ಉತ್ತರಕನ್ನಡ: ಫೀಸ್ ಕಟ್ಟದ್ದ ಮಕ್ಕಳನ್ನು ಹೊರಗೆ ಕೂರಿಸಿದ ಶಾಲೆ, ಪೋಷಕರ ಆಕ್ರೋಶ

By Girish Goudar  |  First Published Dec 20, 2023, 3:11 AM IST

ಸೇಂಟ್ ಮೈಕಲ್ ಶಾಲೆಯ ಸುಮಾರು 15 ಮಕ್ಕಳನ್ನು ಮುಖ್ಯ ಶಿಕ್ಷಕಿ ಕೊಠಡಿಯ ಚಪ್ಪಲಿ ಬಿಡುವ ಜಾಗದಲ್ಲಿ ಕೂರಿಸಿದ್ದು, ಫೀಸ್ ಕಟ್ಟದ ಹಿನ್ನೆಲೆ ಮಕ್ಕಳನ್ನು ಪರೀಕ್ಷೆಗೆ ಕೂರಿಸದೇ ಶಿಕ್ಷೆ ನೀಡಲಾಗಿದೆ ಎಂದು ಕೆಲ ಪೋಷಕರು ಆರೋಪಿಸಿದ್ದರು. ಮಕ್ಕಳು ಮುಖ್ಯ ಶಿಕ್ಷಕಿ ಕೊಠಡಿಯ ಹೊರಗೆ ನೆಲದ ಮೇಲೆ ಕೂತಿರುವ ಫೋಟೋಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 


ಉತ್ತರಕನ್ನಡ(ಡಿ.20): ಉತ್ತಮ ಶಿಕ್ಷಣ ದೊರೆಯಬೇಕು ಅನ್ನೋ ಉದ್ದೇಶದಿಂದ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ. ಆದರೆ, ಇಲ್ಲೊಂದು ಕಡೆ ಫೀಸ್ ತುಂಬದ ಹಿನ್ನೆಲೆ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಮಕ್ಕಳನ್ನು ಹೊರಗೆ ಕೂರಿಸಿ ಅಮಾನವೀಯವಾಗಿ ನಡೆಸಿಕೊಂಡ ಆರೋಪದ ಬೆನ್ನಲ್ಲೇ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಹ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಾಲೆಯವರು ಮಾತ್ರ ಆರೋಪವನ್ನ ತಳ್ಳಿಹಾಕಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ... 

ಒಂದೆಡೆ ಶಾಲೆಯ ಮುಖ್ಯಶಿಕ್ಷಕಿ ಕೊಠಡಿ ಹೊರಗೆ ಮಕ್ಕಳು ನೆಲದ ಮೇಲೆ ಕೂತಿರುವುದು. ಇನ್ನೊಂದೆಡೆ ಶಾಲೆಗೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆಯುತ್ತಿರುವ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ. ಮತ್ತೊಂದೆಡೆ ಶಾಲೆಯ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಅಲ್ಲಗೆಳೆಯುತ್ತಿರುವ ಶಾಲೆಯ ಮುಖ್ಯ ಶಿಕ್ಷಕಿ. ಇಂತಹದ್ದೊಂದು ಘಟನೆಗೆ ಸಾಕ್ಷಿಯಾಗಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಸೇಂಟ್ ಮೈಕಲ್ ಕಾನ್ವೆಂಟ್ ಸ್ಕೂಲ್ ಆವರಣ. 

Tap to resize

Latest Videos

undefined

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಐವರ ದಾರುಣ ಸಾವು

ನಿನ್ನೆ ಸೇಂಟ್ ಮೈಕಲ್ ಶಾಲೆಯ ಸುಮಾರು 15 ಮಕ್ಕಳನ್ನು ಮುಖ್ಯ ಶಿಕ್ಷಕಿ ಕೊಠಡಿಯ ಚಪ್ಪಲಿ ಬಿಡುವ ಜಾಗದಲ್ಲಿ ಕೂರಿಸಿದ್ದು, ಫೀಸ್ ಕಟ್ಟದ ಹಿನ್ನೆಲೆ ಮಕ್ಕಳನ್ನು ಪರೀಕ್ಷೆಗೆ ಕೂರಿಸದೇ ಶಿಕ್ಷೆ ನೀಡಲಾಗಿದೆ ಎಂದು ಕೆಲ ಪೋಷಕರು ಆರೋಪಿಸಿದ್ದರು. ಮಕ್ಕಳು ಮುಖ್ಯ ಶಿಕ್ಷಕಿ ಕೊಠಡಿಯ ಹೊರಗೆ ನೆಲದ ಮೇಲೆ ಕೂತಿರುವ ಫೋಟೋಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಂಡ ಆರೋಪ ಕೇಳಿ ಬಂದ ಹಿನ್ನೆಲೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ರೇಣುಕಾ ರಾಯ್ಕರ್ ಇಂದು ಸೇಂಟ್ ಮೈಕಲ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಶಾಲೆಯ ಮುಖ್ಯಶಿಕ್ಷಕಿ ಹಾಗೂ ಸಿಬ್ಬಂದಿ ಮಾತ್ರವಲ್ಲದೇ ಕೊಠಡಿಯ ಹೊರಗೆ ಕೂರಿಸಲಾದ ಮಕ್ಕಳ ಪಾಲಕರನ್ನೂ ಸಹ ಕರೆಯಿಸಿ ಪ್ರತ್ಯೇಕವಾಗಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ, ದಾಖಲೆಗಳನ್ನು ಸಹ ಪರಿಶೀಲಿಸಿದಾಗ ಎಲ್ಲ ಮಕ್ಕಳು ಪರೀಕ್ಷೆ ಬರೆದಿರುವುದು ಖಚಿತವಾಗಿದ್ದಾಗಿ ನ್ಯಾಯಮೂರ್ತಿ ರೇಣುಕಾ ರಾಯ್ಕರ್ ತಿಳಿಸಿದ್ದಾರೆ. ಆದರೆ, ಪೋಷಕರು ಹಾಗೂ ಹೋರಾಟಗಾರರು ಮಾತ್ರ ಪ್ರತೀ ಬಾರಿ ಶಾಲೆಯಿಂದ ಮಕ್ಕಳಿಗೆ ಹಾಗೂ ಪೋಷಕರಿಗೆ ಸಮಸ್ಯೆಗಳಾಗುತ್ತಿರುವ ಬಗ್ಗೆ ದೂರಿದ್ದಾರೆ. 

ಉತ್ತಮ ಶಿಕ್ಷಣ ಕೊಡಿಸುವುದು ದೇವರ ಕೆಲಸಕ್ಕೆ ಸಮ: ಸಚಿವ ಮಧು ಬಂಗಾರಪ್ಪ

ಇನ್ನು ಪರಿಶೀಲನೆ ವೇಳೆ ಶಾಲೆಗೆ ತಡವಾಗಿ ಬಂದ ಹಾಗೂ ಪ್ರಾರ್ಥನೆ ವೇಳೆ ಗಲಾಟೆ ಮಾಡಿದ್ದಕ್ಕಾಗಿ ಮಕ್ಕಳನ್ನು ಕೊಠಡಿಯ ಹೊರಗೆ ಕೂರಿಸಿದ್ದಾಗಿ ಶಾಲೆಯವರು ತಿಳಿಸಿದ್ದು, ಫೀಸ್ ಕಟ್ಟಲು ಒತ್ತಾಯ ಹೇರಿರುವ ಆರೋಪವನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಲೆಯ ಮುಖ್ಯ ಶಿಕ್ಷಕರು ಸೇಂಟ್ ಮೈಕಲ್ ಕಾನ್ವೆಂಟ್ ಖಾಸಗಿ ಶಾಲೆಯಾಗಿದ್ದು, ಹೈಸ್ಕೂಲ್ ಮಾತ್ರ ಸರ್ಕಾರಿ ಅನುದಾನವನ್ನು ಹೊಂದಿದೆ. ಯಾರೋ ದುರುದ್ದೇಶದಿಂದ ಶಾಲೆಯ ವಿರುದ್ಧ ಅಪಪ್ರಚಾರ ಮಾಡಿದ್ದು ಫೋಟೋ ವೈರಲ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದಾರೆ. 

ಒಟ್ಟಿನಲ್ಲಿ ಶಾಲೆಯ ಹೆಸರು ಕೆಡಿಸುವ ಉದ್ದೇಶದಿಂದಲೇ ಫೀಸ್ ತುಂಬದ ಕಾರಣ ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾಗಿ ಆರೋಪಿಸಿ ಕೆಲವರು ಫೋಟೋ ವೈರಲ್ ಮಾಡಿದ್ದಾಗಿ ಶಾಲೆಯವರು ದೂರಿದ್ದಾರೆ. ಆದರೆ, ಶಿಕ್ಷೆ ನೀಡಲು ಮಕ್ಕಳನ್ನು ತರಗತಿಯ ಹೊರಗೆ ಕೂರಿಸಿದ್ದು ಎಷ್ಟರಮಟ್ಟಿಗೆ ಸರಿ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

click me!