
ಮಹಾಮಾರಿ ಕೋವಿಡ್ ಬಂದು ಎಲ್ಲವನ್ನೂ ತಲೆಕೆಳಗಾಗಿಸಿದೆ. ಕಡು ಬಡವರ ಹೊಟ್ಟೆ ಮೇಲೆ ಹೊಡೆದಿದೆ, ಅದೆಷ್ಟೋ ಕುಟುಂಬಗಳನ್ನ ಬೀದಿಗೆ ತಂದು ನಿಲ್ಲಿಸಿದೆ. ಇನ್ನು ಮಕ್ಕಳ ಶೈಕ್ಷಣಿಕ ಜೀವನದ ಮೇಲೂ ಭಾರೀ ಪ್ರಭಾವ ಬೀರಿದೆ. ದೇಶದಲ್ಲಿ 2ನೇ ಅಲೆಯ ಅಬ್ಬರ ತಗ್ಗಿದ ನಂತರ ಒಂದೊಂದೇ ರಾಜ್ಯಗಳು ಶಾಲಾ-ಕಾಲೇಜುಗಳನ್ನು ಪುನರಾರಂಭಿಸಿವೆ. ಆದ್ರೆ ಮೊದಲ ಕೋವಿಡ್ ಅಲೆಗೂ ಮುಂಚಿನ ಪರಿಸ್ಥಿತಿ ಈಗಿಲ್ಲ. ಕೋವಿಡ್ ಭಯದಿಂದ ಕೆಲವರು ತರಗತಿಯಿಂದ ದೂರ ಉಳಿದಿದ್ರೆ, ಇನ್ನು ಕೆಲವರು ವೈಯಕ್ತಿಕ ಕಾರಣಗಳಿಗಾಗಿ ಶಾಲಾ-ಕಾಲೇಜುಗಳನ್ನು ತೊರೆದಿದ್ದಾರೆ. ಹೀಗೆ ಕಾಲೇಜು ತೊರೆದ ವಿದ್ಯಾರ್ಥಿಗಳನ್ನ ಕುರಿತು ಸಮೀಕ್ಷೆ ನಡೆಸಲು ತಮಿಳುನಾಡು ಸರ್ಕಾರ ಮುಂದಾಗಿದೆ.
ಪಿಯು ಶಿಕ್ಷಕರಿಗೆ 3 ವರ್ಷದಿಂದ ವರ್ಗಾವಣೆ ಭಾಗ್ಯ ಇಲ್ಲ
ತಮಿಳುನಾಡಿನಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾದ ನಂತರ ಸೆಪ್ಟೆಂಬರ್ 1 ರಿಂದ ಕಾಲೇಜುಗಳನ್ನು ಪುನಾರಂಭಿಸಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿಲ್ಲ. ಹೀಗಾಗಿ ತಮಿಳುನಾಡಿನ ಉನ್ನತ ಶಿಕ್ಷಣ ಇಲಾಖೆಯು ಕಾಲೇಜುಗಳನ್ನು ತೊರೆದಿರುವ ವಿದ್ಯಾರ್ಥಿಗಳ ಸಂಖ್ಯೆ ಕುರಿತು ಸಮಗ್ರವಾದ ಸಮೀಕ್ಷೆಯನ್ನು ನಡೆಸಲಿದೆ.
"ಕೋವಿಡ್ -19 ಪ್ರಕರಣಗಳ ತಗ್ಗಿದ ನಂತರ ಸೆಪ್ಟೆಂಬರ್ 1 ರಿಂದ ಕಾಲೇಜುಗಳು ಪುನರಾರಂಭವಾದಾಗಿನಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ್ದಾರೆ ಎಂದು ವಿವಿಧ ಕಾಲೇಜುಗಳಿಂದ ವರದಿಗಳು ಬಂದಿವೆ. ಈ ಬಗ್ಗರ ರಾಜ್ಯ ಸರ್ಕಾರವು ಚಿಂತಿತವಾಗಿದೆ. ಇದು ಸಾಕಷ್ಟು ಕಳವಳಕಾರಿಯಾಗಿದ್ದು, ಉನ್ನತ ಶಿಕ್ಷಣ ಇಲಾಖೆಯು ಈ ಕುಸಿತದ ಕಾರಣದ ಬಗ್ಗೆ ವಿವರವಾದ ಮತ್ತು ವೈಜ್ಞಾನಿಕ ಅಧ್ಯಯನವನ್ನು ನಡೆಸಲು ಯೋಜಿಸುತ್ತಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯು, ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವ ಬಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಾಲೇಜು ತರಗತಿಗಳನ್ನು ಬಿಟ್ಟಿರುವ ಬಹುತೇಕ ವಿದ್ಯಾರ್ಥಿಗಳು ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ಹೊಟ್ಟೆಪಾಡಿಗಾಗಿ ಸಣ್ಣ ಉದ್ಯೋಗಗಳನ್ನು ಮಾಡುವ ಮೂಲಕ ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದಾರೆ.
ಕರ್ನಾಟಕ ಸಿಇಟಿ ರಿಸಲ್ಟ್ ಪ್ರಕಟ: ಇಲ್ಲಿದೆ Rank ವಿಜೇತ ವಿದ್ಯಾರ್ಥಿಗಳ ಪಟ್ಟಿ
"ಸೆಪ್ಟೆಂಬರ್ 1 ರಿಂದ ರಾಜ್ಯದಲ್ಲಿ ಕಾಲೇಜುಗಳು ಪುನರಾರಂಭವಾದ ನಂತರ ನಾವು ಒಂದು ಸಣ್ಣ ಅಧ್ಯಯನವನ್ನು ಮಾಡಿದ್ದೇವೆ. ಅದರ ಮೂಲಕ ತರಗತಿಗಳಿಗೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ನಾವು ಅಧ್ಯಯನ ನಡೆಸಿದ ಚೆನ್ನೈ, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಕಾಲೇಜುಗಳಲ್ಲಿ ಕನಿಷ್ಠ 15 ರಿಂದ 20 ಪ್ರತಿಶತ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿಲ್ಲ" ಎಂದು ಚೆನ್ನೈ ನ ಎಜ್ಯುಕೇಷನ್ ಎನ್ ಜಿಒ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ಅಧ್ಯಕ್ಷ ಸುಧೀಂದ್ರನ್ ಕೃಷ್ಣನ್ ತಿಳಿಸಿದ್ದಾರೆ.
"ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಪರಿಸ್ಥಿತಿ ಆತಂಕಕಾರಿಯಾಗಲಿದ್ದು, ಉನ್ನತ ಶಿಕ್ಷಣ ಇಲಾಖೆಯು ಈ ಕುರಿತು ಅಧ್ಯಯನ ನಡೆಸಿ ಸರಿಯಾದ ವೈಜ್ಞಾನಿಕ ವರದಿ ಪಡೆಯಬೇಕಿದೆ" ಅಂತಾರೆ ಸುಧೀಂದ್ರನ್ ಕೃಷ್ಣನ್.
ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಡೆಸಲಾಗುವ ಸಮೀಕ್ಷೆಯನ್ನು ಕೈಗೊಳ್ಳಲು ಮಾರುಕಟ್ಟೆ ಅಧ್ಯಯನ ಏಜೆನ್ಸಿಯನ್ನು ಸಿದ್ಧಪಡಿಸಲಾಗಿದೆ. ಸಮೀಕ್ಷೆಯ ದಿನಾಂಕಗಳನ್ನು ಒಂದೆರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಕಾಲೇಜು ತೊರೆದ ವಿದ್ಯಾರ್ಥಿಗಳ ಕುರಿತು ಮೌಲ್ಯಮಾಪನ ಮಾಡಲು ರಾಜ್ಯದಾದ್ಯಂತ, ಶಿಕ್ಷಣ ಇಲಾಖೆಯು ಆಳವಾದ ಸಮೀಕ್ಷೆಯನ್ನು ನಡೆಸಲಿದೆ. ಯಾವ ಕಾರಣಕ್ಕೆ ವಿದ್ಯಾರ್ಥಿಗಳು ಕಾಲೇಜು ಬಿಟ್ಟಿದ್ದಾರೆ? ಎಷ್ಟು ಮಂದಿ ಡ್ರಾಪ್ ಔಟ್ ಆಗಿದ್ದಾರೆ? ಅರ್ಧಕ್ಕೆ ಕಲಿಕೆ ನಿಲ್ಲಿಸಲು ಕಾರಣವೇನು? ಕೋವಿಡ್ ಲಾಕ್ ಡೌನ್ ನಿಂದಾಗಿ ವಿದ್ಯಾರ್ಥಿಗಳ ಕುಟುಂಬದ ಆರ್ಥಿಕ ನಿರ್ವಹಣೆ ಹೇಗಿದೆ? ಅವರ ಕುಟುಂಬದ ವೃತ್ತಿ ಹಾಗೂ ಆದಾಯದ ಮೂಲವೇನು? ಇತ್ಯಾದಿ ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸಿ ಉತ್ತರ ಕಂಡುಕೊಳ್ಳಲಾಗುತ್ತದೆ. ಈ ದೊಡ್ಡ ಸಮೀಕ್ಷೆಯ ಮೂಲಕ ವಿದ್ಯಾರ್ಥಿಗಳ ಸಂಖ್ಯೆ ಕಲೆ ಹಾಕಿ, ಮಕ್ಕಳ ಮುಂದಿನ ಭವಿಷ್ಯ ರೂಪಿಸುವ ಬಗ್ಗೆ ಸ್ಟಾಲಿನ್ ಸರ್ಕಾರ ಚಿಂತನೆ ನಡೆಸಲಿದೆ.
ಭಾರತದಲ್ಲಿ IBM ನೇಮಕಾತಿ: ಫ್ರೆಶರ್ಸ್‌ಗೆ ಅವಕಾಶ