ಒಬ್ಬ ವಿದ್ಯಾರ್ಥಿ ಮೇಲೆ 4 ಜನ ಶಿಕ್ಷಕರಿಂದ ಹಲ್ಲೆ! ಪ್ರಜ್ಞೆ ಕಳೆದುಕೊಂಡ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು

Published : Feb 07, 2026, 12:37 PM IST
Gauribidanur Private School

ಸಾರಾಂಶ

ಗೌರಿಬಿದನೂರಿನ ವಿದ್ಯಾನಿಧಿ ಖಾಸಗಿ ಶಾಲೆಯಲ್ಲಿ, 8ನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ನಾಲ್ವರು ಶಿಕ್ಷಕರು ಹಲ್ಲೆ ನಡೆಸಿದ ಗಂಭೀರ ಆರೋಪ ಕೇಳಿಬಂದಿದೆ. ಹಲ್ಲೆಯಿಂದ ಪ್ರಜ್ಞೆ ತಪ್ಪಿದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೋಷಕರು ಶಿಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಚಿಕ್ಕಬಳ್ಳಾಪುರ/ಗೌರಿಬಿದನೂರು: ಗೌರಿಬಿದನೂರು ನಗರದ ಖಾಸಗಿ ವಿದ್ಯಾನಿಧಿ ಶಾಲೆಯಲ್ಲಿ ಸಂಭವಿಸಿದ ಘಟನೆ ಶಿಕ್ಷಣ ವಲಯವನ್ನೇ ಬೆಚ್ಚಿಬೀಳಿಸಿದೆ. ಎಂಟನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ನಾಲ್ವರು ಶಿಕ್ಷಕರು ಸೇರಿ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದ್ದು, ಹಲ್ಲೆಯಿಂದ ಪ್ರಜ್ಞೆ ಕಳೆದುಕೊಂಡ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಗ್ರಾಮದ ನಿವಾಸಿಯಾದ ಸುಶಾಂತ್ ಎಂಬ ಎಂಟನೇ ತರಗತಿ ವಿದ್ಯಾರ್ಥಿ ವಿದ್ಯಾನಿಧಿ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ತರಗತಿಯಲ್ಲಿ ಸಹಪಾಠಿಯೊಬ್ಬರ ಪುಸ್ತಕದ ಪುಟ ಹರಿದಿದ್ದಾನೆ ಎಂಬ ಕಾರಣ ಮುಂದಿಟ್ಟುಕೊಂಡು, ಶಾಲೆಯ ಶಿಕ್ಷಕರು ಅವನನ್ನು ಕರೆದು ಕಠಿಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ನಾಲ್ವರು ಶಿಕ್ಷಕರು ಸೇರಿ ಸುಶಾಂತ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಯಿಂದ ಪ್ರಜ್ಞೆ ತಪ್ಪಿ ಕುಸಿದುಬಿದ್ದ ಬಾಲಕ

ಶಿಕ್ಷಕರ ಹಲ್ಲೆಯಿಂದ ಸುಶಾಂತ್ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಶಾಲಾ ಸಿಬ್ಬಂದಿಯೇ ತಕ್ಷಣವೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವಿದ್ಯಾರ್ಥಿಗೆ ಚಿಕಿತ್ಸೆ ಮುಂದುವರಿದಿದ್ದು, ವೈದ್ಯರ ಪ್ರಕಾರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

ಪೋಷಕರ ಗಂಭೀರ ಆರೋಪ

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸುಶಾಂತ್ ಪೋಷಕರು ಹಾಗೂ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿ, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡಬೇಕಾದ ಶಿಕ್ಷಕರೇ ಹಲ್ಲೆ ನಡೆಸಿರುವುದು ಕ್ಷಮಿಸಲಾಗದ ಅಪರಾಧ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ನಾಲ್ವರು ಶಿಕ್ಷಕರ ವಿರುದ್ಧ ಆರೋಪ

ವಿದ್ಯಾರ್ಥಿ ಸುಶಾಂತ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಶಿಕ್ಷಕರಾದ ದೇವರಾಜು, ಹೇಮಾವತಿ, ವನಜಾಕ್ಷಿ ಸೇರಿದಂತೆ ಇತರ ಸಿಬ್ಬಂದಿಗಳ ಹೆಸರುಗಳು ಕೇಳಿಬಂದಿವೆ. ಈ ಘಟನೆಯು ಶಾಲೆಯೊಳಗಿನ ಶಿಸ್ತು ಮತ್ತು ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಪೊಲೀಸ್ ಕ್ರಮದ ನಿರೀಕ್ಷೆ

ಘಟನೆಗೆ ಸಂಬಂಧಿಸಿದಂತೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಿದ್ಧತೆ ನಡೆಸಿದ್ದಾರೆ . ಶಿಕ್ಷಣ ಸಂಸ್ಥೆಯೊಳಗೆ ನಡೆದಿರುವ ಈ ಹಲ್ಲೆ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಮೇಲೆ ಶಿಕ್ಷಕರ ದೌರ್ಜನ್ಯ ತಡೆಗಟ್ಟಲು ಕಠಿಣ ಕ್ರಮಗಳ ಅಗತ್ಯವಿದೆ ಎಂಬ ಒತ್ತಡ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ.

PREV
Read more Articles on
click me!

Recommended Stories

ಗದಗ : ನಿತ್ಯ 2 ಗಂಟೆ ಮೊಬೈಲ್, ಟಿವಿ ಸ್ವಿಚ್ ಆಫ್‌ಗೆ ಡಂಗೂರ!
ಗದ್ದೆ ಅಂಚಲ್ಲಿ uniform ಹಾಕ್ಕೊಂಡು ಎಣ್ಣೆ ಹೊಡೀತಾ ಇರೋ ಹೈಸ್ಕೂಲ್ ಹುಡ್ಗೀರು, parents shock! ವಿಡಿಯೋ ವೈರಲ್