ಕೃಷ್ಣ ಜನ್ಮಾಷ್ಟಮಿ: ನಮ್ಮೊಳಗೆ ಕೃಷ್ಣ ಹುಟ್ಟುವ ಹಬ್ಬ

Published : Sep 04, 2026, 08:38 AM IST
Krishna Janmashtami

ಸಾರಾಂಶ

ಶ್ರೀಕೃಷ್ಣ ಜನ್ಮಾಷ್ಟಮಿಯು ಕೇವಲ ಹಬ್ಬವಲ್ಲ, ಅದು ನಮ್ಮೊಳಗಿನ ಅಜ್ಞಾನ, ಭಯ ಮತ್ತು ಅಧರ್ಮದ ಕಾರಾಗೃಹದಲ್ಲಿ ವಿವೇಕ ಮತ್ತು ಧರ್ಮ ಹುಟ್ಟಬೇಕಾದ ದಿನ. ಕೃಷ್ಣನ ಜೀವನವು ಸಂಕೀರ್ಣತೆಯ ಮಧ್ಯೆ ಧರ್ಮವನ್ನು ಹುಡುಕುವ ದರ್ಶನವನ್ನು ನೀಡುತ್ತದೆ.

ಕುಮಾರ ಸುಬ್ರಹ್ಮಣ್ಯ ಮುಳಿಯಾಲ

ಮಧ್ಯರಾತ್ರಿಯ ನಿಶ್ಶಬ್ದದಲ್ಲಿ ಒಂದು ಮಗು ಹುಟ್ಟುತ್ತದೆ. ಆದರೆ ಆ ಮಗು ಹುಟ್ಟಿದ್ದು ಅರಮನೆಯ ಬೆಳಕಿನಲ್ಲಿ ಅಲ್ಲ; ಕಾರಾಗೃಹದ ಕತ್ತಲೆಯಲ್ಲಿ. ಹೊರಗೆ ಅಧಿಕಾರದ ಅಹಂಕಾರ, ಒಳಗೆ ಭಯದ ಬಂಧನ; ಸುತ್ತಲೂ ಅಧರ್ಮದ ಆರ್ಭಟ. ಅಂತಹ ಕತ್ತಲೆಯ ನಡುವೆ ಕೃಷ್ಣ ಹುಟ್ಟುತ್ತಾನೆ. ಇದು ಸಾವಿರಾರು ವರ್ಷಗಳ ಹಿಂದಿನ ಒಂದು ಪೌರಾಣಿಕ ಘಟನೆ ಎಂದು ಓದಿ ಮುಗಿಸಬಹುದೇ? ಇಲ್ಲ. ಕೃಷ್ಣನ ಜನನ ಪ್ರತಿಯೊಂದು ಯುಗಕ್ಕೂ, ಪ್ರತಿಯೊಬ್ಬ ಮನುಷ್ಯನಿಗೂ ಒಂದು ಗಂಭೀರ ಸಂದೇಶ ನೀಡುತ್ತದೆ-ಕತ್ತಲೆ ಎಷ್ಟೇ ಗಾಢವಾಗಿದ್ದರೂ ಬೆಳಕು ಹುಟ್ಟುವುದನ್ನು ತಡೆಯಲು ಸಾಧ್ಯವಿಲ್ಲ; ಅನ್ಯಾಯ ಎಷ್ಟೇ ಬಲಿಷ್ಠವಾಗಿದ್ದರೂ ಧರ್ಮದ ಚೈತನ್ಯವನ್ನು ಶಾಶ್ವತವಾಗಿ ಬಂಧಿಸಲು ಸಾಧ್ಯವಿಲ್ಲ. ಆದ್ದರಿಂದ ಕೃಷ್ಣ ಜನ್ಮಾಷ್ಟಮಿ ಎಂದರೆ ಕೇವಲ ಕೃಷ್ಣ ಹುಟ್ಟಿದ ದಿನವಲ್ಲ; ನಮ್ಮೊಳಗಿನ ಅಜ್ಞಾನ, ಭಯ, ಅಹಂಕಾರ ಮತ್ತು ಅಧರ್ಮದ ಕಾರಾಗೃಹದಲ್ಲಿ ಜ್ಞಾನ, ವಿವೇಕ, ಪ್ರೀತಿ ಮತ್ತು ಧರ್ಮ ಹುಟ್ಟಬೇಕಾದ ದಿನ.

ಭಾರತೀಯ ಸಂಸ್ಕೃತಿಯ ಹಬ್ಬಗಳು ಕೇವಲ ಆಚರಣೆಗಳಲ್ಲ; ಅವು ಬದುಕಿನ ದರ್ಶನವನ್ನು ಸಾರುವ ಸಾಂಸ್ಕೃತಿಕ ಸಂಕೇತಗಳು. ಅಂತಹ ವಿಶಿಷ್ಟ ಹಬ್ಬಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ವಿಶೇಷ ಸ್ಥಾನವಿದೆ. ಕೃಷ್ಣನ ಜನ್ಮವನ್ನು ಸ್ಮರಿಸುವ ಈ ಹಬ್ಬವು ಭಕ್ತಿ ಮತ್ತು ಸಂಪ್ರದಾಯದ ಆಚರಣೆಯ ಜೊತೆಗೆ ಮನುಷ್ಯನ ಅಂತರಂಗವನ್ನು ಪ್ರಶ್ನಿಸುವ, ಸಮಾಜದ ಮೌಲ್ಯಗಳನ್ನು ಪರಿಶೀಲಿಸುವ ಮತ್ತು ಧರ್ಮದ ಅರ್ಥವನ್ನು ಅರಿಯುವ ಅವಕಾಶವೂ ಹೌದು.

ಕೃಷ್ಣ ಹುಟ್ಟಿದ್ದು ಕಂಸನ ಕಾರಾಗೃಹದ ಕತ್ತಲೆಯಲ್ಲಿ. ಕಾರಾಗೃಹ ಇಲ್ಲಿ ಕೇವಲ ಒಂದು ಸ್ಥಳವಲ್ಲ; ಅದು ಬಂಧನದ ಸಂಕೇತ. ಅಜ್ಞಾನ, ಭಯ, ಅಹಂಕಾರ, ದ್ವೇಷ, ಸ್ವಾರ್ಥ ಮತ್ತು ಅನ್ಯಾಯಗಳು ಮನುಷ್ಯನ ಅಂತರಂಗದ ಕಾರಾಗೃಹಗಳು. ಅಂತಹ ಕತ್ತಲೆಯೊಳಗೆ ಜ್ಞಾನ, ವಿವೇಕ, ಧರ್ಮ ಮತ್ತು ಚೈತನ್ಯದ ಬೆಳಕು ಮೂಡುವುದೇ ಕೃಷ್ಣಜನ್ಮದ ತಾತ್ವಿಕ ಅರ್ಥ.

ಕೃಷ್ಣ ಎಂದರೆ ಒಂದು ಜೀವನ ದರ್ಶನ

ಕೃಷ್ಣನನ್ನು ಕೇವಲ ದೇವಾಲಯದ ಮೂರ್ತಿಯಾಗಿ ಅರ್ಥಮಾಡಿಕೊಳ್ಳುವುದು ಅವರ ಬಹುಮುಖ ವ್ಯಕ್ತಿತ್ವವನ್ನು ಸೀಮಿತಗೊಳಿಸಿದಂತಾಗುತ್ತದೆ. ಬಾಲಕೃಷ್ಣನಲ್ಲಿ ಆನಂದವಿದೆ; ಗೋಕುಲದಲ್ಲಿ ಪ್ರಕೃತಿಯೊಂದಿಗೆ ಸಹಜೀವನವಿದೆ; ಸ್ನೇಹದಲ್ಲಿ ನಿಷ್ಠೆಯಿದೆ; ರಾಜತಾಂತ್ರಿಕತೆಯಲ್ಲಿ ವಿವೇಕವಿದೆ; ಮಹಾಭಾರತದಲ್ಲಿ ಧರ್ಮದ ಸೂಕ್ಷ್ಮತೆಯ ಅರಿವಿದೆ; ಕುರುಕ್ಷೇತ್ರದಲ್ಲಿ ಸಾರಥಿಯಾಗಿ ಸೇವೆಯಿದೆ; ಭಗವದ್ಗೀತೆಯಲ್ಲಿ ಮಾನವಕುಲಕ್ಕೆ ಜೀವನದರ್ಶನವಿದೆ.

ಕೃಷ್ಣ ಎಂದರೆ ಜೀವನದಿಂದ ಪಲಾಯನವಲ್ಲ; ಜೀವನದ ಸಂಕೀರ್ಣತೆಯ ಮಧ್ಯೆಯೇ ಧರ್ಮವನ್ನು ಹುಡುಕುವ ವಿವೇಕ.

ಭಗವದ್ಗೀತೆಯ ‘ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ’ ಎಂಬ ಘೋಷಣೆ ಧರ್ಮದ ಪುನಃಸ್ಥಾಪನೆಯ ಸಂದೇಶವನ್ನು ಸಾರುತ್ತದೆ. ಇಲ್ಲಿ ಧರ್ಮವೆಂದರೆ ಕೇವಲ ಧಾರ್ಮಿಕ ಆಚರಣೆ ಅಥವಾ ಮತಪಂಥವಲ್ಲ; ಸತ್ಯ, ನ್ಯಾಯ, ಕರ್ತವ್ಯ, ಮಾನವೀಯತೆ ಮತ್ತು ಸಮತೋಲನವನ್ನು ಕಾಪಾಡುವ ಜೀವನಮೌಲ್ಯ.

ಗೋಕುಲದಿಂದ ಗೋವರ್ಧನವರೆಗೆ

ಕೃಷ್ಣನ ಗೋಕುಲದ ಬದುಕು ಮನುಷ್ಯ, ಪ್ರಾಣಿ, ಪ್ರಕೃತಿ ಮತ್ತು ಸಮುದಾಯಗಳ ಪರಸ್ಪರ ಅವಲಂಬಿತ ಜೀವನ ವ್ಯವಸ್ಥೆಯನ್ನು ನೆನಪಿಸುತ್ತದೆ. ಗೋವರ್ಧನ ಲೀಲೆಯನ್ನು ಭಕ್ತಿಯ ಜೊತೆಗೆ ಪರಿಸರದ ದೃಷ್ಟಿಯಿಂದಲೂ ನೋಡಬಹುದು. ಪರ್ವತ, ಗೋವು, ಮಳೆ, ಕೃಷಿ ಮತ್ತು ಗ್ರಾಮೀಣ ಬದುಕಿನ ಮಹತ್ವವನ್ನು ಸಾರುವ ಈ ಪ್ರಸಂಗ, ಪ್ರಕೃತಿಯನ್ನು ಕೇವಲ ಉಪಭೋಗಿಸುವ ವಸ್ತುವಾಗಿ ನೋಡದೆ ಗೌರವಿಸುವ ಭಾರತೀಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಇಂದಿನ ಪರಿಸರ ನಾಶ ಮತ್ತು ಜಲಸಂಕಷ್ಟದ ಸಂದರ್ಭದಲ್ಲಿ ಕೃಷ್ಣನ ಸಂದೇಶ ಮತ್ತಷ್ಟು ಪ್ರಸ್ತುತ: ‘ಪ್ರಕೃತಿಯನ್ನು ಗೆಲ್ಲುವುದಲ್ಲ; ಪ್ರಕೃತಿಯೊಂದಿಗೆ ಬದುಕುವುದೇ ನಿಜವಾದ ಪ್ರಗತಿ.’

ಸ್ನೇಹ, ಪ್ರೇಮ ಮತ್ತು ನಾಯಕತ್ವ

ಕೃಷ್ಣ-ಸುದಾಮರ ಸ್ನೇಹವು ಸಂಪತ್ತು, ಸ್ಥಾನಮಾನ ಮತ್ತು ಅಧಿಕಾರವನ್ನು ಮೀರಿದ ಆತ್ಮೀಯತೆಯ ಪ್ರತೀಕ. ನಿಜವಾದ ಸ್ನೇಹವು ಸಮಾನ ಸಂಪತ್ತಿನಲ್ಲಿ ಅಲ್ಲ; ಸಮಾನ ಹೃದಯದಲ್ಲಿ ಹುಟ್ಟುತ್ತದೆ. ರಾಸಲೀಲೆಯನ್ನು ಭಕ್ತಿಪರಂಪರೆಯಲ್ಲಿ ಜೀವಾತ್ಮ-ಪರಮಾತ್ಮ ಸಂಬಂಧದ ಸಂಕೇತವಾಗಿ ಕಾಣಲಾಗಿದೆ. ಸ್ವಾರ್ಥ ಮತ್ತು ಅಹಂಕಾರವನ್ನು ಮೀರಿ ಪರಮತತ್ತ್ವದಲ್ಲಿ ಲೀನವಾಗುವ ಭಕ್ತಿಭಾವವೇ ಅದರ ಅಂತರಂಗ. ಮಹಾಭಾರತದ ಕೃಷ್ಣ ಮತ್ತೊಂದು ಪಾಠ ಕಲಿಸುತ್ತಾನೆ. ಯುದ್ಧಕ್ಕೂ ಮುನ್ನ ಶಾಂತಿಗಾಗಿ ಸಂಧಾನದ ಪ್ರಯತ್ನ ಮಾಡಿದನು. ಆದರೆ ಅಧರ್ಮವು ನ್ಯಾಯವನ್ನು ನಿರಾಕರಿಸಿದಾಗ ಧರ್ಮದ ಪರವಾಗಿ ನಿಂತನು. ಹೀಗಾಗಿ, ಶಾಂತಿ ಎಂದರೆ ಅನ್ಯಾಯದ ಮುಂದೆ ಮೌನವಾಗಿರುವುದಲ್ಲ; ನ್ಯಾಯದ ಮೇಲೆ ನಿಂತಿರುವುದೇ ನಿಜವಾದ ಶಾಂತಿ. ಅರ್ಜುನನ ರಥವನ್ನು ನಡೆಸಿದ ಕೃಷ್ಣ ನಾಯಕತ್ವಕ್ಕೂ ಹೊಸ ವ್ಯಾಖ್ಯಾನ ನೀಡಿದನು. ನಿಜವಾದ ನಾಯಕತ್ವ ಅಧಿಕಾರ ಪ್ರದರ್ಶಿಸುವುದಲ್ಲ; ಅಗತ್ಯವಿದ್ದಾಗ ಇತರರ ಗುರಿಯತ್ತ ಅವರನ್ನು ಮುನ್ನಡೆಸಲು ಸೇವೆ ಮಾಡುವುದು.

ಗೀತೆಯ ಬೆಳಕು

‘ಕರ್ಮಣ್ಯೇವಾಧಿಕಾರಸ್ತೇ, ಮಾ ಫಲೇಷು ಕದಾಚನ’ ಎಂಬ ಗೀತೆಯ ಸಂದೇಶ ಕರ್ತವ್ಯದ ಮಹತ್ವವನ್ನು ಸಾರುತ್ತದೆ. ಫಲದ ಮೇಲಿನ ಅತಿಯಾದ ಆಸಕ್ತಿಯಿಂದ ಕರ್ತವ್ಯದಿಂದ ವಿಚಲಿತರಾಗಬಾರದು ಎಂಬುದು ಕರ್ಮಯೋಗದ ಮೂಲಭಾವ. ‘ಸಮತ್ವಂ ಯೋಗ ಉಚ್ಯತೇ’ ಎಂಬ ಸಂದೇಶ ಯಶಸ್ಸು-ವಿಫಲತೆ, ಲಾಭ-ನಷ್ಟ, ಜಯ-ಪರಾಜಯಗಳ ನಡುವೆ ಮನಸ್ಸಿನ ಸಮತೋಲನವನ್ನು ಕಾಪಾಡುವ ಮಹತ್ವವನ್ನು ತಿಳಿಸುತ್ತದೆ. ಇಂದಿನ ಒತ್ತಡ, ಸ್ಪರ್ಧೆ ಮತ್ತು ಅಸಮಾಧಾನದ ಬದುಕಿನಲ್ಲಿ ಗೀತೆಯ ಈ ಜೀವನಶಾಸ್ತ್ರ ಇನ್ನಷ್ಟು ಪ್ರಸ್ತುತವಾಗಿದೆ.

ಆಚರಣೆಯಿಂದ ಆತ್ಮಚಿಂತನೆಯವರೆಗೆ

ಜನ್ಮಾಷ್ಟಮಿಯ ಉಪವಾಸವು ಇಂದ್ರಿಯ ನಿಗ್ರಹದ ಸಂಕೇತ; ಜಾಗರಣೆ ಅಜ್ಞಾನದಿಂದ ಜಾಗೃತಿಯ ಸಂಕೇತ; ಬಾಲಕೃಷ್ಣ ನಿರ್ಮಲತೆ ಮತ್ತು ಆನಂದದ ಸಂಕೇತ; ಭಜನೆ ಸಮೂಹ ಚೈತನ್ಯದ ಅಭಿವ್ಯಕ್ತಿ; ಮೊಸರು ಕುಡಿಕೆ ಒಗ್ಗಟ್ಟು, ಸಹಕಾರ ಮತ್ತು ಸಾಮೂಹಿಕ ಪ್ರಯತ್ನದ ಪ್ರತೀಕ. ಆದರೆ ಆಚರಣೆ ಅರ್ಥಪೂರ್ಣವಾಗುವುದು ಅದರ ಹಿಂದಿನ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ. ಇಂದು ನಮಗೆ ಕೇವಲ ಕೃಷ್ಣನ ಚಿತ್ರ ಅಥವಾ ಮೂರ್ತಿ ಬೇಕಾಗಿಲ್ಲ; ಕೃಷ್ಣನ ಚಿಂತನೆ ಬೇಕಾಗಿದೆ. ನಮ್ಮ ಕರ್ತವ್ಯದಲ್ಲಿ ಕರ್ಮಯೋಗ, ನಿರ್ಧಾರಗಳಲ್ಲಿ ವಿವೇಕ, ಸಂಬಂಧಗಳಲ್ಲಿ ಸ್ನೇಹ, ಸಮಾಜದಲ್ಲಿ ಧರ್ಮಬುದ್ಧಿ ಮತ್ತು ಪ್ರಕೃತಿಯೊಂದಿಗೆ ಸಹಜೀವನ ,ಇವುಗಳು ಜೀವಂತವಾಗಬೇಕು. ಕೃಷ್ಣನು ಕಾರಾಗೃಹದಲ್ಲಿ ಹುಟ್ಟಿದನು; ಆದರೆ ಅಲ್ಲೇ ಉಳಿಯಲಿಲ್ಲ. ಗೋಕುಲಕ್ಕೆ ಹೋದನು, ಅನ್ಯಾಯವನ್ನು ಎದುರಿಸಿದನು, ದ್ವಾರಕೆಯನ್ನು ನಿರ್ಮಿಸಿದನು, ಕುರುಕ್ಷೇತ್ರದಲ್ಲಿ ಸಾರಥಿಯಾದನು ಮತ್ತು ಗೀತೆಯ ಮೂಲಕ ಮಾನವಕುಲದ ಚಿಂತನೆಯೊಳಗೆ ಪ್ರವೇಶಿಸಿದನು.

ಆದ್ದರಿಂದ ಕೃಷ್ಣಜನ್ಮಾಷ್ಟಮಿ ಕೇವಲ ಪೌರಾಣಿಕ ಜನ್ಮದ ಸ್ಮರಣೆಯಲ್ಲ. ನಮ್ಮೊಳಗಿನ ಅಜ್ಞಾನದಲ್ಲಿ ಜ್ಞಾನದ ಜನನವಾಗಬೇಕು. ಭಯದಲ್ಲಿ ಧೈರ್ಯದ ಜನನವಾಗಬೇಕು. ಸ್ವಾರ್ಥದಲ್ಲಿ ಸೇವೆಯ ಜನನವಾಗಬೇಕು. ದ್ವೇಷದಲ್ಲಿ ಪ್ರೀತಿಯ ಜನನವಾಗಬೇಕು. ಅಧರ್ಮದಲ್ಲಿ ಧರ್ಮದ ಜನನವಾಗಬೇಕು. ಅದೇ ನಿಜವಾದ ಕೃಷ್ಣಜನ್ಮ. ಪ್ರತಿ ವರ್ಷ ಕೃಷ್ಣನ ಜನನವನ್ನು ಆಚರಿಸುವ ನಾವು ಒಮ್ಮೆ ನಮ್ಮೊಳಗೆ ಪ್ರಶ್ನಿಸಿಕೊಳ್ಳೋಣ: ‘ಕೃಷ್ಣ ನಮ್ಮ ಮನೆಯಲ್ಲಿ ಮಾತ್ರ ಹುಟ್ಟಿದ್ದಾನೆಯೇ? ಅಥವಾ ನಮ್ಮ ಹೃದಯದಲ್ಲೂ ಹುಟ್ಟಿದ್ದಾನೆಯೇ?’ ಆ ಪ್ರಶ್ನೆಗೆ ನಮ್ಮ ಜೀವನವೇ ಉತ್ತರವಾಗುವ ದಿನವೇ ನಿಜವಾದ ಶ್ರೀಕೃಷ್ಣ ಜನ್ಮಾಷ್ಟಮಿ.

ಕೃಷ್ಣಾರ್ಪಣಮಸ್ತು.

PREV
Read more Articles on
click me!

Recommended Stories

ಜನ್ಮಾಷ್ಟಮಿ ಸಮಯದಲ್ಲಿ ಮೊಸರು ಕುಡಿಕೆ ಆಡೋದ್ಯಾಕೆ? ಇದರ ಹಿಂದಿನ ಸ್ವಾರಸ್ಯಕರ ಕಥೆ ಗೊತ್ತಾ?
Krishna Janmashtami Wishes in Kannada 2026: ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು