ITIಗೆ 6 ಹೊಸ ಕೋರ್ಸ್ ಸೇರ್ಪಡೆ: ಪ್ರಸಕ್ತ ಸಾಲಿನಿಂದಲೇ ಪ್ರವೇಶಾತಿ ಆರಂಭ

By Suvarna News  |  First Published Sep 14, 2021, 6:25 PM IST

* ಐ.ಟಿ.ಐ.ಗೆ 6 ಹೊಸ ಸಂಯೋಜನೆ ಸೇರ್ಪಡೆ
* ರಾಜ್ಯ ವೃತ್ತಿಶಿಕ್ಷಣ ಪರಿಷತ್ ಅನುಮೋದನೆ 
* ಈ ಸಾಲಿನಿಂದಲೇ ಹೊಸ ಕೋರ್ಸ್ ಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ


ಬೆಂಗಳೂರು, (ಸೆ.14): ಟಾಟಾ ಕಂಪನಿಯ ಸಹಯೋಗದಲ್ಲಿ ರಾಜ್ಯದ 150 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸುವ ಕಾರ್ಯಕ್ರಮದಡಿ ಈಗಿನ ಬೇಡಿಕೆಗಳನ್ನು ಗಮನದಲ್ಲಿರಿಸಿಕೊಂಡು 6 ಹೊಸ ಕೋರ್ಸ್ ಗಳಿಗೆ ರಾಜ್ಯ ವೃತ್ತಿಶಿಕ್ಷಣ ಪರಿಷತ್ (ಎಸ್.ವಿ.ಸಿ.ಟಿ.) ಮಂಗಳವಾರ ಅನುಮೋದನೆ ನೀಡಿದೆ. 

ಉನ್ನತ ಶಿಕ್ಷಣ ಸಚಿವ ಹಾಗೂ ಕೌಶಾಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯಗಳ ಇಲಾಖೆ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

Tap to resize

Latest Videos

150 ಐಟಿಐಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ

ಈ ನಿರ್ಣಯವು ಎಲ್ಲಾ 150 ಐ.ಟಿ.ಐ.ಗಳಿಗೆ ಅನ್ವಯವಾಗುತ್ತದೆ. ಈ ಸಾಲಿನಿಂದಲೇ ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. 

ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (2 ವರ್ಷ), ಬೇಸಿಕ್ಸ್ ಆಫ್ ಡಿಜೈನ್ ಅಂಡ್ ವರ್ಚ್ಯುಯಲ್ ವೆರಿಫಿಕೇಷನ್ (2 ವರ್ಷ), ಅಡ್ವಾನ್ಸ್ಡ್ ಮ್ಯಾನಫ್ಯಾಕ್ಚರಿಂಗ್ (1 ವರ್ಷ), ಆರ್ಟಿಸಾನ್ ಯೂಸಿಂಗ್ ಅಡ್ವಾನ್ಸ್ಡ್ ಟೂಲ್ಸ್ (1 ವರ್ಷ), ಇಂಡಸ್ಟ್ರಿಯಲ್ ರೊಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನಫ್ಯಾಕ್ಚರ್ (1 ವರ್ಷ), ಮ್ಯಾನಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಆಟೊಮೇಷನ್ (1 ವರ್ಷ), ಈ 6 ಸಂಯೋಜನೆಗಳು ಐ.ಟಿ.ಐ.ಗೆ ಸೇರ್ಪಡೆಯಾಗುತ್ತವೆ ಎಂದು ಸಚಿವರು ವಿವರಿಸಿದರು. 

ಅಂತಿಮವಾಗಿ ಈ ಸಂಯೋಜನೆಗಳಿಗೆ ರಾಷ್ಟ್ರೀಯ ವೃತ್ತಿಶಿಕ್ಷಣ ತರಬೇತಿ ಪರಿಷತ್ (ಎನ್.ಸಿ.ವಿ.ಇ.ಟಿ.) ಮಾನ್ಯತೆ ಕೊಡಬೇಕು. ಅದಕ್ಕೆ ಪೂರಕವಾಗಿ ಈ 6 ಸಂಯೋಜನೆಗಳಿಗಾಗಿ ಸಿದ್ಧಪಡಿಸಲಾಗಿರುವ ಪಠ್ಯಕ್ರಮಕ್ಕೆ ನವದೆಹಲಿಯ ತರಬೇತಿ ಮಹಾನಿರ್ದೇಶನಾಲಯದಿಂದ (ಡಿ.ಜಿ.ಟಿ.) ಅನುಮೋದನೆ ಪಡೆಯಬೇಕಾಗಿರುತ್ತದೆ. ಈಗ ರಾಜ್ಯ ಸರ್ಕಾರವು ಈ ಸಂಯೋಜನೆಗಳ ಪಠ್ಯಕ್ರಮವನ್ನು ಡಿ.ಜಿ.ಟಿ.ಗೆ ಸಲ್ಲಿಸಿದ್ದು, ಅದು ಪ್ರಕ್ರಿಯೆಯಲ್ಲಿದೆ. ಆದರೆ, ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಎನ್.ಸಿ.ವಿ.ಇ,ಟಿ.ಯಿಂದ ಈ 6 ಸಂಯೋಜನೆಗಳಿಗೆ ಮಾನ್ಯತೆ ಪಡೆಯುವ ಷರತ್ತಿಗೊಳಪಟ್ಟು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದೂ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ. 

ಇದೇ ಸಭೆಯಲ್ಲಿ, 3 ತಿಂಗಳ ಅವಧಿಯ 23 ಅಲ್ಪಾವಧಿ ಸರ್ಟಿಫೈಡ್ಝ ಕೋರ್ಸ್ ಗಳಿಗೆ  ಕೂಡ ಎಸ್.ವಿ.ಸಿ.ಟಿ.ಯು ಅನುಮೋದನೆ ನೀಡಿದೆ ಎಂದು ಸಚಿವರು ಹೇಳಿದ್ದಾರೆ. 

ಕೌಶಲಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತ ಡಾ.ಹರೀಶ್ ಕುಮಾರ್ ಕೆ. ಮತ್ತಿತರರು ಇದ್ದರು.

click me!