ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವುದನ್ನು ಅರಿತು ಸ್ಥಳಕ್ಕಾಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಲಗದ, ಎಲ್ಲಾ ವಿದ್ಯಾರ್ಥಿಗಳನ್ನು ಕೂರಿಸಿ ಊಟದ ವಿಚಾರವಾಗಿ ಮಾಹಿತಿ ಕಲೆಹಾಕಿದರು.
ಉತ್ತರಕನ್ನಡ(ಫೆ.22): ಮೂಲ ಸೌಕರ್ಯದ ಕೊರತೆ ಹಾಗೂ ಕಳಪೆ ಮಟ್ಟದ ಊಟ ನೀಡಲಾಗುತ್ತಿದೆ ಎಂದು ಆರೋಪಿಸಿದ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಬಾಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ರಸ್ತೆಯ ಮೇಲೆ ಅನ್ನದ ತಟ್ಟೆಯನ್ನಿಟ್ಟು ಪ್ರತಿಭಟಿಸಿದ್ದಾರೆ. ನಿನ್ನೆ(ಮಂಗಳವಾರ) ರಾತ್ರಿ ವೇಳೆ ಏಕಾಏಕಿ ಊಟದ ತಟ್ಟೆಯನ್ನು ಹಿಡಿದುಕೊಂಡು ಹೊರಬಂದ ವಿದ್ಯಾರ್ಥಿಗಳು ಬೇಕೇ ಬೇಕು ಊಟ ಬೇಕು ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಹಾಸ್ಟೆಲ್‌ನಲ್ಲಿ ಹಲವು ದಿನಗಳಿಂದ ಕಳಪೆ ಊಟ ನೀಡಲಾಗುತ್ತಿದ್ದು, ಮೀನು ಹಾಗೂ ತರಕಾರಿಗಳನ್ನು ಸ್ವಚ್ಛಗೊಳಿಸದೇ ಪದಾರ್ಥಕ್ಕೆ ಬಳಸಲಾಗುತ್ತದೆ. ಅಲ್ಲದೇ, ಪದಾರ್ಥದ ಗುಣಮಟ್ಟವೂ ತೀರಾ ಕೆಟ್ಟದಾಗಿದ್ದು, ಕೊಳೆತ ಬಾಳೆಹಣ್ಣು ನೀಡಲಾಗುತ್ತದೆ. ಆದರೆ, ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿಗೆ ಮಾತ್ರ ಪ್ರತ್ಯೇಕ ಊಟ ತಯಾರು ಮಾಡುತ್ತಾರೆ. ಈ ಬಗ್ಗೆ ಕೇಳಿದರೆ ವಯರ್ ನಿಂದ ಹೊಡೆಯುತ್ತಾರೆ. ಹಾಸ್ಟೆಲ್‌ನ ಮೂಲ ಸೌಕರ್ಯಗಳು ಕೂಡಾ ಚೆನ್ನಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವುದನ್ನು ಅರಿತು ಸ್ಥಳಕ್ಕಾಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಲಗದ, ಎಲ್ಲಾ ವಿದ್ಯಾರ್ಥಿಗಳನ್ನು ಕೂರಿಸಿ ಊಟದ ವಿಚಾರವಾಗಿ ಮಾಹಿತಿ ಕಲೆಹಾಕಿದರು.
Uttara Kannada: ನೆರೆಮನೆಯಾತನ ಕಾಟದಿಂದ ಗೃಹಬಂಧನದಲ್ಲಿ ಮೂರು ಕುಟುಂಬ!
ಮಕ್ಕಳಿಗೆ ತಯಾರಿಸಿದ ಅಡುಗೆಯನ್ನು ಪರಿಶೀಲಿಸಿ ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿಯೊಂದಿಗೆ ಮಾತನಾಡಿ, ಸರಕಾರದಿಂದ ಹಾಸ್ಟೆಲ್ ಮಕ್ಕಳ ಊಟ ತಯಾರಿಸಲು ನಿಯಮಾವಳಿ ಇದ್ದರೂ ಹೀಗಾಗುತ್ತಿರುವುದು ಸರಿಯಲ್ಲ. ತಕ್ಷಣವೇ ಮಕ್ಕಳಿಗೆ ಬೇರೆ ಅಡುಗೆ ತಯಾರಿಸಿ ನೀಡಬೇಕು. ಈ ರೀತಿಯ ಪ್ರಕರಣಗಳು ಮರುಕಳಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ, ಮಕ್ಕಳಿಂದ ಅಡುಗೆ ಸಿಬ್ಬಂದಿ ಹಾಗೂ ವಾಚ್ ಮ್ಯಾನ್ ಮದ್ಯಪಾನ ತರಿಸುವುದು ತಿಳಿದು ಸ್ಥಳದಲ್ಲಿಯೇ ನೋಟಿಸ್ ಜಾರಿ ಮಾಡಿದರು. ನಾಳೆಯಿಂದಲೇ ಯಾವುದೇ ಸಮಯದಲ್ಲಾದರೂ ಹಾಸ್ಟೆಲ್ ಗೆ ಬಂದು ಊಟಮಾಡಿ ಪರಿಶೀಲಿಸುತ್ತೇನೆ ಎಂದು ಸೂಚನೆ ನೀಡಿದರು. ನಂತರ ಹಾಸ್ಟೆಲ್ ನ ಶೌಚಾಲಯ ಹಾಗೂ ಸ್ನಾನ ಗೃಹಗಳನ್ನು ಪರಿಶೀಲಿಸಿ ಅಲ್ಲಿನ ನೀರು, ವಿದ್ಯುತ್ ಹಾಗೂ ಕಿಟಕಿ ಒಡೆದು ಹೋಗಿರುವುದನ್ನು ಒಂದು ವಾರದೊಳಗೆ ಸರಿಪಡಿಸಿಕೊಡುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಲಗದ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.