Uttara Kannada ಗಣಪ ಬರಲು ರೆಡಿ, ಸ್ವಾಗತಕ್ಕೆ ಭರ್ಜರಿ ಸಿದ್ಧತೆ

By Suvarna News  |  First Published Aug 28, 2022, 11:27 PM IST

ದೇಶದಾದ್ಯಂತ ವಿಘ್ನವಿನಾಶಕನನ್ನು ಬರ ಮಾಡಿಕೊಳ್ಳಲು ಅದ್ಧೂರಿ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಜನರು ಕೂಡಾ ತಾವೇನೂ ಕಡಿಮೆ ಇಲ್ಲಾಂತ ಗಣೇಶನ ಉತ್ಸವಕ್ಕಾಗಿ ಸರ್ವ ವ್ಯವಸ್ಥೆಗಳನ್ನು ಕೂಡಾ ನಡೆಸುತ್ತಿದ್ದು, ಈ ಬಾರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಣಿಯಾಗಿದ್ದಾರೆ. 


ವರದಿ: ಭರತ್‌ರಾಜ್ ಕಲ್ಲಡ್ಕ

ಕಾರವಾರ, (ಆಗಸ್ಟ್.28): ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬಕ್ಕಾಗಿ ಕ್ಷಣಗಣನೆ ಆರಂಭವಾಗಿದ್ದು, ಭರ್ಜರಿ ತಯಾರಿಗಳು ನಡೆದಿವೆ. ಕಳೆದೆರಡು ವರ್ಷಗಳಿಂದ ಗಣೇಶನ ಹಬ್ಬಕ್ಕೆ ಕೊರೊನಾ‌ ಕರಿಛಾಯೆ ಬಿದ್ದದ್ದರಿಂದ ಈ ಬಾರಿಯಂತೂ ಜನರು ಸಂಭ್ರಮದಿಂದ ಆಚರಿಸಲು ಅಣಿಯಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಮೂರ್ತಿ ರಚನೆಯಲ್ಲಿ ತೊಡಗಿದ್ದ ಕಲಾವಿದರು ಫೈನಲ್ ಟಚ್ ನೀಡುವ ಮೂಲಕ ಗಣಪತಿಯ ಮೂರ್ತಿಯನ್ನು ಸಂಬಂಧಪಟ್ಟವರಿಗೆ ಬಿಟ್ಟುಕೊಡುವ ವ್ಯವಸ್ಥೆ ನಡೆಸುತ್ತಿದ್ದು, ಕೆಲವರಂತೂ ಈಗಾಗಲೇ ಮುಂಚಿತವಾಗಿ ವಿನಾಯಕನನ್ನು ಬರಮಾಡಿಕೊಳ್ಳುತ್ತಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

Tap to resize

Latest Videos

ಕಳೆದ‌ ಎರಡು ವರ್ಷಗಳಿಂದ ಕೊರೊನಾ ಕರಿಛಾಯೆಯಿಂದಾಗಿ ಗಣೇಶನ ಹಬ್ಬ ರಂಗೇರಿರಲಿಲ್ಲ. ಈ ಕಾರಣದಿಂದ ಈ ಸಾಲಿನ ಚೌತಿ ಹಬ್ಬದ ಮೂಲಕ ಜನರು ಗಣೇಶನಿಗೆ ಸಂಭ್ರಮದ ಸ್ವಾಗತ ನೀಡುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಜಿಲ್ಲೆಯ ಕಾರವಾರ, ಭಟ್ಕಳ, ಕುಮಟಾ, ಶಿರಸಿ, ಹಳಿಯಾಳ, ಹೊನ್ನಾವರ ಸೇರಿದಂತೆ ವಿವಿಧೆಡೆ ಕಲಾವಿದು ತಮ್ಮತಮ್ಮ ಕಲಾ ಕೇಂದ್ರದಲ್ಲಿ ವಿಭಿನ್ನವಾಗಿ ಮಣ್ಣಿನ ಮೂರ್ತಿ ರಚಿಸಿದ್ದಾರೆ. 

ಗಣೇಶ ಪ್ರತಿಷ್ಠಾಪನೆಯ ವಿಧಿ- ವಿಧಾನಗಳೇನು?

ಕಾರವಾರದ ನದಿವಾಡದಲ್ಲಿ ವಿಷ್ಣುವರ್ಧನ ಮೋರ್ಜೆ ಎಂಬವರು ವಿವಿಧ ಹಣ್ಣು ಹಂಪಲುಗಳ ಜತೆ ಗಣೇಶನ ಮಣ್ಣಿನ ಮೂರ್ತಿ ಮಾಡಿ ಗಮನ ಸೆಳೆದಿದ್ದಾರೆ. ಬಾಹುಬಲಿ ವೇಷ, ಚಿಕ್ಕ ಗಣಪ, ವಿರಾಜಮಾನ ವಿನಾಯಕ, ಬಾಲ ಗಣಪ, ಇಲಿ, ಹಾವು, ಹುಲಿ, ಹೂವುಗಳ ಮೇಲೆ ಕುಳಿತಿರುವ ಗಣಪ ಮುಂತಾದವುಗಳನ್ನು ಗ್ರಾಹಕರ ಬೇಡಿಕೆಯಂತೆ ತಯಾರು ಮಾಡಿದ್ದಾರೆ. ಯಾವುದೇ ರಾಸಾಯನಿಕ ಬಳಸದೇ ಶುದ್ದ ಜೇಡಿ ಮಣ್ಣಿನಿಂದ ಇವರು ಈ ಬಾರೀ ಒಟ್ಟು 91 ಮೂರ್ತಿಗಳನ್ನು ನಿರ್ಮಾಣ ಮಾಡಿದ್ದು,  ಕೃತಕ ಆಭರಣಗಳನ್ನು ಜೋಡಿಸಿ ಗಣಪನ ಮೂರ್ತಿಗಳನ್ನು ಹೊಳೆಯುವಂತೆ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಸಮಯ ತೆಗೆದುಕೊಂಡು ನಿರ್ಮಿಸಿದ ಮೂರ್ತಿಗಳೆಲ್ಲಾ ತಯಾರಾಗಿದ್ದು, ಪ್ರಸ್ತುತ ಅವುಗಳಿಗೆ ಕೃತಕ ಆಭರಣಗಳನ್ನು ಜೋಡಿಸುವ ಮೂಲಕ ಫೈನಲ್ ಟಚ್ ನೀಡಲಾಗುತ್ತಿದೆ. ಇದಕ್ಕೆ ವಿಷ್ಣುವರ್ಧನ ಅವರ ಕುಟುಂಬ ಸದಸ್ಯರು, ಸ್ಥಳೀಯ ಯುವಕರು ಸಾಥ್ ನೀಡುತ್ತಿದ್ದಾರೆ.

ಅಂದಹಾಗೆ, ವಿಷ್ಣುವರ್ಧನ್ ಅವರು ಕಳೆದ 30 ವರ್ಷಗಳಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದು, ಅವರ ತಂದೆ ರಾಮ ಅವರು ಮಾಡುತ್ತಿದ್ದ ಕಲೆಯನ್ನು ಇವರು ಮುಂದುವರಿಸುತ್ತಿದ್ದಾರೆ. ಪ್ರತೀ ವರ್ಷ ಇವರಿಗೆ ಮೂರ್ತಿ ತಯಾರಿಕೆಗೆ ಬೇಡಿಕೆಗಳು ಹೆಚ್ಚಾಗುತ್ತಿದ್ದರೂ, ಅನಾರೋಗ್ಯದ ಕಾರಣದಿಂದ ಮೊದಲು ಆರ್ಡರ್ ನೀಡಿದವರಿಗೆ ಮಾತ್ರ ಆದ್ಯತೆ ನೀಡಿ 91ಕ್ಕೆ ಸೀಮಿತಗೊಳಿಸಿದ್ದಾರೆ. ಜನರು ಅವರಿಗೆ ಬೇಕಾದ ರೀತಿಯ ಗಣಪನ ಫೋಟೊ ನೀಡಿ ಆರ್ಡರ್ ಮಾಡಿದ್ದು, ಅದರಂತೇ ಮೂರ್ತಿ ರಚಿಸಿ ನೀಡುತ್ತಿದ್ದಾರೆ‌‌. 

ಗೌರಿ ಹಬ್ಬ ಯಾವಾಗ ಆಚರಿಸ್ಬೇಕು? ಗಣೇಶ ಹಬ್ಬದ ದಿನ ಗೌರಿ ಪೂಜೆ ಇದ್ಯಾ?

ಪೇಟ ಹಾಕಿದ ಗಣಪತಿಯ ಮೂರ್ತಿಗಳು ಈ ಬಾರಿಯ ವಿಶೇಷತೆಯಾಗಿದ್ದು, ಮೂರ್ತಿಗಳಿಗೆ ನೈಜ ಬಟ್ಟೆ ಹಾಗೂ ಕೃತಕ ಆಭರಣಗಳನ್ನು ತೊಡಿಸಿ ಹೆಚ್ಚಿನ ಮೆರುಗು ನೀಡಲಾಗುತ್ತಿದೆ‌. ಸಾಮಾನ್ಯವಾಗಿ ಕಾರವಾರದ ಕಲಾವಿದರು ಮಾಡೋ ಗಣೇಶನ ಮೂರ್ತಿಗಳಿಗೆ ಗೋವಾದಲ್ಲಿ ಉತ್ತಮ ಬೇಡಿಕೆಯಿದೆ. ಕಳೆದ ಬಾರಿ ಕೋವಿಡ್ ಕಾರಣದಿಂದ ಗೋವಾದ ಜನರಿಗೆ ಗಡಿಯ ಮೂಲಕ ಮೂರ್ತಿ ಕೊಂಡೊಯ್ಯಲು ಸಮಸ್ಯೆಯಾಗಿತ್ತು. 

ಅಲ್ಲದೇ, ಗಣೇಶನ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಆಗಿರಲಿಲ್ಲ. ಈ ಬಾರಿ ಮಾತ್ರ ಭರ್ಜರಿಯಾಗಿ ಹಬ್ಬ ಆಚರಿಸಲು ಉತ್ತರಕನ್ನಡ ಜಿಲ್ಲೆಯ ಜನತೆ ಮುಂದಾಗಿದ್ದು, ಹಬ್ಬಕ್ಕೆ ಎರಡು ದಿನವಿರುವಾಗಲೇ ತಮ್ಮ ಇಷ್ಟದ ಬಣ್ಣದ ಮಣ್ಣಿನ ಮೂರ್ತಿಗಳನ್ನು ಕೊಂಡೊಯ್ಯುತ್ತಿದ್ದಾರೆ. ಜಿಲ್ಲೆಯಲ್ಲಿ ಮತ್ತೆ ಭಾರೀ ಮಳೆ, ಭೂ ಕುಸಿತಗಳು ಕಾಣಿಸಿಕೊಂಡಲ್ಲಿ ಮೂರ್ತಿಗಳನ್ನು ಕೊಂಡೊಯ್ಯಲು ಸಮಸ್ಯೆಗಳಾಗಬಾರದು ಎಂಬ ಉದ್ದೇಶದಿಂದ ಅಣಶಿ ಹಾಗೂ‌ ಜೊಯಿಡಾ ಭಾಗದ ಜನರು ಮುಂಚಿತವಾಗಿಯೇ ಗಣೇಶನ ಮೂರ್ತಿಗಳನ್ನು ಒಯ್ಯುತ್ತಿದ್ದಾರೆ. 

ಗಣೇಶ ಚತುರ್ಥಿ 2022: ವಿಗ್ರಹ ಕೊಳ್ಳುವಾಗ ಸೊಂಡಿಲು, ಬಣ್ಣ, ಭಂಗಿಯ ಬಗ್ಗೆ ಇರಲಿ ಎಚ್ಚರ

ಒಟ್ಟಿನಲ್ಲಿ ಕಳೆದ ಜೂನ್ ತಿಂಗಳಿಂದ ಗಣಪನ ವೈವಿಧ್ಯಮಯ ಮೂರ್ತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಕಲಾವಿದರು ಇದೀಗ ತಾವು ಮಾಡಿದ ಮೂರ್ತಿಗಳನ್ನು ಬೀಳ್ಕೊಡಲು ಅಣಿಯಾಗುತ್ತಿದ್ದಾರೆ. ಇದರೊಂದಿಗೆ ಜನರು ಕೂಡಾ ತಮ್ಮ ಮನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಭರ್ಜರಿ ವ್ಯವಸ್ಥೆ ಮಾಡಿಕೊಂಡು ಕಾತುರರಾಗಿದ್ದಾರೆ.

click me!