ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸ್ಮಾರ್ಟ್‌ಕ್ಲಾಸ್‌ ರೂಂ ಅಭಿವೃದ್ಧಿ: ಅಶ್ವತ್ಥನಾರಾಯಣ

By Suvarna News  |  First Published Jul 10, 2021, 3:51 PM IST

* ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ವಿತರಿಸಿದ ‌ಅಶ್ವತ್ಥನಾರಾಯಣ
* ಇಂಥಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಜನೆ ಮಾಡಬೇಕು
* ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಮೈಮರೆಯಬಾರದು


ಬೆಂಗಳೂರು(ಜು.10): ಕೋವಿಡ್‌ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗದಂತೆ ರಾಜ್ಯ ಸರ್ಕಾರ ಡಿಜಿಟಲ್‌ ಕಲಿಕೆಗೆ ಹೆಚ್ಚು ಒತ್ತು ನೀಡಿದೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದ್ದಾರೆ. 

ಇಂದು(ಶನಿವಾರ) ಮಲ್ಲೇಶ್ವರದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌, ಪಿಸಿಗಳನ್ನು ವಿತರಣೆ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಮಾಡಿ ಅವರು ಮಾತನಾಡಿದರು.  ಕೆಲ ದಿನಗಳಲ್ಲೇ ರಾಜ್ಯದ ಉನ್ನತ ವಿಭಾಗದಲ್ಲಿರುವ 8,500 ತರಗತಿ ಕೊಠಡಿಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಸ್ಮಾರ್ಟ್‌ಕ್ಲಾಸ್‌ ರೂಂಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಪೈಕಿ 2,500 ಕೊಠಡಿಗಳನ್ನು ಈಗಾಗಲೇ ಸ್ಮಾರ್ಟ್‌ಕ್ಲಾಸ್‌ ರೂಂಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಕಾಲೇಜಿನಲ್ಲೂ ಎಲ್ಲ ತರಗತಿ ಕೊಠಡಿಗಳನ್ನೂ ಸ್ಮಾರ್ಟ್‌ಕ್ಲಾಸ್‌ ರೂಂಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಹೇಳಿದರು. 

Tap to resize

Latest Videos

ಇದಕ್ಕೆ ಪೂರಕವಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ 1.10 ಲಕ್ಷ ಲ್ಯಾಪ್‌ಟಾಪ್‌ಗಳನ್ನು ಎಲ್ಲ ಪದವಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿತ್ತು. ಅದಕ್ಕಾಗಿ 330 ಕೋಟಿ ರೂ. ಖರ್ಚು ಮಾಡಲಾಗಿತ್ತು. ಅದೇ ರೀತಿ ಈ ಶೈಕ್ಷಣಿಕ ವರ್ಷದಲ್ಲಿ 1.60 ಲಕ್ಷದಷ್ಟು ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ಪಿಸಿಗಳನ್ನು ವಿತರಣೆ ಮಾಡಲಾಗಿದೆ ಎಂದು ಅವರು ಹೇಳಿದರು. 

ದೇಶದಲ್ಲೇ ಮೊದಲು: ಬೆಂಗ್ಳೂರಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ಉಪಗ್ರಹ..!

ವಿದ್ಯಾರ್ಥಿಗಳಿಗೆ ಡಿಜಿಟಲ್‌ ಪರಿಕರಗಳನ್ನು ಕೊಟ್ಟು ಸುಮ್ಮನಾಗಲಿಲ್ಲ ಸರ್ಕಾರ. ಬದಲಿಗೆ ಕಲಿಕಾ ವ್ಯವಸ್ಥೆಯನ್ನು ರೂಪಿಸಿತು. ಇಡೀ ದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲದ ಕ್ರಾಂತಿಕಾರಿ ವ್ಯವಸ್ಥೆ ಇದು. ಯಾವುದೇ ಖಾಸಗಿ ವಿವಿಗೂ ರೂಪಿಸಲು ಸಾಧ್ಯವಾಗದ ಉಪಕ್ರಮ ಇದು ಎಂದರು ಡಿಸಿಎಂ. 

ಅತ್ಯುತ್ತಮ ಕಂಟೆಂಟ್‌ ಜತೆಗೆ, ಪರಿಣಾಮಕಾರಿ ಕಲಿಕೆ ಎಲ್ಲ ಆಯಾಮಗಳಲ್ಲೂ ಸಹಕಾರಿಯಾದ ವ್ಯವಸ್ಥೆ ಇದು. 3.5 ಲಕ್ಷ ತರಗತಿಗಳನ್ನು ನಮ್ಮದೇ ಬೋಧಕರು ಅಪ್‌ಲೋಡ್‌ ಮಾಡಿದ್ದಾರೆ.  ಇಂಥ ಅದ್ಭುತ ಯೋಜನೆಗೆ ಸರ್ಕಾರ ಖರ್ಚು ಮಾಡಿದ್ದು ಕೇವಲ 4 ಕೋಟಿ ರೂ. ಮಾತ್ರ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 

ಇಂಥ ಉತ್ತಮ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಜನೆ ಮಾಡಬೇಕು. ಯಾವುದೇ ಕಾರಣಕ್ಕೂ ಮೈಮರೆಯಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 
ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಎಸ್.ಪ್ರತಿಮಾ‌, ಐಕ್ಯೂಎಸಿ ಸಂಚಾಲಕ ಡಾ.ಸಿ.ಸ್ವಾಮಿನಾಥನ್‌ ಹಾಗೂ ನ್ಯಾಕ್‌ ಸಂಚಾಲಕಿ ಪಿ.ಎನ್.‌ಜಯಂತಿ ಹಾಗೂ ಪ್ರಾಧ್ಯಾಪಕರಾದ ರವಿಶಂಕರ್‌, ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.
 

click me!