KARTET: ಟಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ: ಆನ್‌ಲೈನ್‌ನಲ್ಲೇ ಅರ್ಹತಾ ಅಂಕಪಟ್ಟಿ ಲಭ್ಯ

By Sathish Kumar KH  |  First Published Dec 14, 2022, 7:38 PM IST

2022ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2022)ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ. ಪತ್ರಿಕೆ 1ರಲ್ಲಿ 20,070 ಅಭ್ಯರ್ಥಿಗಳು ಹಾಗೂ ಪತ್ರಿಕೆ 2ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.


ಬೆಂಗಳೂರು (ಡಿ.14): ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದಿಂದ ನಡೆಸಲಾಗಿದ್ದ 2022ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2022) ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ. ಪತ್ರಿಕೆ 1ರಲ್ಲಿ 20,070 ಅಭ್ಯರ್ಥಿಗಳು ಹಾಗೂ ಪತ್ರಿಕೆ 2ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ಶಿಕ್ಷಣ ಇಲಾಖೆಯಿಂದ ನವೆಂಬರ್‌ 6 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲಾಯಿತು. ಅರ್ಹತಾ ಪರೀಕ್ಷೆ ಪತ್ರಿಕೆ-1 (1 ರಿಂದ 5 ನೇ ತರಗತಿ ಬೋಧಿಸುವ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ) ಮತ್ತು ಪತ್ರಿಕೆ -2 (6 ರಿಂದ 8ನೇ ತರಗತಿ ಬೋಧಿಸುವ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ) ನಡೆಸಲಾಯಿತು. ಸದರಿ ಪರೀಕ್ಷೆಯ ಪತ್ರಿಕೆ-1ಕ್ಕೆ 1,40,790 ಅಭ್ಯರ್ಥಿಗಳು ಹಾಜರಾಗಿದ್ದು, 20,070 ಆಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಪತ್ರಿಕೆ-2ಕ್ಕೆ 1,92,066 ಅಭ್ಯರ್ಥಿಗಳು ಹಾಜರಾಗಿದ್ದು, 41,857 ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 3,37,856 ಅಭ್ಯರ್ಥಿಗಳಲ್ಲಿ 61,927 ಅಭ್ಯರ್ಥಿಗಳು ಅರ್ಹತೆ ಪಡೆದಿರುತ್ತಾರೆ.

Tap to resize

Latest Videos

KARTET: ಮುಂದಿನ ವಾರಾಂತ್ಯದಲ್ಲಿ ಟಿಇಟಿ ಫಲಿತಾಂಶ ಪ್ರಕಟ : ಬಿ.ಸಿ. ನಾಗೇಶ್

1,332 ಆಕ್ಷೇಪಣೆ ಸಲ್ಲಿಕೆ: ಇನ್ನು 2022ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ಭಾಷೆ-1 ಮತ್ತು ಭಾಷೆ-2 ರಲ್ಲಿ ಎಂಟು ಭಾಷೆಗಳನ್ನು (ಕನ್ನಡ, ಇಂಗ್ಲೀಷ್, ಉರ್ದು, ತಮಿಳು, ತೆಲುಗು, ಮರಾಠಿ, ಹಿಂದಿ ಮತ್ತು ಸಂಸ್ಕೃತ) ಹಾಗೂ ಐಚ್ಛಿಕ ವಿಷಯದ ಪತ್ರಿಕೆಗಳು ಏಳು ಭಾಷಾ ಮಾಧ್ಯಮಗಳನ್ನು (ಕನ್ನಡ, ಇಂಗ್ಲೀಷ್, ಉರ್ದು, ತಮಿಳು, ತೆಲುಗು, ಮರಾಠಿ, ಮತ್ತು ಹಿಂದಿ) ಒಳಗೊಂಡಿತ್ತು. ಶಿಕ್ಷಕರ ಅರ್ಹತಾ ಪರೀಕ್ಷೆಯ ಕೀ-ಉತ್ತರಗಳನ್ನು ನ.೯ರಂದು ಪ್ರಕಟಗೊಳಿಸಿ, ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಆಕ್ಷೇಪಣೆಗಳನ್ನು ನ.11ರವರೆಗೆ ಕಾಲಾವಕಾಶ ನೀಡಲಾಗಿತ್ತು. ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ಒಟ್ಟು 1,332 (ಪತ್ರಿಕೆ-1-75 ಮತ್ತು ಪತ್ರಿಕೆ-2-1257 = ಒಟ್ಟು 1,332) ಆಕ್ಷೇಪಣೆಗಳನ್ನು ಸ್ವೀಕರಿಸಿ, ಪರಿಶೀಲಿಸಲಾಗಿದೆ. ಪ್ರತಿ ವಿಷಯದ ತಜ್ಞರನ್ನೊಳಗೊಂಡ ಸಮಿತಿಯಿಂದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಸಮಿತಿಯು ನೀಡಿದ ವರದಿಯನ್ನಾಧರಿಸಿ ಅಂತಿಮ ಕೀ-ಉತ್ತರಗಳನ್ನು ನ.25ರಂದು ಪ್ರಕಟಿಸಲಾಗಿತ್ತು.

ವಿಶೇಷ ವರ್ಗಕ್ಕೆ ಶೇ.55 ಅರ್ಹತಾ ಅಂಕ:
ಪ್ರಶ್ನೆ ಪತ್ರಿಕೆಯ ಕೀ-ಉತ್ತರಗಳನ್ನು ಆಧರಿಸಿ, ಓ.ಎಂ.ಆರ್ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಫಲಿತಾಂಶಗಳನ್ನು ಲೆಕ್ಕಾಚಾರ ಮಾಡಿದೆ. ಅದರಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಪತ್ರಿಕೆಗಳಲ್ಲಿ ಶೇ.60 ರಷ್ಟು ಅರ್ಹತಾ ಅಂಕಗಳು ಹಾಗೂ ಪ.ಜಾತಿ, ಪ.ಪಂಗಡ, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶೇ.55 ರಷ್ಟು ಅರ್ಹತಾ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸಿದೆ. 

 

ಬಿಗಿ ಬಂದೋಬಸ್ತ್‌ನಲ್ಲಿ ರಾಜ್ಯದ 781 ಕೇಂದ್ರದಲ್ಲಿ ಟಿಇಟಿ ಸುಸೂತ್ರ

ವೆಬ್‌ಸೈಟ್‌ನಿಂದ ಅರ್ಹತಾ ಪ್ರಮಾಣಪತ್ರ ಲಭ್ಯ: ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ QR Code ದತ್ತಾಂಶವನ್ನು ಹೊಂದಿರುವ ಗಣಕೀಕೃತ ಅಂಕಪಟ್ಟಿ ವಿತರಿಸಲಾಗುವುದು. ಕೇಂದ್ರೀಕೃತ ದಾಖಲಾತಿ ಘಟಕದಿಂದ ಈ ಸಂಬಂಧ ಮುದ್ರಿತ ಅಂಕಪಟ್ಟಿಯನ್ನು ವಿತರಿಸುವುದಿಲ್ಲ. ಬದಲಾಗಿ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್ ಮೂಲಕ ಸುರಕ್ಷತಾ ಕೋಡ್' (QR Code) ಹೊಂದಿರುವ ಗಣಕೀಕೃತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ. ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳು ತಮ್ಮ ಅರ್ಜಿಸಂಖ್ಯೆ ಮತ್ತು ಅಭ್ಯರ್ಥಿಯ ಜನ್ಮದಿನಾಂಕ (ಆನ್‌ ಲೈನ್ ಅರ್ಜಿಯಲ್ಲಿರುವಂತೆ) ನಮೂದಿಸಿ, ಗಣಕೀಕೃತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು. ಶಿಕ್ಷಕರ ಅರ್ಹತಾ ಪ್ರಮಾಣ ಪತ್ರವು ಜೀವಿತಾವಧಿಯವರೆಗೆ (LIFETIME) ಮಾನ್ಯತೆ ಹೊಂದಿದೆ.

ಪ್ರಮಾಣಪತ್ರ ಪಡೆಯುವುದು ಹೇಗೆ? : ಅಭ್ಯರ್ಥಿಗಳು ಡಿ.26ರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ ಸೈಟ್ https://schooleducation.kar.nic.in ನಲ್ಲಿ ನೀಡಲಾದ ಲಿಂಕ್ ಮೂಲಕ ತಮ್ಮ ಅರ್ಹತಾ ಪ್ರಮಾಣ ಪತ್ರ/ಗಣಕೀಕೃತ ಅಂಕಪಟ್ಟಿ (ELIGIBILITY CERTIFICATE) ಯನ್ನು ಬೇಕಾದಷ್ಟು ಸಂಖ್ಯೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಪ್ರಮಾಣ ಪತ್ರವು ಸೀಮಿತ ದಿನಗಳಿಗೆ ಮಾತ್ರ ವೆಬ್‌ ಸೈಟ್ ನಲ್ಲಿ ಲಭ್ಯವಿರಲಿದ್ದು, ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯ ಪ್ರತಿಗಳನ್ನು ಡೌನ್ ಲೋಡ್ ಮಾಡಿಕೊಂಡು ಸಂರಕ್ಷಿಸಿಕೊಳ್ಳುವುದು. ಈ ಸಂಬಂಧ ಕೇಂದ್ರೀಕೃತ ದಾಖಲಾತಿ ಘಟಕವನ್ನು ಪದೇ ಪದೇ ಸಂಪರ್ಕಿಸುವ ಅಗತ್ಯವಿರುವುದಿಲ್ಲ.

39 ದಿನಗಳಲ್ಲಿ ಪ್ರಕ್ರಿಯೆ ಪೂರ್ಣ: ಪ್ರಮಾಣ ಪತ್ರದಲ್ಲಿ ಮುದ್ರಿತವಾಗಿರುವ QR Code ಅನ್ನು ಸ್ಕ್ಯಾನ್ ಮಾಡುವುದರ ಮೂಲಕ ಪ್ರಮಾಣಪತ್ರದ ನೈಜತೆಯನ್ನು ದೃಢೀಕರಿಸಿಕೊಳ್ಳಬಹುದಾಗಿದೆ. 2022ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನ.6ರಂದು ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿ ನಡೆಸಿದ್ದು, ಪರೀಕ್ಷಾ ಫಲಿತಾಂಶವನ್ನು ಡಿ.14 ರಂದು ಪ್ರಕಟಿಸಲಾಗಿದೆ. ಪರೀಕ್ಷಾ ನಂತರದ ಪ್ರಕ್ರಿಯೆಯನ್ನು 39 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದ್ದು, ತೆಗೆದುಕೊಂಡ ಕಾಲಾವಕಾಶವು ಗಣನೀಯವಾಗಿ ಇಳಿಕೆಯಾಗಿದೆ.

 

ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಫಲಿತಾಂಶವನ್ನು ಕೆಲ ಹೊತ್ತಿನಲ್ಲಿ ಪ್ರಕಟಿಸಲಾಗುವುದು.

ಪತ್ರಿಕೆ 1ರಲ್ಲಿ 20,070 ಅಭ್ಯರ್ಥಿಗಳು ಹಾಗೂ
ಪತ್ರಿಕೆ 2ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

— B.C Nagesh (@BCNagesh_bjp)
click me!