ಗದಗದಲ್ಲಿ ವೀರೇಶ್ವರ ಪುಣ್ಯಾಶ್ರಮ ಜಾತ್ರೆ ಸಂಭ್ರಮ: ಮಳೆಯ ನಡುವೆ ರಥೋತ್ಸವಕ್ಕೆ ಭಕ್ತರ ಜಯಘೋಷ

Published : Jul 05, 2026, 11:50 PM IST
Festival

ಸಾರಾಂಶ

Gadag: ಇಲ್ಲಿನ ವೀರೇಶ್ವರ ಪುಣ್ಯಾಶ್ರಮದ ಜಾತ್ರೆ ಅಂದ್ರೆ ಅದು ಬರೀ ಜನ ಜಂಗುಳಿಯ ಜಾತ್ರೆಯಲ್ಲ. ಅದು ಸಂಗೀತದ ಜಾತ್ರೆ. ಕಲಾವಿದರ, ಕಲೆಯ ಸಂಭ್ರಮದ ಉತ್ಸವ‌. ಹೌದು! ಐದು ದಿನಗಳ ಕಾಲ ನಡೆಯುವ..

ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ

ಗದಗ (ಜು.05): ಇಲ್ಲಿನ ವೀರೇಶ್ವರ ಪುಣ್ಯಾಶ್ರಮದ ಜಾತ್ರೆ ಅಂದ್ರೆ ಅದು ಬರೀ ಜನ ಜಂಗುಳಿಯ ಜಾತ್ರೆಯಲ್ಲ. ಅದು ಸಂಗೀತದ ಜಾತ್ರೆ. ಕಲಾವಿದರ, ಕಲೆಯ ಸಂಭ್ರಮದ ಉತ್ಸವ‌. ಹೌದು! ಐದು ದಿನಗಳ ಕಾಲ ನಡೆಯುವ ಜಾತ್ರೆಯುದ್ದಕ್ಕೂ ಆದ್ಮ್ಯಾತ್ಮದ ಜೊತೆಗೆ ರಂಗಭೂಮಿ, ಹಿಂದೂಸ್ತಾನಿ ಸಂಗೀತದ ಘಮ ಪಸರಿಸಿರುತ್ತೆ. ಗಾನಗಂಧರ್ವ ಪಂಡಿತ ಪುಟ್ಟರಾಜರ ತಪೋ ಭೂಮಿ ಗದಗದಲ್ಲಿ ಈ ಬಾರಿ ಮಳೆ ಮಧ್ಯೆ ನಡೆದ ಜಾತ್ರೆ ವಿಶೇಷ ಅನುಭೂತಿ ನೀಡಿದೆ.

ಪ್ರತಿ ವರ್ಷ ಲಿಂಗೈಕ್ಯ ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಲಿಂಗೈಕ್ಯ ಪಂಡಿತ ಪುಟ್ಟರಾಜ ಕವಿಗವಾಯಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಈ ಜಾತ್ರೆ ನಡೆಸಲಾಗುತ್ತೆ. ಈ ಬಾರಿ ರಥ ಸಾಗುತ್ತಿದ್ದಂತೆ ಮಳೆಯ ಸಿಂಚನವಾಗಿದ್ದು ಭಕ್ತರನ್ನ ಪುಳಕಿತಗೊಳಿಸಿದೆ. ಜನ ರಥದತ್ತ ಉತ್ತತ್ತಿ ಎಸೆದು ಭಕ್ತಿ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಜೊತೆ ಮಾತನಾಡಿದ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು, ನಾಡಿಗೆ ಮಳೆ ಬೆಳೆಯೊಂದಿಗೆ ಸುಖ ಸಮೃದ್ಧಿ ಸಿಗಲಿ ಅಂತಾ ಪ್ರಾರ್ಥಿಸುತ್ತೇನೆ ಎಂದ್ರು‌.

ಪಂಚಾಕ್ಷರ ಗವಾಯಿಗಳು, ಪುಟ್ಟರಾಜ ಗವಾಯಿಗಳ ಗದ್ದಿಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದು ಗಮನ ಸೆಳೆಯುವಂತಿದೆ‌. ರಥ ಸಾಗಿ ಬಂದ ನಂತರ ನಿರಂತರ ಸಂಗೀತ ಸೇವೆ ಆರಂಭವಾಗುತ್ತೆ. ಅಂದ್ರೆ ಮರುದಿನ ಬೆಳಗಿನ ಜಾವದವರೆಗೂ ಅಖಂಡ ಸಂಗೀತ ಸೇವೆಯನ್ನ ನಾಡಿನ ಹೆಸರಾಂತ ಕಲಾವಿದರು ನಡೆಸಿಕೊಡುತ್ತಾರೆ. ಹಿಂದೂಸ್ತಾನಿ ಸಂಗೀತ ಕ್ಷೇತ್ರ ಹಾಗೂ ರಂಗಭೂಮಿಗೆ ವೀರೇಶ್ವರ ಪುಣ್ಯಾಶ್ರಮ ಮುತ್ತು ರತ್ನಗಳಂಥ ಕಲಾವಿದರನ್ನ ನೀಡಿ, ಪೋಷಿಸಿದೆ.

ಗಂಧರ್ವ ಲೋಕ ಸೃಷ್ಟಿ

ಹೀಗಾಗಿ ಈ ಜಾತ್ರೆಯಲ್ಲಿ ಕಲಾವಿದರ ದಂಡೆ ಹರಿದು ಬರುತ್ತದೆ. ಒಂದ್ಕಡೆ ಕಲಾಮೇಳಗಳ ಮಧ್ಯೆ ರಥ ಸಾಗ್ತಿದ್ರೆ ಮತ್ತೊಂದ್ಕಡೆ ಸಂಗೀತ ಕಲಾವಿದರು ತಮ್ಮ ಕಲೆಯನ್ನ ಪ್ರದರ್ಶನ ಮಾಡ್ತಾರೆ. ವೃತ್ತಿರಂಗ ಭೂಮಿಯ ದಿಗ್ಗಜ ಕಲಾವಿದರೂ ಜಾತ್ರೆಗೆ ಬಂದು ಸಂಭ್ರಮಿಸಿದರು. ಅಜ್ಜನ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಷ್ಟೇ ಅಲ್ದೆ ಮುಂಬೈ, ಪುಣೆ, ದೆಹಲಿ, ಕೊಲ್ಕತ್ತಾ, ಗೋವಾ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳ ಹೆಸರಾಂತ ಸಂಗೀತ ಕಲಾವಿದ್ರು, ಅಪಾರ ಸಂಖ್ಯೆಯ ಭಕ್ತರು ಆಗಮಿಸ್ತಾರೆ. ಕಲಾವಿದರ ಸಂಚಾರದಿಂದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಂಧರ್ವ ಲೋಕ ಸೃಷ್ಟಿಯಾಗಿರುತ್ತೆ.

PREV
Read more Articles on
click me!

Recommended Stories

ಅಕ್ಟೋಬರ್ ಅಂತ್ಯದವರೆಗೆ ಗುರು ಮತ್ತು ರಾಹುವಿನ ಬಲದಿಂದ ಈ 6 ರಾಶಿಗೆ ಸುವರ್ಣ ಸಮಯ
ಪ್ರೇಮ ದೃಷ್ಟಿ ರಾಜಯೋಗದಿಂದ 4 ರಾಶಿಗೆ ದೊಡ್ಡ ಯಶಸ್ಸು, ಜುಲೈನಲ್ಲಿ ಬುಧ ಮತ್ತು ಶುಕ್ರರ ಸಂಯೋಗ