ಬೆಂಗಳೂರು (ಸೆ.01) : ಶಾಲೆಗಳಲ್ಲಿ ಕೋವಿಡ್ ಹರಡುವುದನ್ನು ತಡೆಯುವ ದೃಷ್ಟಿಯಿಂದ ಈಗಾಗಲೇ ಆರಂಭವಾಗಿರುವ 9 ಮತ್ತು 10ನೇ ತರಗತಿ ಮಕ್ಕಳಿಗೆ ನಡೆಸಿರುವಂತೆ ಸೆ. 6ರಿಂದ ಆರಂಭವಾಗುವ 6 ರಿಂದ 8ನೇ ತರಗತಿ ಮಕ್ಕಳಿಗೂ ಕೋವಿಡ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಪ್ರತಿ ಶಾಲೆಯಲ್ಲಿ ಆಯ್ದ ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಸೋಂಕು ದೃಢಪಟ್ಟಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿ ನಿಗಾ ವಹಿಸಲಾಗುತ್ತದೆ. ಇದರಿಂದ ಶಾಲೆಗಳಲ್ಲಿ ಮಕ್ಕಳಿಗೆ ಕೋವಿಡ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಂಡಂತಾಗುತ್ತದೆ. ಪರೀಕ್ಷೆ ನಡೆಸುವ ಮುನ್ನ ಈ ಬಗ್ಗೆ ಮಕ್ಕಳ ಪೋಷಕರಿಗೂ ಮಾಹಿತಿ ನೀಡಲಾಗುತ್ತದೆ ಎನ್ನುತ್ತಾರೆ ಇಲಾಖಾ ಅಧಿಕಾರಿಗಳು.
ಇಲಾಖೆ ಈಗಾಗಲೇ ಆ.23 ರಿಂದ ಆರಂಭವಾಗಿರುವ 9 ಮತ್ತು 10ನೇ ತರಗತಿ ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸುತ್ತಿದೆ. ಇದುವರೆಗೆ ರಾಜ್ಯಾದ್ಯಂತ 6,000 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 14 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದ್ದು ಅವರಿಗೆ ಸೂಕ್ತ ಚಿಕಿತ್ಸೆ, ನಿಗಾ ವಹಿಸಲಾಗಿದೆ. ಅದೇ ರೀತಿ ಸೆ.6 ರಿಂದ ಶಾಲೆಗೆ ಬರುವ 6 ರಿಂದ 8ನೇ ತರಗತಿ ಮಕ್ಕಳಿಗೂ ರಾರಯಂಡಮ್ ಪರೀಕ್ಷೆ ಮುಂದುವರೆಸಲಾಗುವುದು ಎಂದುಹೇಳಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ಏರಿಕೆ: ಇರಲಿ ಎಚ್ಚರಿಕೆ
ರಾಜ್ಯಾದ್ಯಂತ 38,040ಕ್ಕೂ ಹೆಚ್ಚು ಶಾಲೆಗಳಲ್ಲಿ 6ರಿಂದ 8ನೇ ತರಗತಿಗಳನ್ನು ಆರಂಭಿಸುತ್ತಿದ್ದು, ಇವುಗಳಲ್ಲಿ 31.36 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಪೈಕಿ ತರಗತಿಗೆ ಹಾಜರಾದವರಿಗೆ ರಾರಯಂಡಮ್ ಪರೀಕ್ಷೆ ನಡೆಸಲಾಗುವುದು. ಎಲ್ಲ ಮಕ್ಕಳಿಗೂ ಪರೀಕ್ಷೆ ನಡೆಸುವುದಿಲ್ಲ. ಇದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಈಗಾಗಲೇ ಸೋಂಕು ದೃಢಪಟ್ಟ14 ವಿದ್ಯಾರ್ಥಿಗಳ ಜತೆಗೆ ಅವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನೂ ಪತ್ರೆ ಹಚ್ಚಿ ಅವರ ಮೇಲೂ ನಿಗಾ ವಹಿಸುವ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲ ಕಾರ್ಯಗಳಿಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.