ಖಾಸಗಿ ಶಾಲೆಗಳಿಂದ ಶುಲ್ಕ ಏಕಾಏಕಿ 20% ಏರಿಕೆ! ಧನದಾಹಿ ನಡೆ

By Kannadaprabha NewsFirst Published Apr 26, 2021, 7:36 AM IST
Highlights

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಜನರ ಜೀವ ಜೀವನವನ್ನು ಕಿತ್ತು ತಿನ್ನುತ್ತಿದೆ. ಇದರ ನಡುವೆಯೇ ಇತ್ತ ಖಾಸಗಿ ಶಾಲೆಗಳು ತಮ್ಮ ಧನದಾಹಿ ನಡೆಯನ್ನು ಮುಂದುವರಿಸಿದೆ. 

ವರದಿ : ಎನ್‌.ಎಲ್‌.ಶಿವಮಾದು
 
ಬೆಂಗಳೂರು (ಏ.26):  ಕೊರೋನಾ ಮಹಾಮಾರಿಯ ಎರಡನೇ ಅಲೆಗೆ ಇಡೀ ರಾಜ್ಯದ ಜನರು ಕಂಗೆಟ್ಟು ಜೀವ ಉಳಿಸಿಕೊಂಡರೆ ಸಾಕು ಎನ್ನುತ್ತಿರುವ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಶಿಕ್ಷಣದ ವ್ಯಾಪಾರ ಮುಂದುವರಿಸಿರುವ ಖಾಸಗಿ ಶಾಲೆಗಳು, ಈಗಾಗಲೇ ಮುಂದಿನ ಶೈಕ್ಷಣಿಕ ವರ್ಷದ (2021-22) ಪ್ರವೇಶ ಆರಂಭಿಸಿದ್ದು ಶಾಲಾ ಶುಲ್ಕವನ್ನು ಏಕಾಏಕಿ ಹೆಚ್ಚಳಗೊಳಿಸುವ ಮೂಲಕ ಸುಲಿಗೆಗೆ ಮುಂದಾಗಿವೆ.

ಕಳೆದ ಬಾರಿ ಅಲ್ಪಸ್ವಲ್ಪ ಶುಲ್ಕ ಇಳಿಕೆ ಮಾಡಿದ್ದ ಕೆಲವು ಖಾಸಗಿ ಶಾಲೆಗಳು ಇದೀಗ ಎರಡನೇ ಅಲೆ ತೀವ್ರಗೊಂಡಿರುವುದರ ನಡುವೆಯೇ ಹಿಂದೆ ಇಳಿಕೆ ಮಾಡಿದ್ದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆ ಮಾಡಿ ಸಂದೇಶ ರವಾನಿಸಿವೆ. ಆನ್‌ಲೈನ್‌ ಮೂಲಕ ನಡೆದ ಪಾಲಕರ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಶಾಲಾ ಆಡಳಿತ ಮಂಡಳಿಗಳು ಏರಿಕೆಗೆ ಅನುಗುಣವಾಗಿ ಶುಲ್ಕದ ಮೊದಲ ಕಂತು ಪಾವತಿಸಿ ಮುಂದಿನ ತರಗತಿಗಳ ಪುಸ್ತಕ ಪಡೆಯುವಂತೆ ಸೂಚಿಸಿವೆ.

ನಗರದ ಬಹುತೇಕ ಕೇಂದ್ರ ಪಠ್ಯಕ್ರಮ ಶಾಲೆಗಳು, ಅಂತಾರಾಷ್ಟ್ರೀಯ ಶಾಲೆಗಳು ಹಾಗೂ ಉತ್ತಮ ಮೂಲಸೌಕರ್ಯ, ಬೋಧನಾ ಸಿಬ್ಬಂದಿ ಹೊಂದಿರುವ ಆಂಗ್ಲ ಮಾಧ್ಯಮ ಶಾಲೆಗಳು ಕೂಡ ಈ ಬಾರಿ ಶುಲ್ಕ ಹೆಚ್ಚಳ ಮಾಡುತ್ತಿವೆ. ಹಿಂದಿನ ವರ್ಷ ಶುಲ್ಕ ಹೆಚ್ಚಳ ಮಾಡದಿರುವುದರಿಂದ ಎರಡೂ ವರ್ಷದ ಶುಲ್ಕವನ್ನು ಒಂದೇ ಬಾರಿ ಶೇ.20ರಷ್ಟುಹೆಚ್ಚಳ ಮಾಡಿರುವುದು ಗೊತ್ತಾಗಿದೆ. ಶಾಲೆಗಳ ವ್ಯವಸ್ಥಾಪಕರಿಗೆ ನಿಜಕ್ಕೂ ಮಾನವೀಯತೆ ಇಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Breaking: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ

ಖಾಸಗಿ ಶಾಲೆಗಳ ಲೆಕ್ಕಾಚಾರವೇ ತಿಳಿಯುತ್ತಿಲ್ಲ:

ಪ್ರಸಕ್ತ ಸಾಲಿನ 1ರಿಂದ 9ನೇ ತರಗತಿಗಳಿಗೆ ಸರ್ಕಾರವೇ ಪರೀಕ್ಷೆಗಳನ್ನು ನಡೆಸದೆ ಪಾಸ್‌ ಮಾಡಿದೆ. ಇನ್ನು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ನಡೆದಿಲ್ಲ. ಇನ್ನೂ ಫಲಿತಾಂಶ ಬಂದಿಲ್ಲ. ಬೇಸಿಗೆ ರಜೆ ಕೂಡ ಇನ್ನೂ ಪ್ರಾರಂಭವಾಗಿಲ್ಲ. ಇಂತಹ ಸಮಯದಲ್ಲಿ ಮನಬಂದಂತೆ ಶುಲ್ಕ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ಪೋಷಕರಾದ ನವೀನ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕ್ಯಾಮ್ಸ್‌ನಿಂದಲೇ ಆಕ್ಷೇಪ:

ಶಾಲೆಗಳ ಮೂಲ ಸೌಕರ್ಯ, ಬೋಧನಾ ಗುಣಮಟ್ಟವನ್ನು ನೋಡಿ ಖಾಸಗಿ ಶಾಲೆಗಳ ಸೀಟುಗಳಿಗಾಗಿ ಮುಗಿಬೀಳುವ ಪೋಷಕರು ಎಲ್ಲಿಯವರೆಗೂ ಇರುತ್ತಾರೆಯೋ ಅಲ್ಲಿಯವರೆಗೂ ಕೆಲ ಶಾಲೆಗಳು ಶುಲ್ಕ ಹೆಚ್ಚಳ ಮಾಡುತ್ತಲೇ ಇರುತ್ತವೆ. ಇದಕ್ಕೆ ಸರ್ಕಾರ ಕೂಡ ಕಡಿವಾಣ ಹಾಕುವುದಿಲ್ಲ. ರಾಜ್ಯದಲ್ಲಿ ಇಂತಹ 300ಕ್ಕೂ ಹೆಚ್ಚು ಶಾಲೆಗಳಿವೆ. ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಪೋಷಕರು ಎಚ್ಚೆತ್ತುಕೊಳ್ಳಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟದ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆರ್ಥಿಕವಾಗಿ ಸಬಲರಾಗಿರುವ ಕೆಲವೇ ಶಾಲೆಗಳ ನಡೆಯಿಂದ ಇಡೀ ಖಾಸಗಿ ಶಾಲಾ ಸಮೂಹಕ್ಕೆ ಕೆಟ್ಟಹೆಸರು ಬರುತ್ತಿದೆ. ಮಾತ್ರವಲ್ಲ, ಮಧ್ಯಮ ವರ್ಗದ ಜನ ಮಕ್ಕಳನ್ನು ಕಳುಹಿಸುವ ಶಾಲೆಗಳಲ್ಲಿ ಸರಿಯಾದ ಶುಲ್ಕ ಕೂಡ ಸಂಗ್ರಹವಾಗದೆ ಆಡಳಿತ ಮಂಡಳಿಗಳು ಶಾಲೆ ನಡೆಸುವುದಕ್ಕೆ ಒದ್ದಾಡುತ್ತಿವೆ. ಆದ್ದರಿಂದ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಹೆಚ್ಚಳ ಅನಿವಾರ್ಯ ಎಂದ ಶಾಲೆಗಳು:

ಇಡೀ ಜಗತ್ತೇ ಸಂಕಷ್ಟದಲ್ಲಿರುವ ಸಮಯದಲ್ಲಿಯೂ ಸರ್ಕಾರ ಕೂಡ ನೀರು, ವಿದ್ಯುತ್‌, ಶಾಲಾ ನವೀಕರಣ ಹಾಗೂ ತೆರಿಗೆ ಪಾವತಿಯಲ್ಲಿ ಖಾಸಗಿ ಶಾಲೆಗಳಿಗೆ ಯಾವುದೇ ರೀತಿಯಲ್ಲಿ ರಿಯಾಯಿತಿ ನೀಡಿಲ್ಲ. ಆಟೋ, ಟ್ಯಾಕ್ಸಿ ಚಾಲಕರು ಒಳಗೊಂಡಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರಿಗೆ ಅಲ್ಪ ಪ್ರಮಾಣದಲ್ಲಿ ಆರ್ಥಿಕ ಸಹಾಯ ಮಾಡಿದ ಸರ್ಕಾರ, ಹತ್ತಾರು ಬಾರಿ ಮನವಿ ಮಾಡಿದ್ದರೂ ಬೋಧನಾ ಮತ್ತು ಬೋಧಕೇತರ ಸಿಬ್ಬಂದಿಯ ಸಹಾಯಕ್ಕೂ ಬಂದಿಲ್ಲ. ಈ ವರ್ಷ ಶುಲ್ಕ ಹೆಚ್ಚಳ ಮಾಡದಿರುವುದರಿಂದ ಮುಂದಿನ ವರ್ಷ ಸ್ವಲ್ಪ ಪ್ರಮಾಣದ ಶುಲ್ಕ ಹೆಚ್ಚಳ ಮಾಡುವುದು ಅನಿವಾರ್ಯವಾಗಲಿದೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹೇಳಿವೆ.

ಶಾಲಾ ಒಕ್ಕೂಟ ವಿರೋಧ

ಆರ್ಥಿಕವಾಗಿ ಸಬಲರಾಗಿರುವ ಕೆಲವೇ ಶಾಲೆಗಳ ನಡೆಯಿಂದ ಇಡೀ ಖಾಸಗಿ ಶಾಲಾ ಸಮೂಹಕ್ಕೆ ಕೆಟ್ಟಹೆಸರು ಬರುತ್ತಿದೆ. ಮಾತ್ರವಲ್ಲ, ಮಧ್ಯಮ ವರ್ಗದ ಜನರು ಮಕ್ಕಳನ್ನು ಕಳುಹಿಸುವ ಶಾಲೆಗಳಲ್ಲಿ ಸರಿಯಾದ ಶುಲ್ಕ ಕೂಡ ಸಂಗ್ರಹವಾಗದೆ ಆಡಳಿತ ಮಂಡಳಿಗಳು ಶಾಲೆ ನಡೆಸುವುದಕ್ಕೆ ಒದ್ದಾಡುತ್ತಿವೆ. ಆದ್ದರಿಂದ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಬೇಕು.

- ಡಿ.ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್‌)

click me!