ಒಬ್ಬರ ತಂದೆ ಆಟೋ ಚಾಲಕ, ಇನ್ನೊಬ್ಬರು ಕುರಿಗಾಹಿಯ ಮಗಳು ಹಿಗೆ ವಿವಿಧ ಕ್ಷೇತ್ರದಿಂದ ಬಂದಿದ್ದ ನಾಲ್ವರು ಬಡ ವಿದ್ಯಾರ್ಥಿನಿಯರು ಹತ್ತಾರು ಸಮಸ್ಯೆ ಮಧ್ಯೆ ತಲಾ 3 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿತು.
ಶಶಿಕಾಂತ ಮೆಂಡೇಗಾರ
ವಿಜಯಪುರ(ಜ.10): ವಿದ್ಯೆ ಸಾಧಕರ ಸ್ವತ್ತು. ಸ್ಪಷ್ಚ ಗುರಿ, ಸಾಧನೆ ಮಾಡಿಯೇ ತೀರಬೇಕೆಂಬ ಛಲ ಇದ್ದರೆ ಬಡತನ, ಕೌಟುಂಬಿಕ ಸಮಸ್ಯೆ, ಆರ್ಥಿಕ ಮುಗ್ಟಟ್ಟನ್ನೂ ಮೆಟ್ಟಿನಿಂತು ಸಾಧನೆ ಮಾಡಬಹುದು ಎಂಬುದಕ್ಕೆ ಗುರುವಾರ ಇಲ್ಲಿ ನಡೆದ ಅಕ್ಕಮಹಾದೇವಿ ಮಹಿಳಾ ವಿವಿ 16ನೇ ಘಟಿಕೋತ್ಸವ ಸಾಕ್ಷಿಯಾಯಿತು. ಒಬ್ಬರ ತಂದೆ ಆಟೋ ಚಾಲಕ, ಇನ್ನೊಬ್ಬರು ಕುರಿಗಾಹಿಯ ಮಗಳು ಹಿಗೆ ವಿವಿಧ ಕ್ಷೇತ್ರದಿಂದ ಬಂದಿದ್ದ ನಾಲ್ವರು ಬಡ ವಿದ್ಯಾರ್ಥಿನಿಯರು ಹತ್ತಾರು ಸಮಸ್ಯೆ ಮಧ್ಯೆ ತಲಾ 3 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿತು.
ತಂದೆ ಮುಖ ನೋಡಿದ ನೆನಪಿಲ್ಲ, ತಾಯಿಯದು ಕೂಲಿ ಕೆಲಸ, ಒಟ್ಟು ನಾಲ್ಕು ಜನರ ಕುಟುಂಬ. ಕಿತ್ತು ತಿನ್ನುವ ಬಡತನ ಕಾರಣ ಕೆಲಸ ಮಾಡುತ್ತಲೇ ಓದು ಮುಂದುವರಿಸಿ ಮೂರು ಚಿನ್ನದ ಪದಕ ಬಾಚಿಕೊಳ್ಳುವ ಮೂಲಕ ಬೆರಗುಗೊಳಿಸಿದರು ಅಫ್ರೀನ್.
ರಾಯಚೂರು ಕೃಷಿ ವಿವಿ ಘಟಿಕೋತ್ಸವದಲ್ಲಿ ಕಂಡಕ್ಟರ್ ಮಗಳು 5, ಕುರಿಗಾಯಿ ಮಗನಿಗೆ 3 ಚಿನ್ನದ ಪದಕ!
ಸವದತ್ತಿ ತಾಲೂಕಿನ ಚಿಕ್ಕಂಬಿ ಗ್ರಾಮದ ಅಫ್ರೀನ್ ಶಿಲೇದಾರ ಎಂಎ ಹಿಂದಿ ಪದವಿಯಲ್ಲಿ ಅತಿಹೆಚ್ಚು ಅಂಕ ಪಡೆದು ಎರಡು ಹಾಗೂ ಸ್ತ್ರೀವಾದಿ ನ್ಯಾಯಶಾಸ್ತ್ರ ಪತ್ರಿಕೆಯಲ್ಲಿ ಹೆಚ್ಚು ಅಂಕ ಪಡೆದು ಒಂದು ಸೇರಿ 3 ಚಿನ್ನದ ಪದಕ ಪಡೆದರು. 3 ವರ್ಷದವಳಿದ್ದಾಗಲೇ ತಂದೆ ರಂಜಾನ್ ತೀರಿಕೊಂಡಿದ್ದು, ಮೂವರು ಮಕ್ಕಳ ತಾಯಿ ಅಮೀನಾ ಕೂಲಿ ಕೆಲಸ ಮಾಡುತ್ತಾರೆ. 2ನೇ ಮಗಳಾದ ಅಫ್ರೀನ್ ಬ್ಯೂಟಿ ಪಾರ್ಲರ್ ಕೆಲಸ ಮಾಡುತ್ತ ಪದವಿ ಮುಗಿಸಿದ್ದಾರೆ. ಪ್ರಾಥಮಿಕದಿಂದ ಪದವಿವರೆಗೂ ಸರ್ಕಾರಿ ಶಾಲಾ-ಕಾಲೇಜಲ್ಲಿ ಓದಿದ ಅಫ್ರೀನ್ ಸ್ವಂತ ದುಡಿಮೆಯಲ್ಲೇ ಶಿಕ್ಷಣ ಪೂರೈಸಿ ಮಾದರಿಯಾಗಿದ್ದಾರೆ.
ಕುರಿಗಾಹಿ ಮಗಳಿಗೆ ಚಿನ್ನದ ಕಿರೀಟ:
ಎಂಎ ಕನ್ನಡ ಪದವಿಯಲ್ಲಿ 2000ಕ್ಕೆ 1661 ಅಂಕದೊಂದಿಗೆ ಅತಿಹೆಚ್ಚು ಅಂಕ ಪಡೆದು ವಿವಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಲ್ಲದೆ ಮೂರು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ ಮಂದಿರಾ ತೆಳಗಡೆ. ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಮಂದಿರಾ ತಂದೆ ಹನುಮಂತ ಕುರಿಕಾಯುತ್ತಾರೆ. ತಾಯಿ ರೇಣುಕಾ ಕೂಲಿ ಕೆಲಸ ಮಾಡುತ್ತಾರೆ. ನಾಲ್ಕು ಹೆಣ್ಣು, ಇಬ್ಬರು ಗಂಡುಮಕ್ಕಳಿರುವ ಇವರದ್ದು ಬಡ ಕುಟುಂಬ. ಜಮಖಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಓದಿ ಮೂರು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
2ನೇ ಕೌಶಲ್ಯ ಘಟಿಕೋತ್ಸವ ಸಮಾರಂಭ: 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ
ಆಟೋ ಚಾಲಕನ ಮಗಳ ಚಿನ್ನದ ಬೇಟೆ
ಮೂಲತಃ ಬೆಂಗಳೂರಿನಲ್ಲಿ ಬಾಡಿಗೆ ಆಟೋ ಓಡಿಸುವ ಪ್ರಮೋದ ಸಾವಂತ ಅವರ ಪುತ್ರಿ ವನಿತಾ ಎಂಎಸ್ಸಿ ಆಹಾರ ಸಂರಕ್ಷಣೆ ಮತ್ತು ಪೋಷಕಾಂಶ ಪದವಿಯಲ್ಲಿ ಮೂರು ಚಿನ್ನದ ಪದಕ ಪಡೆದರು. ತಾಯಿ ಸುರೇಖಾ ಗೃಹಿಣಿ. ಫುಡ್ ಪ್ರೊಸೆಸಿಂಗ್ ಮೂಲಕ ಜನರಿಗೆ ಜಾಗೃತಿ ಮೂಡಿಸಲು ಹಾಗೂ ಔಷಧಿ ಇಲ್ಲದೆ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಎಚ್ಚರಿಸುವ ಪಣ ತೊಟ್ಟಿದ್ದಾರಂತೆ ವನಿತಾ.
ರೈತನ ಮಗಳ ಚಿನ್ನದ ಬೇಟೆ
ತಿಕೋಟಾ ತಾಲೂಕಿನ ಕಳ್ಳಕವಟಗಿ ಎಂಬ ಗ್ರಾಮದ ರೈತನ ಮಗಳು ಸೌಜನ್ಯ ಜುಂಜರವಾಡ ಅವರು ದೈಹಿಕ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಅತಿಹೆಚ್ಚು ಅಂಕದೊಂದಿಗೆ 3 ಚಿನ್ನದ ಪದಕ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ವೈಎಂಸಿಎ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿದ್ದಾರೆ. ಅಲ್ಲದೆ ಅಂತರ ವಿವಿ ಮಹಾವಿದ್ಯಾಲಯದಲ್ಲಿ ಏಳುಬಾರಿ ಯುನಿವರ್ಸಿಟಿ ಬ್ಲೂ ಆಗಿದ್ದಾರೆ. ಟೆನ್ನಿಸ್ ಬಾಲ್ ಕ್ರಿಕೆಟ್ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿದ್ದಾರೆ.
ಜೊತೆಗೆ ಸಮಾಜಶಾಸ್ತ್ರದಲ್ಲಿ ಶಿಲ್ಪಾ ಪಡೆಪ್ಪಗೋಳ, ಅರ್ಥಶಾಸ್ತ್ರದಲ್ಲಿ ಪಲ್ಲವಿ ಯರನಾಳ ಮೂರು ಚಿನ್ನದ ಪದಕ ಪಡೆದುಕೊಂಡಿದ್ದಾರೆ.