545 ಪಿಎಸೈ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸುವಂತೆ ಇತ್ತೀಚಿಗಷ್ಟೇ ಹೈಕೋರ್ಟ್ ನೀಡಿದ ಆದೇಶದನ್ವಯ ರಾಜ್ಯ ಸರ್ಕಾರ ಬರುವ ಡಿಸೆಂಬರ್ 23ರಂದು ಮರು ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಧಾರವಾಡ (ನ.24): 545 ಪಿಎಸೈ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸುವಂತೆ ಇತ್ತೀಚಿಗಷ್ಟೇ ಹೈಕೋರ್ಟ್ ನೀಡಿದ ಆದೇಶದನ್ವಯ ರಾಜ್ಯ ಸರ್ಕಾರ ಬರುವ ಡಿಸೆಂಬರ್ 23ರಂದು ಮರು ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಮರುಪರೀಕ್ಷೆಯ ಆದೇಶ ಸ್ವಾಗತಿಸಿದ್ದ ಪರೀಕ್ಷಾ ಆಕಾಂಕ್ಷಿಗಳು ಇದೀಗ ಮುಂದಿನ ತಿಂಗಳು ಪರೀಕ್ಷೆ ನಡೆಸಲು ನಿರ್ಧರಿಸಿರುವ ಪ್ರಾಧಿಕಾರದ ತೀರ್ಮಾನವನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಧಾರವಾಡದಲ್ಲಿ ನೂರಾರು ಆಕಾಂಕ್ಷಿಗಳು ಪರೀಕ್ಷಾ ದಿನಾಂಕವನ್ನು ವಿರೋಧಿಸಿದ್ದು, ಕನಿಷ್ಠ ಮೂರು ತಿಂಗಳಾದರೂ ಕಾಲಾವಕಾಶ ನೀಡಲು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
undefined
ಇನ್ನೊಂದು ತಿಂಗಳ ಕಾಲಾವಧಿ ತೀರಾ ಕಡಿಮೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡುವ ಪ್ರಶ್ನೆ ಪತ್ರಿಕೆಯ ಮಾದರಿಯೂ ಗೊತ್ತಿಲ್ಲ. ಯಾವ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂಬ ಆತಂಕ ಶುರುವಾಗಿದೆ. ನಾವು ಮರುಪರೀಕ್ಷೆಗಾಗಿ ಹೋರಾಟದಲ್ಲಿಯೇ ವೇಳೆಯನ್ನು ಕಳೆದಿದ್ದೇವೆ. ಹೋರಾಟ, ಪ್ರತಿಭಟನೆಗಾಗಿಯೇ ಸಾಕಷ್ಟು ಸಮಯ ವ್ಯಯವಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲಾಗಿಲ್ಲ ಎನ್ನುವ ಅಭ್ಯರ್ಥಿಗಳು ಕನಿಷ್ಠ ಮೂರು ತಿಂಗಳ ಅವಧಿ ಕೇಳಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ 4,547 ಹುದ್ದೆ ಭರ್ತಿ: ಸಚಿವ ಪರಮೇಶ್ವರ್
ಬಿಲ್ ಪಾಸಾದ ನಂತರ
ಇದೇ ವೇಳೆ ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಅಕ್ರಮ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾಯ್ದೆಯನ್ನು ತರಬೇಕು. ಆ ಬಿಲ್ ಇದೇ ಅಧಿವೇಶನದಲ್ಲಿ ಪಾಸ್ ಆಗಬೇಕು. ಬಳಿಕವಷ್ಟೇ ಈ ಮರು ಪರೀಕ್ಷೆ ನಡೆಸುವಂತೆಯೂ ಪರೀಕ್ಷಾರ್ಥಿಗಳು ಒತ್ತಾಯಿಸುತ್ತಿದ್ದಾರೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಪಿಎಸ್ಐ ಪರೀಕ್ಷಾರ್ಥಿ ರವಿಶಂಕರ ಪಾಟೀಲ್, ಪಿಎಸೈ ಮರು ಪರೀಕ್ಷೆಯ ಹೋರಾಟದ ಆರಂಭದಲ್ಲಿ ಎಲ್ಲ ಕಡೆ ನಿರಾಸೆ ಉಂಟಾಗಿತ್ತು. ಯಾವಾಗ ಹಿಂದಿನ ಸರ್ಕಾರ ತನಿಖೆಯನ್ನು ಸಿಒಡಿಗೆ ವಹಿಸಿತೋ ಆಗ ಕೊಂಚ ನೆಮ್ಮದಿಯಾಗಿತ್ತು. ಬಳಿಕ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಸೇರಿದಂತೆ ಒಟ್ಟು 110 ಜನರನ್ನು ಬಂಧಿಸಿದ್ದನ್ನು ನೋಡಿದ ಮೇಲೆ ಇದರಲ್ಲಿ ಏನೆಲ್ಲ ನಡೆದಿರಬಹುದು ಎಂಬ ಅಂದಾಜು ತಿಳಿಯಿತು. ಇದೀಗ ಹೈಕೋರ್ಟ್ ಮರುಪರೀಕ್ಷೆಗೆ ಆದೇಶಿಸಿದ್ದು ಸಮಾಧಾನ ತಂದಿದೆ. ಇದೇ ವೇಳೆ ಇಷ್ಟು ಬೇಗನೇ ಪರೀಕ್ಷೆ ಘೋಷಣೆ ಮಾಡಿದ್ದು ಸರಿಯಲ್ಲ. ಇದುವರೆಗೂ ನಾವೆಲ್ಲ ಬರೀ ಹೋರಾಟದಲ್ಲಿಯೇ ಕಾಲ ಕಳೆದಿದ್ದೇವೆ. ಒಂದೇ ತಿಂಗಳಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸೋದು ಕಷ್ಟ ಎಂದರು.
PSI Recruitment 2023: ಡಿ.23ಕ್ಕೆ ಪಿಎಸ್‌ಐ ಮರುಪರೀಕ್ಷೆ ನಡೆಸಲು ಕೆಇಎ ಆದೇಶ: ಬೆಂಗಳೂರಲ್ಲಿ ಮಾತ್ರ ಅವಕಾಶ
ಮತ್ತೊಬ್ಬ ಪರೀಕ್ಷಾರ್ಥಿ ಕುರುವಂತೆಪ್ಪ ಮಾತನಾಡಿ, ಚಳಿಗಾಲದ ಅಧಿವೇಶನದಲ್ಲಿ ಅಕ್ರಮ ನಿಷೇಧ ಮಸೂದೆಯನ್ನು ಪಾಸ್ ಮಾಡಿದ ಬಳಿಕವಷ್ಟೇ ಮರು ಪರೀಕ್ಷೆ ನಡೆಸಬೇಕು. ಜೊತೆಗೆ ಮರು ಪರೀಕ್ಷೆಯಲ್ಲಿ ಸಣ್ಣ ಅಕ್ರಮವೂ ನಡೆಯದಂತೆ, ಕೊಂಚವೂ ಭ್ರಷ್ಟಾಚಾರ ನಡೆಯದಂತೆ ಎಲ್ಲವೂ ಪಾರದರ್ಶಕತೆಯಿಂದ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ನಮಗೆ ಪರೀಕ್ಷಾ ಮಾದರಿ ಹೇಗಿರುತ್ತದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಕೆಇಎ ಅಧಿಕಾರಿಗಳನ್ನು ಕೇಳಿದರೆ ಅದನ್ನೆಲ್ಲ ಹೇಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ನಾವು ಪೊಲೀಸ್ ನೇಮಕಾತಿ ಪ್ರಾಧಿಕಾರದ ಮಾದರಿಯಲ್ಲಿ ಸಿದ್ಧತೆ ನಡೆಸಿದ್ದೇವೆ. ಆದರೆ ಇದೀಗ ಕೆಇಎ ಹೊಸ ಮಾದರಿ ಪ್ರಯೋಗ ಮಾಡಿದರೆ ಹೇಗೆ? ಎಂಬ ಪ್ರಶ್ನೆ ಎದುರಾಗಿದೆ. ಆದ್ದರಿಂದ ಮೂರು ತಿಂಗಳ ಅವಧಿಯೊಂದಿಗೆ ಮಾದರಿ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ಕೆಇಎ ಸ್ಪಷ್ಟವಾದ ಮಾಹಿತಿ ನೀಡಲೇಬೇಕು. ಬಳಿಕವಷ್ಟೇ ಪರೀಕ್ಷೆ ನಡೆಸಲಿ ಎಂದು ಹಲವು ವರ್ಷಗಳಿಂದ ಪಿಎಸೈ ಪರೀಕ್ಷೆ ಸಿದ್ಧತೆಯಲ್ಲಿರುವ ಅರುಣ ಎಂಬುವರು ಆಗ್ರಹಿಸಿದ್ದು, ಈ ಕುರಿತು ಸರ್ಕಾರ ಯಾವ ನಿರ್ಧಾರ ಕೈಗೊಳ್ಳತ್ತದೆ ಎಂಬುದನ್ನು ಕಾದು ನೋಡಬೇಕಿದೆ.