SSLC ಪರೀಕ್ಷೆ: ಅಂಗವಿಕಲ ಪರೀಕ್ಷಾರ್ಥಿಗಳಿಗೆ ಸಂಕಷ್ಟ

Kannadaprabha News   | Asianet News
Published : Apr 05, 2021, 10:07 AM ISTUpdated : Apr 05, 2021, 10:15 AM IST
SSLC ಪರೀಕ್ಷೆ: ಅಂಗವಿಕಲ ಪರೀಕ್ಷಾರ್ಥಿಗಳಿಗೆ ಸಂಕಷ್ಟ

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿಯಲ್ಲಿ ವಿಶೇಷ ಮಕ್ಕಳಿಗೆ ಸಹಾಯಕರ ನೇಮಕಕ್ಕೆ ಮಾನದಂಡ ನಿಗದಿಪಡಿಸಿದ ಶಿಕ್ಷಣ ಇಲಾಖೆ| ಪರೀಕ್ಷಾರ್ಥಿಯ ವಿದ್ಯಾರ್ಹತೆಗಿಂತ ಒಂದು ಹಂತ ಕೆಳಗಿರಬೇಕು ಎಂಬ ನಿಬಂಧನೆ| ಅಂಗವಿಕಲ ಪರೀಕ್ಷಾರ್ಥಿಗಳ ಪೋಷಕರನ್ನು ಸಂಕಷ್ಟಕ್ಕೆ ತಳ್ಳಿದ ಸರ್ಕಾರದ ಹೊಸ ಮಾನದಂಡ| 

ಆತ್ಮಭೂಷಣ್‌

ಮಂಗಳೂರು(ಏ.05):  ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಅಂಗವಿಕಲ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಓದುವ ಹಾಗೂ ಬರೆಯುವ ಸಹಾಯಕರಿಗಾಗಿ ಈಗ ಪೋಷಕರು ಹುಡುಕಾಟ ನಡೆಸುವಂತಾಗಿದೆ.

ಶಿಕ್ಷಣ ಇಲಾಖೆಯ ಪ್ರೌಢ ಶಿಕ್ಷಣ ವಿಭಾಗದ ಅಧೀನ ಕಾರ್ಯದರ್ಶಿಗಳು ಮಾ.15ರಂದು ಹೊರಡಿಸಿದ ಅಂಗವಿಕಲ ವಿದ್ಯಾರ್ಥಿಗಳ ಪರೀಕ್ಷಾ ಸೌಲಭ್ಯದ ಆದೇಶದಲ್ಲಿ(ಆದೇಶ ಸಂಖ್ಯೆ ಇಪಿಎಸ್‌ಎಲ್‌ಬಿ 2021)1ರಿಂದ 3 ಕ್ರಮಾಂಕದಲ್ಲಿ ಹೊಸ ಷರತ್ತು ಹಾಕಲಾಗಿದೆ. ಅದರ ಪ್ರಕಾರ, ಅಂಗವಿಕಲ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಸಹಾಯಕರ ನೆರವನ್ನು ಪಡೆಯಬೇಕಾದರೆ, ಪರೀಕ್ಷಾರ್ಥಿಯ ವಿದ್ಯಾರ್ಹತೆಗಿಂತ ಒಂದು ಹಂತ ಕೆಳಗಿರಬೇಕು ಎಂಬ ನಿಬಂಧನೆ ವಿಧಿಸಲಾಗಿದೆ. ಇದರಿಂದಾಗಿ ಈಗಾಗಲೇ ಪರೀಕ್ಷಾರ್ಥಿಗಳ ನೆರವಿಗೆ ಹೆಸರು ನೀಡಿರುವವರ ಸ್ಥಾನಕ್ಕೆ ಬೇರೊಬ್ಬರನ್ನು ನಿಯೋಜಿಸಬೇಕಾದ ಅನಿವಾರ್ಯತೆಯಲ್ಲಿ ವಿಶೇಷ ಮಕ್ಕಳ ಪೋಷಕರು ಸಿಲುಕಿದ್ದಾರೆ.

2016ರ ಅಂಗವಿಕಲರ ಕಾಯ್ದೆಯ ಅಧ್ಯಾಯ 3, ಕಲಂ 17(ಐ) ಪ್ರಕಾರ, ಅಂಗವಿಕಲ ವಿದ್ಯಾರ್ಥಿಗಳು ಬೇರೆಯವರ ನೆರವಿನೊಂದಿಗೆ ಪರೀಕ್ಷೆ ಬರೆಯಲು ಅವಕಾಶ ಇದೆ. ಅದಕ್ಕೆ ನಿರ್ದಿಷ್ಟವಿದ್ಯಾರ್ಹತೆ ಅಥವಾ ವಯೋಮಿತಿಯವರೇ ಆಗಿರಬೇಕು ಎಂಬ ಷರತ್ತು ವಿಧಿಸಿಲ್ಲ. ಯಾರು ಬೇಕಾದರೂ ಅಂಗವಿಕಲ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ನೆರವಾಗಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈಗ ಹೊರಡಿಸಿರುವ ಆದೇಶದಲ್ಲಿ ಶರ್ತ ವಿಧಿಸಿರುವುದು ಅಂಗವಿಕಲ ವಿದ್ಯಾರ್ಥಿಗಳ ಪೋಷಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

1-9 ನೇ ತರಗತಿಗಳಿಗೆ ಎಕ್ಸಾಂ ಮಾಡಬೇಕಾ? ಶಿಕ್ಷಣ ಇಲಾಖೆಯಲ್ಲಿ ಇಂದು ಮಹತ್ವದ ಸಭೆ

ಷರತ್ತು ತಂದ ಸಂಕಷ್ಟ

ಎಸ್‌ಎಸ್‌ಎಲ್‌ಸಿ ಅಂಗವಿಕಲ ಪರೀಕ್ಷಾರ್ಥಿಯ ವಿದ್ಯಾರ್ಹತೆಯ ಒಂದು ಹಂತ ಕೆಳಗೆ ಎಂದರೆ, ಒಂಭತ್ತನೇ ತರಗತಿ ಅಥವಾ ಅದಕ್ಕಿಂತ ಕೆಳ ಹಂತದ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲು ನೆರವಾಗಬಹುದು ಎಂದಾಗುತ್ತದೆ. ಇಲ್ಲವೇ ಪರೀಕ್ಷಾರ್ಥಿಯ ವಿದ್ಯಾರ್ಹತೆಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ ಪೋಷಕರು ಅಥವಾ ಯಾರೂ ಪರೀಕ್ಷೆಗೆ ನೆರವಾಗಬಹುದು ಎಂದು ಹೇಳಿದಂತಾಗಿದೆ. ಇದುವೇ ಅಂಗವಿಕಲ ಪರೀಕ್ಷಾರ್ಥಿಗಳ ಪೋಷಕರನ್ನು ಸಂಕಷ್ಟಕ್ಕೆ ತಳ್ಳಿದೆ.
ಈಗಾಗಲೇ ಎಲ್ಲ ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಅಂಗವಿಕಲ ಪರೀಕ್ಷಾರ್ಥಿಗಳು ಹಾಗೂ ನೆರವನ್ನು ಪಡೆಯುವವರ ಹೆಸರನ್ನು ನೋಂದಾಯಿಸಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ. ಈಗ ಮತ್ತೆ ಬದಲಾವಣೆ ಮಾಡಬೇಕಾಗುತ್ತದೆ. ಆದರೆ ಅದು ಅಷ್ಟು ಸುಲಭವಲ್ಲ ಎನ್ನುವುದು ಪೋಷಕರ ಅಭಿಪ್ರಾಯ.

ಪರೀಕ್ಷೆ ಬರೆಯಲು ನೆರವು ನೀಡುವವರನ್ನು ಬದಲಾಯಿಸುವುದು ಕಡ್ಡಾಯ ಎಂದಾದರೆ, ಯಾರನ್ನು ಮಾಡುವುದು ಎಂಬ ಗೊಂದಲಕ್ಕೆ ಪೋಷಕರು ಒಳಗಾಗಿದ್ದಾರೆ. ಒಂಭತ್ತನೇ ತರಗತಿ ಅಥವಾ ಅದಕ್ಕಿಂತ ಕೆಳಹಂತದ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿ ಬಗ್ಗೆ ಅರಿವು ಇರುವುದಿಲ್ಲ. ಹಾಗಿರುವಾಗ ಅಂತಹವರನ್ನು ಸಹಾಯಕರಾಗಿ ನೇಮಕ ಮಾಡುವುದು ಸುಲಭವಾಗದು. ಈಗ ಕೋವಿಡ್‌ ಭೀತಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರೇ ಹಿಂದೇಟು ಹಾಕುವ ಪರಿಸ್ಥಿತಿ ಬೇರೆ.

ಕೋವಿಡ್‌ 2ನೇ ಅಲೆ: ಸರ್ಕಾರಿ ಶಾಲೆ, ಪೋಷಕರಿಗೆ ಬೇಕಿಲ್ಲ 1-9 ಪರೀಕ್ಷೆ

ಪರೀಕ್ಷಾರ್ಥಿಯ ವಿದ್ಯಾರ್ಹತೆಗಿಂತ ಒಂದು ಹಂತ ಕಡಿಮೆ ಕಲಿತಿರುವ ಪೋಷಕರು ಸಂಬಂಧಿಕರು, ಸ್ನೇಹಿತರು ಇದ್ದಾರೆಯೇ ಎಂದು ಹುಡುಕಾಟ ನಡೆಸಬೇಕು. ಇದು ಸುಲಭದ ಮಾತಲ್ಲ. ಹೀಗಾಗಿ ಮುಂದೇನು ಮಾಡಬೇಕು ಎಂಬ ಚಿಂತೆ ಪೋಷಕರಲ್ಲಿ ಆವರಿಸಿದೆ.

ನನ್ನ ಮಗನಿಗೆ 10ನೇ ತರಗತಿ ಪರೀಕ್ಷೆ ಬರೆಯಲು ತೊಂದರೆ ಇದೆ. ಹಾಗಾಗಿ ಸಹಾಯಕರ ನೆರವು ಬೇಕಾಗುತ್ತದೆ. ಈಗ ಅದಕ್ಕೆ ಮಾನದಂಡ ನಿಗದಿಪಡಿಸಿರುವುದರಿಂದ ಏನು ಮಾಡಬೇಕು ಎಂದು ತೋಚುತ್ತಿಲ್ಲ. ಕೋವಿಡ್‌ ಕಾರಣಕ್ಕೆ 9ನೇ ತರಗತಿಯ ಮಕ್ಕಳನ್ನು ಕಳುಹಿಸಲು ಪೋಷಕರು ಒಪ್ಪುತ್ತಿಲ್ಲ. ಹಾಗಾಗಿ ಇಲಾಖೆಯ ಈ ಧೋರಣೆ ವಿರುದ್ಧ ವಿಶೇಷ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ ಎಂದು ಅಂಗವಿಕಲ ವಿದ್ಯಾರ್ಥಿಯ ತಾಯಿ ವಿನಯ ಶಂಕರಿ ಉಜಿರೆ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶದಂತೆ ಅಂಗವಿಕಲ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಬರೆಯಲು ಬೇಕಾದ ಎಲ್ಲ ಸವಲತ್ತುಗಳನ್ನು ನೀಡಲಾಗುತ್ತಿದೆ. ಆದರೆ ಸಹಾಯಕರಾಗಬಯಸುವವರಿಗೆ ಮಾನದಂಡ ನಿಗದಿಪಡಿಸಿದ ವಿಚಾರ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಬೆಂಗಳೂರು ಶಿಕ್ಷಣ ಇಲಾಖೆಯ ಕಮಿಷರ್‌ ಅನ್ಬು ಕುಮಾರ್‌ ತಿಳಿಸಿದ್ದಾರೆ. 

PREV
click me!

Recommended Stories

20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಧಾನ, ಇಬ್ಬರು ಮಕ್ಕಳಿಗೆ ಮರಣೋತ್ತರ ಪ್ರಶಸ್ತಿ ಕೊಟ್ಟಿದ್ಯಾಕೆ?
ಸೆರೆಬ್ರಲ್ ಪಾಲ್ಸಿ ನರದ ಸಮಸ್ಯೆ ಇದ್ದರೂ ಎಲ್ಲವನ್ನು ಮೆಟ್ಟಿನಿಂತು ಮೊದಲ ಪ್ರಯತ್ನದಲ್ಲೇ UPSC ಪಾಸಾದ ಮನ್ವೇಂದ್ರ!