NEET Result 2022: ರಾಜಸ್ಥಾನದ ತನಿಷ್ಕಾ ದೇಶಕ್ಕೆ ಮೊದಲ ರ‍್ಯಾಂಕ್, ಕರ್ನಾಟಕದ ಹೃಷಿಕೇಶ್‌ಗೆ 3ನೇ ಸ್ಥಾನ

By Girish GoudarFirst Published Sep 8, 2022, 12:34 AM IST
Highlights

ರಾಜಸ್ಥಾನದ ತನಿಷ್ಕಾ ಅಗ್ರ ರ‍್ಯಾಂಕ್, ದೆಹಲಿಯ ವತ್ಸ ಆಶಿಶ್ ಬಾತ್ರಾ ಮತ್ತು ಕರ್ನಾಟಕದ ಹೃಷಿಕೇಶ್ ನಾಗಭೂಷಣ ಗಂಗೂಲೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ. 

ನವದೆಹಲಿ(ಸೆ.08):  ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬುಧವಾರ ನೀಟ್‌ ಫಲಿತಾಂಶ ಪ್ರಕಟಿಸಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ 9.93 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಲ್ಲಿ ರಾಜಸ್ಥಾನದ ತನಿಷ್ಕಾ ಅಗ್ರ ರ‍್ಯಾಂಕ್ ಗಳಿಸಿದ್ದಾರೆ. ದೆಹಲಿಯ ವತ್ಸ ಆಶಿಶ್ ಬಾತ್ರಾ ಮತ್ತು ಕರ್ನಾಟಕದ ಹೃಷಿಕೇಶ್ ನಾಗಭೂಷಣ ಗಂಗೂಲೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟು 17.64 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಪರೀಕ್ಷೆಯಲ್ಲಿ ಅರ್ಹತೆ ಪಡೆದ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳು ಉತ್ತರ ಪ್ರದೇಶ (1.17 ಲಕ್ಷ), ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (1.13 ಲಕ್ಷ) ಮತ್ತು ರಾಜಸ್ಥಾನ (82,548). ದೇಶದಾದ್ಯಂತ 497 ನಗರಗಳಲ್ಲಿ ಮತ್ತು ಭಾರತದ ಹೊರಗಿನ 14 ನಗರಗಳಲ್ಲಿ 3,570 ವಿವಿಧ ಕೇಂದ್ರಗಳಲ್ಲಿ ಜು. 17 ರಂದು ನಡೆದ ಪ್ರವೇಶ ಪರೀಕ್ಷೆಯಲ್ಲಿ ಸುಮಾರು 95 ಪ್ರತಿಶತದಷ್ಟು ಹಾಜರಾತಿ ದಾಖಲಾಗಿತ್ತು. 

NEET ಪರೀಕ್ಷೆಯಲ್ಲಿ ಬಲವಂತದಿಂದ ಒಳ ಉಡುಪು ಬಿಚ್ಚಿಸಿದ್ದ ಪ್ರಕರಣ; ಮರು ಪರೀಕ್ಷೆಗೆ ಅವಕಾಶ

13 ಭಾಷೆಗಳಲ್ಲಿ ನಡೆದಿದ್ದ ಪರೀಕ್ಷೆ

ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಪರೀಕ್ಷೆ ನಡೆದಿತ್ತು. ಮೊದಲ ಬಾರಿಗೆ ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮನಾಮಾ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್ ಜೊತೆಗೆ ದುಬೈ ಮತ್ತು ಕುವೈತ್ ನಗರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. 
 

click me!