ಶೀರ್ಷಾಸನದಲ್ಲಿ ಶಿವತಾಂಡವ ಸ್ತೋತ್ರ: ಶಿರಸಿಯ 8 ವರ್ಷದ ಬಾಲಕನಿಗೆ ಒಲಿದ ಅಂತರಾಷ್ಟ್ರೀಯ ಪ್ರಶಸ್ತಿ

Published : May 02, 2026, 01:37 PM IST
OM N

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 8 ವರ್ಷದ ಓಂ ಎನ್ನುವ ಬಾಲಕ, ಶೀರ್ಷಾಸನ ಭಂಗಿಯಲ್ಲಿ ಶಿವ ತಾಂಡವ ಸ್ತೋತ್ರವನ್ನು ಪಠಿಸಿ ಅಂತರಾಷ್ಟ್ರೀಯ ದಾಖಲೆ ಬರೆದಿದ್ದಾನೆ. ಕೇವಲ 3 ನಿಮಿಷ 47 ಸೆಕೆಂಡುಗಳಲ್ಲಿ ಈ ಸ್ತೋತ್ರ ಪಠಿಸಿದ ಈತನ ಸಾಧನೆಗೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ವಿಶ್ವ ದಾಖಲೆ ಪ್ರಶಸ್ತಿ ನೀಡಿ ಗೌರವಿಸಿದೆ.

ಕೆಲವರಿಗೆ ಹುಟ್ಟುತ್ತಲೇ ಯಾವುದೋ ಒಂದು ಕಲೆ ಒಲಿದಿರುತ್ತದೆ. ಅದು ಹೋದ ಜನ್ಮದ ಬಂಧವೇ ಇರಬೇಕು ಎಂದು ಹೇಳುವುದು ಉಂಟು. ಇನ್ನೂ ವರ್ಷ ತುಂಬುವ ಒಳಗೇ ಅದೆನೇನೋ ಸಾಧನೆ ಮಾಡಿರುವ ಮಕ್ಕಳಿದ್ದರೆ, 2-3 ವರ್ಷದಲ್ಲಿಯೇ ದಾಖಲೆ ಬರೆದು ಎಲ್ಲರ ಹುಬ್ಬೇರಿಸುವ ಮಕ್ಕಳೂ ಇರುತ್ತಾರೆ. ಕೆಲವೊಮ್ಮೆ ಮನೆಯ ಸಂಸ್ಕಾರ ಇದಕ್ಕೆ ಕಾರಣವಾದರೂ, ಮತ್ತೆ ಕೆಲವು ಪುಟಾಣಿಗಳಿಗೆ ಅದ್ಹೇಗೆ ಆ ಕಲೆ ಒಲಿಯುತ್ತದೆಯೋ ಆ ದೇವರೇ ಬಲ್ಲ ಎನ್ನುವ ಮಾತುಗಳು ಕೇಳಿಬರುವುದು ಉಂಟು.

8 ವರ್ಷದ ಬಾಲಕನ ಸಾಧನೆ

ಅಂಥದ್ದೇ ಒಂದು ಪುಟಾಣಿ ಇದೀಗ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 8 ವರ್ಷದ ಓಂ ಎನ್. ಎನ್ನುವ ಬಾಲಕ ಶಿವ ತಾಂಡವ ಸ್ತೋತ್ರವನ್ನು 3 ನಿಮಿಷ 47 ಸೆಕೆಂಡುಗಳಲ್ಲಿ ಪಠಿಸುವ ಮೂಲಕ ಅಂತರಾಷ್ಟ್ರೀಯ ದಾಖಲೆ ಬರೆದಿದ್ದಾನೆ. ಅಷ್ಟಕ್ಕೂ ಇವನು ಹಾಗೆಯೇ ಇದನ್ನು ಪಠಿಸಿದ್ದಲ್ಲ. ಬದಲಿಗೆ ಶೀರ್ಷಾಸನ ಹಾಕುವ ಮೂಲಕ ಅಂದರೆ ತಲೆಕೆಳಗಾಗಿ ನಿಲ್ಲುವ ಮೂಲಕ, ಕೈಯನ್ನು ಮುಗಿದು ಈ ಸ್ತೋತ್ರ ಹೇಳಿದ್ದಾನೆ. ಬಾಲಕನ ಗಮನಾರ್ಹ ಪ್ರತಿಭೆ ಮತ್ತು ಸಮರ್ಪಣೆಗೆ ಅಂತರರಾಷ್ಟ್ರೀಯ ದಾಖಲೆ ಪುಸ್ತಕದಲ್ಲಿ ಪ್ರತಿಷ್ಠಿತ ವಿಶ್ವ ದಾಖಲೆಯನ್ನು ಗಳಿಸಿಕೊಟ್ಟಿದೆ.

ಮೂರನೆಯ ಕ್ಲಾಸ್​ ವಿದ್ಯಾರ್ಥಿ

ಶಿರಸಿಯ ಇಸಳೂರಿನ ಶ್ರೀನಿಕೇತನ ಶಾಲೆಯ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ ಓಂ. ಮಹಾಶಿವರಾತ್ರಿಯ ಪ್ರಯುಕ್ತ ಓಂ ಶೀರ್ಷಾಸನ ಭಂಗಿಯಲ್ಲಿ ಕೇವಲ ಮೂರು ನಿಮಿಷ 47 ಸೆಕೆಂಡುಗಳಲ್ಲಿ ಶಿವತಾಂಡವ ಸ್ತೋತ್ರವನ್ನ ಪಠಿಸಿ ಎಲ್ಲರ ಗಮನ ಸೆಳೆದಿದ್ದ. ಇದೀಗ ಈ ವಿಶಿಷ್ಟ ಸಾಧನೆಯನ್ನು ಗುರುತಿಸಿದ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಬಾಲಕನಿಗೆ ವಿಶ್ವ ದಾಖಲೆ ಪ್ರಶಸ್ತಿ ನೀಡಿ ಗೌರವಿಸಿದೆ. ಅಷ್ಟಕ್ಕೂ ಈ ಬಾಲಕನ ಸಾಧನೆ ಇಲ್ಲಿಗೇ ಮುಗಿದಿಲ್ಲ. ಆರು ವರ್ಷದ ಪುಟಾಣಿ ಇರುವಾಗಲೇ ಒಂದು ನಿಮಿಷ 42 ಸೆಕೆಂಡುಗಳಲ್ಲಿ ಏಷ್ಯಾ ಖಂಡದ 48 ದೇಶಗಳ ಹೆಸರು ರಾಜಧಾನಿ ಮತ್ತು ಕರೆನ್ಸಿಗಳನ್ನು ನೋಡದೆ ಸರಾಗವಾಗಿ ಹೇಳಿ ದಾಖಲೆ ನಿರ್ಮಿಸಿದ್ದ.

ಶಿರಸಿಯ ನಿವೃತ್ತ ಸೈನ್ಯಾಧಿಕಾರಿ ಶ್ರೀನಿವಾಸ್ ನಾಯಕ್ ಹಾಗೂ ಉಪನ್ಯಾಸಕಿ ಡಾಕ್ಟರ್ ಅಪರ್ಣ ಕರ್ಕಿ ಅವರ ಪುತ್ರನಾಗಿರುವ ಓಂ ಪ್ರತಿಭೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

 

PREV
Read more Articles on
click me!

Recommended Stories

ದಿನಕ್ಕೆ 10 ಬಾರಿ ಕೆಲಸ ಬಿಡ್ತೀನಿ ಅಂತ ಹೇಳ್ತಿರ್ತೀರಾ? ರಿಸೈನ್‌ ಮಾಡೋ ಮುನ್ನ ಮಾಡಬೇಕಾದ ಕೆಲಸಗಳಿವು!
NEET: ನೀಟ್‌ ಬರೆದಿದ್ದ ಕಲಬುರಗಿ ಹುಡ್ಗಿ ಸಾವಿಗೆ ಶರಣು; ಪರೀಕ್ಷೆ ರದ್ದಾದ ಬಳಿಕ ರಾಜ್ಯದಲ್ಲಿ 2ನೇಬಲಿ!