ ಬಟ್ಟೆ ನೇಯ್ದರೆ ಕೇಡು ಕಟ್ಟಿಟ್ಟ ಬುತ್ತಿ ಎಂದು ನೇಕಾರ ಸಮಾಜದ ಹಿರಿಯ ವೀರಣ್ಣ ತಿಳಿಸಿದ್ದಾರೆ.

ಕೂಡ್ಲಿಗಿ ತಾಲೂಕಿನ ಉಜ್ಜಿನಿ, ಬೆನಕನಹಳ್ಳಿ, ರಾಂಪುರ, ಹೊಸಹಳ್ಳಿ, ಹೂಡೇಂ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಾಗಿ ನಮ್ಮ ಸಮುದಾಯದ ಕುಟುಂಬಗಳು ವಾಸಿಸುತ್ತಿದ್ದು, ಪ್ರತಿವರ್ಷ ಗಣೇಶನ ಹಬ್ಬ ಬಂತೆಂದರೆ ನಾವು ಮಾತ್ರ ಅಂದು ಗಣೇಶನ ಕೂರಿಸುವ ದಿನವೇ ಗಣೇಶನ ಮೂರ್ತಿ ಬದಲಾಗಿ ಇಲಿಚಪ್ಪನ ಮೂರ್ತಿ ಎಲ್ಲರ ಮನೆಯಲ್ಲಿ ಮೂರು ದಿನ ಕೂರಿಸಿ ಅಡಿಮುಡಿಯಿಂದ ಪೂಜೆ ಸಲ್ಲಿಸಿ ಹಬ್ಬಆಚರಿಸುವುದು ಪರಂಪರೆಯಿಂದಲೂ ಬಂದಿದೆ ಎಂದು ಉಜ್ಜಿನಿಯ ನೇಕಾರ ಕುಟುಂಬದ ಯುವಕ ಅಣಜಿ ಭೀಮಣ್ಣ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಜಾತಕ ಸೆಪ್ಟೆಂಬರ್ 16: ಸಿಂಹ, ವೃಶ್ಚಿಕ ಮತ್ತು ಮಕರ ರಾಶಿಯವರಿಗೆ ಅದೃಷ್ಟ ಸಿಗುತ್ತದೆ, ಆರ್ಥಿಕ ಲಾಭದ ಜೊತೆಗೆ ಗೌರವ
ಗಣೇಶನ ಹಬ್ಬದಲ್ಲಿ ಮಕ್ಕಳ ಜೊತೆ ಮಿಂಚಿದ ಶಿಲ್ಪಾ ಶೆಟ್ಟಿ: ನಟಿಯ ಕ್ಯೂಟ್​ ವಿಡಿಯೋಸ್​ ವೈರಲ್​