ವೈದ್ಯಕೀಯ ಪರೀಕ್ಷೆಗೆ ದಿನಾಂಕ ಪ್ರಕಟ: ವಿದ್ಯಾರ್ಥಿಗಳ ಆಕ್ರೋಶ

Kannadaprabha News   | Asianet News
Published : Nov 25, 2020, 08:34 AM IST
ವೈದ್ಯಕೀಯ ಪರೀಕ್ಷೆಗೆ ದಿನಾಂಕ ಪ್ರಕಟ: ವಿದ್ಯಾರ್ಥಿಗಳ ಆಕ್ರೋಶ

ಸಾರಾಂಶ

ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ವಿರುದ್ಧ ತೀವ್ರ ಅಸಮಾಧಾನ| ಪರೀಕ್ಷೆ ಮುಂದೂಡದಿದ್ದರೆ ವಿದ್ಯಾರ್ಥಿಗಳ ಜೊತೆ ಸೇರಿ ರಾಜ್ಯಾದ್ಯಂತ ಹೋರಾಟ| ಯಾವುದೇ ಕ್ಲಿನಿಕಲ್‌ ತರಬೇತಿ, ಪ್ರಾಯೋಗಿಕ ತರಗತಿಗಳು ನಡೆದಿಲ್ಲ. ಬರೀ ಆನ್‌ಲೈನ್‌ ಶಿಕ್ಷಣ ಆಧರಿಸಿ ಪರೀಕ್ಷೆ ಎದುರಿಸುವುದು ಬಹಳ ಕಷ್ಟ: ವಿದ್ಯಾರ್ಥಿಗಳ ಆಕ್ರೋಶ|

ಬೆಂಗಳೂರು(ನ.25): ಕೋವಿಡ್‌ 19 ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇದುವರೆಗೂ ವೈದ್ಯಕೀಯ ಕಾಲೇಜುಗಳು ಆರಂಭವೇ ಆಗಿಲ್ಲ. ಆದರೂ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮಾತ್ರ ತರಾತುರಿಯಲ್ಲಿ ಜ.19ರಿಂದ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ.

ಇದು ವೈದ್ಯ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೂ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿವಿಯ ಕುಲಪತಿ ಅವರನ್ನು ಭೇಟಿ ಮಾಡಿದ ವೈದ್ಯಕೀಯ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಲು ಮನವಿ ಮಾಡಿದರು. ತಪ್ಪಿದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಶುಲ್ಕ ಕಟ್ಟದಿದ್ದರೆ ಆನ್‌ಲೈನ್‌ ಕ್ಲಾಸ್‌ ಬಂದ್: ರಾಜ್ಯ ಸರ್ಕಾರದ ಆದೇಶಕ್ಕೆ ಸಡ್ಡು!

ಡಿ.1ರಿಂದ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಅವರು ಹೇಳಿಕೆ ನೀಡಿದ್ದಾರೆ. ಇನ್ನೂ ಕಾಲೇಜುಗಳೇ ಆರಂಭವಾಗಿಲ್ಲ, ಆಗಲೇ ಪರೀಕ್ಷೆ ಸಮಯ ನಿಗದಿಯಾಗಿದೆ. ವೈದ್ಯಕೀಯ ಪರೀಕ್ಷೆ ಎದುರಿಸಲು ಒಂದೂವರೆ ತಿಂಗಳು ಸಾಕಾಗುವುದಿಲ್ಲ. ಇದುವರೆಗೂ ಯಾವುದೇ ಕ್ಲಿನಿಕಲ್‌ ತರಬೇತಿ, ಪ್ರಾಯೋಗಿಕ ತರಗತಿಗಳು ನಡೆದಿಲ್ಲ. ಬರೀ ಆನ್‌ಲೈನ್‌ ಶಿಕ್ಷಣ ಆಧರಿಸಿ ಪರೀಕ್ಷೆ ಎದುರಿಸುವುದು ಬಹಳ ಕಷ್ಟ. ಶಿಕ್ಷಣ ಸಂಸ್ಥೆಗಳು, ಪ್ರಾಧ್ಯಾಪಕರು, ತಜ್ಞರು ಸೇರಿದಂತೆ ಸಹಭಾಗಿಗಳ ಯಾರ ಅಭಿಪ್ರಾಯನ್ನೂ ಪಡೆಯದೆ ಏಕಾಏಕಿ ನಿರ್ಧಾರ ಕೈಗೊಂಡಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೈಕ್ಷಣಿಕ ವರ್ಷದ ಕೊನೆಯ ಕೆಲ ತಿಂಗಳಾದರೂ ಭೌತಿಕ ತರಗತಿ ನಡೆಸಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳನ್ನು ನಡೆಸುವುದಾಗಿ ಸಂಬಂಧಿಸಿದ ಇಲಾಖೆ ಸಚಿವರು ಹೇಳಿದ್ದಾರೆ. ಆದರೆ, ವೈದ್ಯಕೀಯ ಪರೀಕ್ಷೆಗಳನ್ನು ಯಾವ ಆಧಾರದಲ್ಲಿ ಜ.19 ರಿಂದ ನಡೆಸುವುದಾಗಿ ಆರ್‌ಜಿಯುಎಚ್‌ಎಸ್‌ ಘೋಷಿಸಿದೆ ಅರ್ಥವಾಗುತ್ತಿಲ್ಲ. ಪರೀಕ್ಷೆ ಮುಂದೂಡದಿದ್ದರೆ ವಿದ್ಯಾರ್ಥಿಗಳ ಜೊತೆ ಸೇರಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು  ಎಐಡಿಎಸ್‌ಒ ಸಂಚಾಲಕಿ ಸಿತಾರಾ ಅವರು ತಿಳಿಸಿದ್ದಾರೆ. 
 

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ