ಬೆಂಗಳೂರು (ಡಿ.11): ರಾಜ್ಯದಲ್ಲಿ ಒಮಿಕ್ರೋನ್ (Omicron) ಆತಂಕವು ಶಾಲೆಗಳಲ್ಲಿ ಮಕ್ಕಳ ಹಾಜರಾತಿ(Attendance) ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ವಿಶೇಷವೆಂದರೆ, ಒಮಿಕ್ರೋನ್ (Omicron) ಪತ್ತೆ ಬಳಿಕವೇ ಶಾಲೆಗಳ ಹಾಜರಾತಿ ಏರಿಕೆಯಾಗಿದೆ. ನವೆಂಬರ್‌ನ ಆರಂಭಿಕ ದಿನಗಳಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಶಾಲಾ ಮಕ್ಕಳ ಹಾಜರಾತಿ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ತಿಂಗಳು 1ರಿಂದ 10ನೇ ತರಗತಿ ಮಕ್ಕಳ ಶಾಲಾ ಹಾಜರಾತಿ ಕನಿಷ್ಠ ಶೇ.32ರಿಂದ ಗರಿಷ್ಠ ಶೇ.50ರಷ್ಟಿತ್ತು (ವಿವಿಧ ತರಗತಿಗಳಲ್ಲಿ). ಆದರೆ ಡಿಸೆಂಬರ್ ಆರಂಭದಲ್ಲೇ ವಿವಿಧ ತರಗತಿಗೆ ಕನಿಷ್ಠ ಶೇ.52ರಿಂದ ಗರಿಷ್ಠ ಶೇ.58ರ ವರೆಗೆ ಹಾಜರಿ ದಾಖಲಾಗಿರುವುದು ಶಿಕ್ಷಣ ಇಲಾಖೆಯ ಅಂಕಿ ಅಂಶಗಳಿಂದ ಕಂಡುಬರುತ್ತಿದೆ.
ಜಿಲ್ಲಾವಾರು ಹಾಜರಾತಿ ಪ್ರಮಾಣದಲ್ಲಿ ಕೂಡ ಸಾಕಷ್ಟು ಏರಿಕೆಯಾಗಿದ್ದು, ರಾಜಧಾನಿ ಬೆಂಗಳೂರು (Bengaluru) ಹೊರತುಪಡಿಸಿ ಉಳಿದೆಲ್ಲ ಶೈಕ್ಷಣಿಕ (Education) ಜಿಲ್ಲೆಗಳಲ್ಲೂ ಕನಿಷ್ಠ ಹಾಜರಾತಿ ಶೇ.45ಕ್ಕಿಂತ ಹೆಚ್ಚಿದೆ, ಗರಿಷ್ಠ ಹಾಜರಾತಿ ಶೇ.85 ದಾಟಿದೆ. ನವೆಂಬರ್‌ನಲ್ಲಿ ಜಿಲ್ಲಾವಾರು ಕನಿಷ್ಠ ಶೇ.15ರಿಂದ ಗರಿಷ್ಠ 45ರಷ್ಟಿತ್ತು.
undefined
ಈ ಮೂಲಕ ರೂಪಾಂತರಿ ಆತಂಕದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಾರೆ, ಮತ್ತೆ ಆನ್‌ಲೈನ್ ತರಗತಿಗೆ ಮೊರೆಹೋಗುತ್ತಾರೆ ಎಂಬ ಊಹೆ ಸುಳ್ಳಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಮಾತ್ರ ಆನ್‌ಲೈನ್ ತರಗತಿಗೆ ಒಲವು ವ್ಯಕ್ತವಾಗಿದೆ. ಇದನ್ನು ಹೊರತುಪಡಿಸಿ ಜಿಲ್ಲೆಗಳಲ್ಲಿ ಶಾಲಾ ಹಾಜರಾತಿ, ಚಟುವಟಿಕೆಗಳ ಮೇಲೆ ಒಮಿಕ್ರೋನ್ ಆತಂಕ ಯಾವುದೇ ಪರಿಣಾಮ ಬೀರಿಲ್ಲ.
ಟಾಪ್ 5 ಜಿಲ್ಲೆಗಳು: ಉತ್ತರ ಕನ್ನಡ (Uttara Kannada), ಬಾಗಲಕೋಟೆ, ಬೆಳಗಾವಿ (Belagavi), ಗದಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾಜರಾತಿ ಇರುವ ಟಾಪ್ ಐದು ಜಿಲ್ಲೆಗಳಾಗಿವೆ. ಈ ಜಿಲ್ಲೆಗಳಲ್ಲಿ 1ರಿಂದ 10ರ ವರೆಗಿನ ಎಲ್ಲ ತರಗತಿಗಳಲ್ಲೂ ಶೇ.60ಕ್ಕಿಂತ ಹೆಚ್ಚು ಹಾಜರಾತಿ ಇದೆ. ಅದರಲ್ಲೂ 9 ಮತ್ತು 10ನೇ ತರಗತಿಯಲ್ಲಿ ಶೇ.80ರಷ್ಟುಮಕ್ಕಳ ಹಾಜರಾತಿ ಈ ಜಿಲ್ಲೆಗಳಲ್ಲಿ ದಾಖಲಾಗಿದೆ.
ಬೆಂಗಳೂರಲ್ಲೇ ಕಡಿಮೆ ಹಾಜರಾತಿ: ಇತರೆ ಎಲ್ಲಾ ಜಿಲ್ಲೆಗಳಿಗೂ ಹೋಲಿಸಿದರೆ ರಾಜಧಾನಿ ಬೆಂಗಳೂರಿನ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ತೀವ್ರ ಕಡಿಮೆ ಇದೆ. ಆದರೆ ಕಳೆದ ನವೆಂಬರ್‌ಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಬೆಂಗಳೂರಿನ ಶಾಲೆಗಳ ಹಾಜರಾತಿಯೂ ಕೊಂಚ ಹೆಚ್ಚಾಗಿದೆ. ಕಳೆದ ತಿಂಗಳು ಯಾವುದೇ ತರಗತಿಯ ಗರಿಷ್ಠ ಹಾಜರಾತಿ ಶೇ.15ರ ಆಸುಪಾಸಿನಲ್ಲಿತ್ತು. ಆದರೆ ಡಿಸೆಂಬರ್‌ನಲ್ಲಿ ಕನಿಷ್ಠ ಶೇ.20ರಿಂದ ಶೇ.24ವರೆಗೂ ವಿವಿಧ ತರಗತಿ ಹಾಜರಾತಿ ಕಂಡುಬಂದಿದೆ.
ಹಾಜರಾತಿ ದಾಖಲು ನಿರ್ಲಕ್ಷ್ಯ :ರಾಜ್ಯದಲ್ಲಿ ಒಟ್ಟು 1-5 ತರಗತಿವರೆಗೂ 62 ಸಾವಿರ ಶಾಲೆಗಳಿದ್ದು, ಅದರಲ್ಲಿ 34 ಸಾವಿರಕ್ಕೂ ಹೆಚ್ಚು ಶಾಲೆಗಳು ಇದುವರೆಗೂ ಮಕ್ಕಳ ಹಾಜರಾತಿಯನ್ನು ಶಿಕ್ಷಣ ಇಲಾಖೆಯ ಸ್ಟೂಡೆಂಡ್ ಅಚೀವ್‌ಮೆಂಟ್ ಟ್ಯಾಕಿಂಗ್ ಸಿಸ್ಟಂ (ಎಸ್‌ಎಟಿಎಸ್) ಪೋರ್ಟಲ್‌ನಲ್ಲಿ ದಾಖಲಿಸುತ್ತಿವೆ. ಅದೇ ರೀತಿ 40 ಸಾವಿರಕ್ಕೂ ಹೆಚ್ಚು ಹಿರಿಯ ಪ್ರಾಥಮಿಕ ಶಾಲೆಗಳದ್ದು, ಈ ಪೈಕಿ 22 ಸಾವಿರಕ್ಕೂ ಹೆಚ್ಚು ಶಾಲೆಗಳು, 17 ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳಿವೆ. ಈ ಪೈಕಿ 10 ಸಾವಿರ ಶಾಲೆಗಳು ಮಾತ್ರ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸುತ್ತಿವೆ. ಹಾಜರಾತಿ ದಾಖಲಿಸದ ಬಹುತೇಕ ಶಾಲೆಗಳು ಖಾಸಗಿ ಶಾಲೆಗಳಾಗಿವೆ. ಇವುಗಳಿಗೆ ಸರ್ಕಾರ ಸೂಚನೆ ನೀಡರೂ ನಿರ್ಲಕ್ಷ್ಯ ಮುಂದುವರೆಸಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
1 ಕೋಟಿಯಲ್ಲಿ 130 ಮಕ್ಕಳಿಗೆ ಸೋಂಕು : ರಾಜ್ಯದಲ್ಲಿ 2021-2022 ಸಾಲಿನಲ್ಲಿ 1ರಿಂದ 10ನೇ ತರಗತಿವರೆಗೂ ಸುಮಾರು ಒಂದು ಕೋಟಿ ಮಕ್ಕಳು ಶಾಲೆಗೆ ದಾಖಲಾತಿ ಪಡೆದಿದ್ದಾರೆ. ಶಿಕ್ಷಣ ಇಲಾಖೆಯು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಮಾಹಿತಿಯಂತೆ ಕಳೆದ 10 ದಿನಗಳಲ್ಲಿ 130 ಮಕ್ಕಳಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಸೋಂಕಿತ ಮಕ್ಕಳೆಲ್ಲರೂ ಆರೋಗ್ಯವಾಗಿದ್ದು, ಯಾವುದೇ ಗಂಭೀರ ಸಮಸ್ಯೆಗಳಿಲ್ಲ. ಮಕ್ಕಳಲ್ಲಿ ಸೋಂಕು ಹತೋಟಿಯಲ್ಲಿರುವುದರಿಂದಲೇ ಹಾಜರಾತಿ ಹೆಚ್ಚಳವಾಗುತ್ತಿದೆ.
ತರಗತಿವಾರು ಮಕ್ಕಳ ಹಾಜರಾತಿ
ತರಗತಿ- ನ.8 -ಡಿ.8
1 32% 53%
2 29% 48%
3 28% 45%
4 25% 46%
5 28% 46%
6 33% 48%
7 34% 47%
8 42% 55%
9 45% 58%
10 45% 58%
ಟಾಪ್ 5 ಜಿಲ್ಲೆಗಳು
1.ಉತ್ತರ ಕನ್ನಡ
2.ಬಾಗಲಕೋಟೆ
3.ಬೆಳಗಾವಿ
4.ಗದಗ
5.ಮಂಡ್ಯ