'ಪರೀಕ್ಷೆಯ ಸಮಯದಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ'

By Girish GoudarFirst Published Mar 26, 2022, 5:04 AM IST
Highlights

*   2 ವರ್ಷದ ನಂತರ ಕೋವಿಡ್‌ ಪೂರ್ವ ಮಾದರಿಯಲ್ಲಿ ಪರೀಕ್ಷೆ
*   ಮಾಸ್ಕ್‌ ಕಡ್ಡಾಯವಿಲ್ಲ
*   4 ತೃತೀಯ ಲಿಂಗಿಗಳು-5307 ವಿಶೇಷಚೇತನರು ನೋಂದಣಿ

ಬೆಂಗಳೂರು(ಮಾ.26): ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ(SSLC) ಪರೀಕ್ಷೆಗಳು(Examination) ಮಾ.28ರ ಸೋಮವಾರದಿಂದ ಏ.11ರವರೆಗೆ ನಡೆಯಲಿದ್ದು, ಈ ಬಾರಿ ಒಟ್ಟು 8,73,846 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಹೈಕೋರ್ಟ್‌(High Coourt) ಆದೇಶ ಪಾಲಿಸದೆ ಯಾವುದೇ ವಿದ್ಯಾರ್ಥಿಗಳು ಹಿಜಾಬ್‌(Hijab) ಧರಿಸಿ ಬಂದರೆ ಪರೀಕ್ಷೆ ಬರೆಯಲು ಅವಕಾಶ ಸಿಗುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ(Karnataka) ಒಟ್ಟು 3444 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಅಕ್ರಮಗಳ ಮೇಲೆ ನಿಗಾ ಇಡಲು ಎಲ್ಲ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸುಸೂತ್ರವಾಗಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಬಾರಿ ಕೋವಿಡ್‌ ಪೂರ್ವ ಮಾದರಿಯಲ್ಲಿ ಎಲ್ಲಾ ವಿಷಯಗಳಿಗೂ ಪ್ರತ್ಯೇಕ ಪರೀಕ್ಷೆ ನಡೆಯಲಿವೆ. ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಕನಿಷ್ಠ ಶೇ.35ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಕಳೆದ ಬಾರಿಯಂತೆ ಎಲ್ಲ ಮಕ್ಕಳನ್ನೂ ತೇರ್ಗಡೆ ಮಾಡುವಂತಹ ಪ್ರಶ್ನೆ ಈ ಬಾರಿ ಇಲ್ಲ. ಆದರೆ, ಈ ಬಾರಿಯೂ ಕೋವಿಡ್‌ನಿಂದ ಪಠ್ಯಕ್ರಮ ಪೂರ್ಣಗೊಳಿಸಲು ಸಮಯದ ಅಭಾವದ ಹಿನ್ನೆಲೆಯಲ್ಲಿ ಶೇ.20ರಷ್ಟು ಪಠ್ಯಕ್ರಮವನ್ನು ಮೊದಲೇ ಕಡಿತಗೊಳಿಸಲಾಗಿತ್ತು. ಹಾಗಾಗಿ ಉಳಿದ ಶೇ.80ರಷ್ಟುಪಠ್ಯಕ್ರಮವನ್ನು ಆಧರಿಸಿ ಪರೀಕ್ಷೆ ಪತ್ರಿಕೆಗಳನ್ನು ತಯಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Latest Videos

SSLC Exams: ಕೋವಿಡ್‌ ಭಯವಿಲ್ಲದೇ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ..!

4 ತೃತೀಯ ಲಿಂಗಿಗಳು-5307 ವಿಶೇಷಚೇತನರು ನೋಂದಣಿ:

ಈ ಮಧ್ಯೆ ಪರೀಕ್ಷೆ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಗೋಪಾಲಕೃಷ್ಣ ಅವರು, ಈ ಬಾರಿ ಒಟ್ಟು 15,387 ಶಾಲೆಗಳಿಂದ 8,73,846 ವಿದ್ಯಾರ್ಥಿಗಳು(Students) ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 4,52,732 ಗಂಡು ಮಕ್ಕಳು, 4,21,110 ಹೆಣ್ಣು ಮಕ್ಕಳು ಹಾಗೂ 4 ತೃತೀಯ ಲಿಂಗಿಗಳು ಸೇರಿದ್ದಾರೆ. ಅಲ್ಲದೇ ಸುಮಾರು 5,307 ವಿಶೇಷ ಚೇತನ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಮಾಸ್ಕ್‌ ಕಡ್ಡಾಯವಿಲ್ಲ

ಕೋವಿಡ್‌ ತಹಬದಿಯಲ್ಲಿರುವುದರಿಂದ ಈ ಬಾರಿ ಪರೀಕ್ಷೆಗೆ ಕೆಲ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಸಡಿಲಗೊಳಿಸಲಾಗಿದ್ದು, ಮಾಸ್ಕ್‌ ಕಡ್ಡಾಯವಿರುವುದಿಲ್ಲ ಎಂದು ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.
ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರದ ಸಿಬ್ಬಂದಿ ಪರೀಕ್ಷೆಯ ಸಮಯದಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ. ಆದರೆ, ಸ್ಯಾನಿಟೈಸರ್‌ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪ್ರತಿದಿನ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ತಿಳಿಸಿದರು.

SSLC Exams: ಎಕ್ಸಾಂನಲ್ಲಿ ಕಾಪಿ ಹೊಡೆಯೋಕೆ ಚಾನ್ಸೇ ಇಲ್ಲ: ವಿದ್ಯಾರ್ಥಿಗಳ ಮೇಲೆ ಹದ್ದಿನ ಕಣ್ಣು..!

ಸಹಾಯ ವಾಣಿ:

ಪರೀಕ್ಷಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡು ಹಿಡಿಯುವ ಹಾಗೂ ಭಯ ರಹಿತವಾಗಿ ಆತ್ಮಸೈರ್ಯ ತುಂಬಲು ಮಂಡಳಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಪರೀಕ್ಷಾ ದಿನಗಳಲ್ಲಿ ನಿತ್ಯ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನುರಿತ ವಿಷಯಾಧರಿತ ಶಿಕ್ಷಕರು ಸಹಾಯವಾಣಿಯಲ್ಲಿ ಲಭ್ಯವಿರುತ್ತಾರೆ ಎಂದು ತಿಳಿಸಿದ್ದಾರೆ.

ರಾಜ್ಯದ 5,717 ಸರ್ಕಾರಿ ಶಾಲೆಗಳು, 3,412 ಅನುದಾನಿತ ಹಾಗೂ 6,258 ಅನುದಾನ ರಹಿತ ಶಾಲೆಗಳು ಪರೀಕ್ಷೆಗೆ ನೋಂದಾಯಿಸಿವೆ. ಇದರಲ್ಲಿ ಸರ್ಕಾರಿ ಶಾಲೆಯ 3,76,685 ವಿದ್ಯಾರ್ಥಿಗಳು, ಅನುದಾನಿತ ಶಾಲೆಯ 2,23,032 ವಿದ್ಯಾರ್ಥಿಗಳು ಹಾಗೂ ಅನುದಾನ ರಹಿತ 2,74,129 ವಿದ್ಯಾರ್ಥಿಗಳು ಇದ್ದಾರೆ. ರಾಜ್ಯಾದ್ಯಂತ 3,444 ಪರೀಕ್ಷಾ ಕೇಂದ್ರಗಳಿದ್ದು ಇದರಲ್ಲಿ 3,275 ಸಾಮಾನ್ಯ ಕೇಂದ್ರಗಳು ಹಾಗೂ 169 ಖಾಸಗಿ ಕೇಂದ್ರಗಳಾಗಿವೆ. ಪರೀಕ್ಷಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಲು ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆಗಳ ಅಭಿರಕ್ಷಕರು, ಸ್ಥಾನಿಕ ಜಾಗೃತ ದಳ, ಮೊಬೈಲ್‌ ಸ್ವಾಡ್‌, ಪೊಲೀಸ್‌ ವಿಭಾಗದಿಂದ ತಲಾ 3444 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕೊಠಡಿ ಮೇಲ್ವಿಚಾರಣೆಗಾಗಿ 49,817 ಮಂದಿ, ಪ್ರಶ್ನೆ ಪತ್ರಿಕೆ ವಿತರಣೆಗೆ 1,266 ಮಂದಿ, 377 ಉಪ ಮುಖ್ಯ ಅಧೀಕ್ಷಕರ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
 

click me!