ರಾಜ್ಯದ 16 ಮಂದಿ ಐಎಎಸ್‌ ಪಾಸ್‌ : ಕನ್ನಡ ಐಚ್ಛಿಕ ವಿಷಯ ತೆಗೆದುಕೊಂಡಿದ್ದ ಅಕ್ಷಯ್‌ ರಾಜ್ಯಕ್ಕೆ ಪ್ರಥಮ

By Kannadaprabha NewsFirst Published Sep 25, 2021, 7:30 AM IST
Highlights
  • ಕೇಂದ್ರ ನಾಗರೀಕ ಸೇವೆಗಳ 2020ನೇ ಸಾಲಿನ ಮುಖ್ಯ ಪರೀಕ್ಷೆಯ ಫಲಿತಾಂಶ 
  • ದೇಶದಲ್ಲಿ ಉತ್ತೀರ್ಣರಾದ ಒಟ್ಟು 761 ಅಭ್ಯರ್ಥಿಗಳ ಪೈಕಿ ರಾಜ್ಯದ 16 ಮಂದಿ 
  • ಮಂಡ್ಯ ಮೂಲದ ಬೆಂಗಳೂರಿನ ನಿವಾಸಿ ಕೆ.ಜೆ.ಅಕ್ಷಯ್‌ ಸಿಂಹ ರಾಜ್ಯಕ್ಕೆ ಮೊದಲ ಸ್ಥಾನ 

ಬೆಂಗಳೂರು (ಸೆ.25):  ಕೇಂದ್ರ ನಾಗರೀಕ ಸೇವೆಗಳ 2020ನೇ (UPSC) ಸಾಲಿನ ಮುಖ್ಯ ಪರೀಕ್ಷೆಯ ಫಲಿತಾಂಶ (Result) ಶುಕ್ರವಾರ ಹೊರಬಿದ್ದಿದ್ದು, ದೇಶದಲ್ಲಿ ಉತ್ತೀರ್ಣರಾದ ಒಟ್ಟು 761 ಅಭ್ಯರ್ಥಿಗಳ ಪೈಕಿ ರಾಜ್ಯದ 16 ಮಂದಿ ಸೇರಿದ್ದಾರೆ.

ಕನ್ನಡ (Kannada) ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದ ಮಂಡ್ಯ (mandya) ಮೂಲದ ಬೆಂಗಳೂರಿನ ನಿವಾಸಿ ಕೆ.ಜೆ.ಅಕ್ಷಯ್‌ ಸಿಂಹ ರಾಜ್ಯಕ್ಕೆ ಮೊದಲ ಸ್ಥಾನ ಮತ್ತು ದೇಶದಲ್ಲಿ 77ನೇ ಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ. ಕನ್ನಡ ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಂಡು 77ನೇ  ರ‍್ಯಾಂಕ್ (Rank) ಪಡೆದಿರುವುದು ವಿಶೇಷ.

UPSC Results 2020: ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ

ರಾಜ್ಯದಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಐಎಎಸ್‌  (IAS) ಪರೀಕ್ಷೆಗೆ ಹಾಜರಾಗಿದ್ದರು. ಅವರುಗಳಲ್ಲಿ 50ಕ್ಕೂ ಹೆಚ್ಚು ಮಂದಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, 16 ಮಂದಿ ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ಸೇರಿದಂತೆ ವಿವಿಧ ಸೇವೆಗಳಿಗೆ ಆಯ್ಕೆಗೊಂಡಿದ್ದಾರೆ.

ರ‍್ಯಾಂಕ್ ಪಡೆದ ಕರ್ನಾಟಕದ ಅಭ್ಯರ್ಥಿಗಳು

ಕೆ.ಜೆ.ಅಕ್ಷಯ್‌ಸಿಂಹ-77, ಎಂ.ನಿಶ್ಚಯ್‌ ಪ್ರಸಾದ್‌-130, ಸಿರಿವೆನ್ನೆಲ-204, ಎಂ.ಪಿ.ಶ್ರೀನಿವಾಸ್‌ ಹುಬ್ಬಳ್ಳಿ-235, ಅನಿರುದ್‌ ಆರ್‌. ಗಂಗಾವರಂಟಿ-252, ಡಿ.ಸೂರಜ್‌ -255, ನೇತ್ರಾ ಮೇಟಿ-326, ಮೇಘಾ ಜೈನ್‌-354, ಪ್ರಜ್ವಲ್‌-367, ಸಾಗರ್‌ ಎ.ವಾಡಿ- 385, ನಾಗರಗೊಜೆ ಶುಭಂ-453, ಆರ್‌.ಎನ್‌. ಬಿಂದುಮಣಿ -468, ಶಕೀರ್‌ ಅಹ್ಮದ್‌ ತೊಂಡಿಖಾನ್‌-583, ಎಚ್‌.ಆರ್‌. ಪ್ರಮೋದ್‌ ಆರಾಧ್ಯ- 601, ಕೆ.ಸೌರಭ್‌-725, ವೈಶಾಖ್‌ ಬಗೀ-744, ಎಚ್‌.ಸಂತೋಷ್‌-751.

ಕನ್ನಡ ಐಚ್ಛಿಕ ವಿಷಯದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ

ಕಳೆದ ಮೂರು ವರ್ಷಗಳಿಂದ ಅಧ್ಯಯನ ಮಾಡುತ್ತಿದ್ದೇನೆ. ಕಳೆದ ಸಾಲಿನಲ್ಲಿ ಆಯ್ಕೆಯಾಗಿರಲಿಲ್ಲ. ಪ್ರಸಕ್ತ ಅವಧಿಯಲ್ಲಿ ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ಡಾ.ಕೆ.ಸತ್ಯನಾರಾಯಣ್‌, ವೆಂಕಟೇಶಪ್ಪ ಮತ್ತು ವಿನಯ್‌ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದು, 77ನೇ ರಾರ‍ಯಂಕ್‌ ಬಂದಿದೆ. ಐಎಎಸ್‌ ಹುದ್ದೆ ಸಿಗುವ ಭರವಸೆ ಇದೆ.

- ಕೆ.ಜೆ.ಅಕ್ಷಯ್‌ ಸಿಂಹ, 77ನೇ ರ‍್ಯಾಂಕ್

ತರಬೇತಿ ಪಡೆಯದೆ ಐಎಎಸ್‌

ಐಎಎಸ್‌ ಆಗಬೇಕು ಎಂಬುದು ಕನಸಾಗಿತ್ತು. ಕಳೆದ ಮೂರು ವರ್ಷಗಳಿಂದ ಸ್ವಯಂ ಅಧ್ಯಯನ ಮಾಡುತ್ತಿದ್ದೆ. ಈಗ ಎರಡನೇ ಅವಧಿಯಲ್ಲಿ 130ನೇ ರ‍್ಯಾಂಕ್ ಲಭ್ಯವಾಗಿದೆ. ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ಸೇವೆಯಲ್ಲಿ ಯಾವುದು ಸಿಕ್ಕರೂ ಸೇವೆಗೆ ಹಾಜರಾಗುತ್ತೇನೆ. ಐಎಎಸ್‌ ಓದಬೇಕಾದರೆ ಯಾವುದೇ ತರಬೇತಿ ಅಗತ್ಯವಿಲ್ಲ. ಶ್ರದ್ಧೆಯಿಂದ ಪಠ್ಯಕ್ರಮವನ್ನು ಮುಗಿಸಿದರೆ ಗುರಿ ತಲುಪಬಹುದಾಗಿದೆ. ಸಾಮಾನ್ಯ ಪದವಿ ಮಾಡಿರುವವರು ಪ್ರಯತ್ನ ಮಾಡಬಹುದಾಗಿದೆ.

- ಎಂ.ನಿಶ್ಚಯ್‌ ಪ್ರಸಾದ್‌, 130ನೇ ರ‍್ಯಾಂಕ್

ರಾಜ್ಯದಿಂದ ಮತ್ತಷ್ಟುಜನ ಐಎಎಸ್‌ ಆಗಬೇಕು

ಕೇಂದ್ರ ಲೋಕಾಸೇವಾ ಆಯೋಗದ ಪರೀಕ್ಷೆಗಳಲ್ಲಿ ಆಯ್ಕೆಯಾಗುವುದು ಸವಾಲಿನ ಕೆಲಸ. ಛಲಬಿಡದೆ ಪ್ರಯತ್ನ ಮಾಡಬೇಕು. ಗುರಿ ತಲುಪುವವರೆಗೂ ಅಧ್ಯಯನದಲ್ಲಿ ನಿರತರಾದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯವಾಗಲಿದೆ. ಭೂಗೋಳ ಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿದ್ದೆ. ಮೂರನೇ ಪ್ರಯತ್ನದಲ್ಲಿ ಆಯ್ಕೆಯಾಗಿದ್ದೇನೆ. ತುಂಬಾ ಸಂತೋಷವಾಗುತ್ತಿದ್ದು, ರಾಜ್ಯದ ಮತ್ತಷ್ಟುಮಂದಿ ಐಎಎಸ್‌ ಅಧಿಕಾರಿಗಳಾಗಬೇಕು.

- ಡಿ.ಸೂರಜ್‌, 255ನೇ ರ‍್ಯಾಂಕ್

ಕೆಲಸ ಬಿಟ್ಟು ಅಧ್ಯಯನ

ಎಂಜಿನಿಯರಿಂಗ್‌ ಪದವಿ ಪಡೆದಿದ್ದರೂ ಯಾವುದೇ ಕೆಲಸಕ್ಕೆ ಹೋಗದೆ, ಮೂರು ವರ್ಷಗಳ ಕಾಲ ಸತತ ಪ್ರಯತ್ನ ಮಾಡಿದೆ. ಅದರ ಫಲವಾಗಿ ಇಂದು ಯುಪಿಎಸ್‌ಸಿಯಲ್ಲಿ ಉತ್ತಮ ರ‍್ಯಾಂಕ್ ಸಿಕ್ಕಿದೆ. 2019ರಲ್ಲಿ ಐಪಿಎಸ್‌ ಸಿಕ್ಕಿತ್ತು. ಆದರೆ ನಾನು ಐಎಎಸ್‌ ಆಗಬೇಕೆಂಬ ಕನಸಿನೊಂದಿಗೆ ಒಂದು ವರ್ಷ ಡೆಲ್ಲಿಯಲ್ಲಿ ವಾಜಿರಾಂ ಆಂಡ್‌ ರವಿ ಅವರ ಬಳಿ ತರಬೇತಿ ಪಡೆದೆ. ನಂತರ ಚಂದ್ರಾ ಲೇಔಟ್‌ನ ಇನ್‌ಸೈಟ್‌ ಅಕಾಡೆಮಿಯಲ್ಲಿ ತರಬೇತಿ ಪಡೆದಿದೆ. ಮೂರನೇ ಪ್ರಯತ್ನಕ್ಕೆ ಐಎಎಸ್‌ ಕನಸು ನನಸಾಯಿತು.

click me!