
2026ರ ಆಗಸ್ಟ್ 28ರ ಶುಕ್ರವಾರದಂದು (ಶ್ರಾವಣ ಹುಣ್ಣಿಮೆ) ದೇಶಾದ್ಯಂತ ಪವಿತ್ರ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ವಿಶೇಷವೆಂದರೆ, ಇದೇ ದಿನದಂದು ವರ್ಷದ ಕೊನೆಯ ಚಂದ್ರಗ್ರಹಣವೂ ಸಂಭವಿಸುತ್ತಿದೆ. ಕುಂಭ ರಾಶಿ ಮತ್ತು ಶತಭಿಷ ನಕ್ಷತ್ರದಲ್ಲಿ ಸಂಭವಿಸುವ ಈ ಗ್ರಹಣವು ರಕ್ಷಾಬಂಧನದ ಆಚರಣೆಯ ಮೇಲೆ ಪರಿಣಾಮ ಬೀರಲಿದೆಯೇ, ರಾಖಿ ಕಟ್ಟಲು ಸೂಕ್ತ ಸಮಯ ಯಾವುದು ಎಂಬ ಗೊಂದಲ ಅನೇಕರಲ್ಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಗಸ್ಟ್ 28ರಂದು ನಡೆಯುವ ಚಂದ್ರಗ್ರಹಣವು 'ಪೆನಂಬ್ರಲ್ ಚಂದ್ರಗ್ರಹಣ' (ಬ್ಲಡ್ ಮೂನ್) ಆಗಿರಲಿದೆ. ಚಂದ್ರನು ತಾಮ್ರ ಅಥವಾ ಗಾಢ ಕೆಂಪು ಬಣ್ಣದಲ್ಲಿ ಕಂಗೊಳಿಸಲಿದ್ದಾನೆ.
ಎಲ್ಲಿ ಗೋಚರ?; ನೈಋತ್ಯ ಏಷ್ಯಾ (ಪಾಕಿಸ್ತಾನ, ಇರಾನ್, ಸೌದಿ ಅರೇಬಿಯಾ ಇತ್ಯಾದಿ), ಅಮೆರಿಕ, ಯುರೋಪ್, ಆಫ್ರಿಕಾ ಮತ್ತು ಪೆಸಿಫಿಕ್ ಮಹಾಸಾಗರ ಪ್ರದೇಶಗಳಲ್ಲಿ ಇದು ಕಾಣಿಸಲಿದೆ.
ಭಾರತದಲ್ಲಿ ಸ್ಥಿತಿ; ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಭಾರತೀಯ ಕಾಲಮಾನದ ಪ್ರಕಾರ ಗ್ರಹಣದ ಸಮಯ;
ಗ್ರಹಣ ಆರಂಭ; ಬೆಳಿಗ್ಗೆ 8;04
ಮಧ್ಯದ ಅವಧಿ; ಬೆಳಿಗ್ಗೆ 9;43
ಗ್ರಹಣ ಮುಕ್ತಾಯ; ಬೆಳಿಗ್ಗೆ 11:22
ಒಟ್ಟು ಅವಧಿ; 3 ಗಂಟೆ 18 ನಿಮಿಷ.
ಸೂತಕ ನಿಯಮ; ಈ ಗ್ರಹಣವು ಭಾರತದಲ್ಲಿ ಕಾಣಿಸದಿರುವುದರಿಂದ, ಇಲ್ಲಿ ಯಾವುದೇ ಸೂತಕ ಕಾಲ ಅನ್ವಯಿಸುವುದಿಲ್ಲ. ದೇವಸ್ಥಾನಗಳ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ಅಡೆತಡೆ ಇರುವುದಿಲ್ಲ.
ಸಾಮಾನ್ಯವಾಗಿ ರಕ್ಷಾಬಂಧನದಂದು 'ಭದ್ರಕಾಳ'ನ ನೆರಳು ಇದ್ದರೆ ರಾಖಿ ಕಟ್ಟುವುದಿಲ್ಲ. ಆದರೆ ಈ ಬಾರಿ ಹಬ್ಬದ ದಿನ ಯಾವುದೇ ಭದ್ರ ದೋಷ ಇರುವುದಿಲ್ಲ! ಭದ್ರಕಾಳದ ಸಮಯವು ಹಬ್ಬದ ಹಿಂದಿನ ದಿನವೇ, ಅಂದರೆ ಆಗಸ್ಟ್ 27ರ ಬೆಳಿಗ್ಗೆ 9:08 ರಿಂದ ರಾತ್ರಿ 9:32 ರವರೆಗೆ ಮುಗಿದುಹೋಗುತ್ತದೆ. ಆದ್ದರಿಂದ, ಆಗಸ್ಟ್ 28ರಂದು ಸೂರ್ಯೋದಯದ ನಂತರ ಇಡೀ ದಿನ ಯಾವುದೇ ಅಡೆತಡೆಯಿಲ್ಲದೆ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಬಹುದು. ಶುಭ ಮುಹೂರ್ತದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಏನು ಮಾಡಬೇಕು?; ಬೆಳಿಗ್ಗೆ ಸ್ನಾನ ಮುಗಿಸಿ ದೇವರ ಪೂಜೆ ನೆರವೇರಿಸಿ. ಸಹೋದರನಿಗೆ ಆರತಿ ಬೆಳಗಿ, ರಕ್ಷಾಸೂತ್ರ (ರಾಖಿ) ಕಟ್ಟಿ ದೀರ್ಘಾಯುಷ್ಯಕ್ಕೆ ಪ್ರಾರ್ಥಿಸಿ. ಈ ಶುಭ ದಿನದಂದು ಶಕ್ತಿಗನುಸಾರ ಬಡವರಿಗೆ ಹಾಗೂ ಅಗತ್ಯವಿರುವವರಿಗೆ ಅನ್ನ, ವಸ್ತ್ರ ಅಥವಾ ದಾನ ಧರ್ಮ ಮಾಡುವುದು ಶ್ರೇಷ್ಠ.
ಭಾರತದಲ್ಲಿ ಗ್ರಹಣ ಕಾಣಿಸದಿರುವುದರಿಂದ ಯಾವುದೇ ದೈನಂದಿನ ಧಾರ್ಮಿಕ ಆಚರಣೆಗಳನ್ನು ನಿಲ್ಲಿಸುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಗ್ರಹಣ ಹಾಗೂ ಸೂತಕದ ವದಂತಿಗಳನ್ನು ನಂಬಿ ಗೊಂದಲಕ್ಕೊಳಗಾಗಬೇಡಿ.