ಗ್ರೇಸ್‌ ಅಂಕ ರದ್ದು ಬಳಿಕ 6 ನೀಟ್‌ ಟಾಪರ್‌ಗಳಿಗೆ ಸಂಕಷ್ಟ

Published : Jun 20, 2024, 08:39 AM IST
ಗ್ರೇಸ್‌ ಅಂಕ ರದ್ದು ಬಳಿಕ 6 ನೀಟ್‌ ಟಾಪರ್‌ಗಳಿಗೆ ಸಂಕಷ್ಟ

ಸಾರಾಂಶ

1563 ವಿದ್ಯಾರ್ಥಿಗಳು ಒಂದೋ ಹೊಸದಾಗಿ ಪರೀಕ್ಷೆ ಬರೆಯಬೇಕು. ಇಲ್ಲವೇ ಗ್ರೇಸ್‌ ಅಂಕ ಕಡಿತವಾದ ಬಳಿಕ ಸಿಗುವ ಅಂಕವನ್ನು ಉಳಿಸಿಕೊಳ್ಳಬೇಕು.

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ನೀಟ್‌ ಪರೀಕ್ಷೆಯಲ್ಲಿ ಗ್ರೇಸ್‌ ಅಂಕ ಪಡೆದು ಟಾಪರ್‌ಗಳಾಗಿ ಹೊರಹೊಮ್ಮಿದ್ದವರ ಪೈಕಿ 6 ಜನರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಪರೀಕ್ಷೆಯಲ್ಲಿ ಅಕ್ರಮ ಮತ್ತು ಗ್ರೇಸ್‌ ಅಂಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ 1563ಕ್ಕೂ ಹೆಚ್ಚು ಜನರಿಗೆ ನೀಡಲಾಗಿದ್ದ ಗ್ರೇಸ್‌ ಅಂಕ ಹಿಂಪಡೆಯುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿತ್ತು.

ಅದರನ್ವಯ, ಇದೀಗ ಪರೀಕ್ಷೆ ವೇಳೆ ಸಮಯ ನಷ್ಟವಾಗಿದ್ದಕ್ಕೆ ಪ್ರತಿಯಾಗಿ ನೀಡಿದ್ದ ಗ್ರೇಸ್‌ ಅಂಕ ರದ್ದುಪಡಿಸಿ, 1563 ಜನರ ಅಂಕಗಳ ಮರುಪರಿಶೀಲನೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಆರಂಭಿಸಿದೆ. ಈ ಪ್ರಕ್ರಿಯೆಯಲ್ಲಿ ಟಾಪರ್‌ಗಳಾಗಿದ್ದ ಹೊರಹೊಮ್ಮಿದ್ದವರ ಪೈಕಿ 6 ಜನರು 60-70ರಷ್ಟು ತಮ್ಮ ಗ್ರೇಸ್‌ ಅಂಕ ಕಳೆದುಕೊಳ್ಳಲಿದ್ದು, ಟಾಪರ್‌ ಸ್ಥಾನದಿಂದ ಭಾರೀ ಕೆಳಗೆ ಇಳಿಯಲಿದ್ದಾರೆ ಎಂದು ಎನ್‌ಟಿಎ ಮೂಲಗಳು ತಿಳಿಸಿವೆ.

ನೀಟ್‌ನಲ್ಲಿ ಎಳ್ಳಷ್ಟು ಲೋಪ ಆಗಿದ್ದರೂ ಕ್ರಮ: ಸುಪ್ರೀಂ ತಾಕೀತು

ಸಾಮಾನ್ಯವಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಉಚಿತ ಪ್ರವೇಶ ಪಡೆಯಲು 650 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆಯುವುದು ಅನಿವಾರ್ಯ. ಈ ಬಾರಿ ಟಾಪರ್‌ಗಳಾಗಿದ್ದ ಎಲ್ಲಾ 67 ಜನರೂ 720 ಅಂಕ ಪಡೆದಿದ್ದರು. ಈ ಪೈಕಿ ಇದೀಗ 6 ಜನರು 60-70 ಅಂಕ ಕಳೆದುಕೊಂಡರೆ ಅವರ ನೀಟ್‌ ರ್‍ಯಾಂಕಿಂಗ್‌ 600ಕ್ಕಿಂತ ಕೆಳಗೆ ಕುಸಿದು, ಉಚಿತ ವೈದ್ಯಕೀಯ ಸೀಟ್‌ನಿಂದ ವಂಚಿತರಾಗಲಿದ್ದಾರೆ.

ಹೀಗೆ ಅಂಕ ಕಳೆದುಕೊಳ್ಳುವ ಸಾಧ್ಯತೆ ಇರುವ ಎಲ್ಲಾ 6 ಜನರು ಕೂಡಾ ಹರ್ಯಾಣದ ಝಜ್ಜರ್‌ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳು. ವಿಶೇಷವೆಂದರೆ ಈ ಎಲ್ಲಾ 6 ಜನರ ಕ್ರಮ ಸಂಖ್ಯೆ ಕೂಡಾ ಅನುಕ್ರಮವಾಗಿದೆ.

ನೀಟ್‌ ಹಗರಣದಲ್ಲಿ ಬಿಹಾರ ಸಚಿವ ಭಾಗಿ? ಆರೋಪಿ ವಿದ್ಯಾರ್ಥಿಗೆ ಮಿನಿಸ್ಟರ್ ನೆರವಿನ ಸುಳಿವು ಪತ್ತೆ

ಆದರೆ ಹೀಗೆ ಗ್ರೇಸ್‌ ಅಂಕ ಕಳೆದುಕೊಳ್ಳುವವರಿಗೆ ಮತ್ತೊಮ್ಮೆ ನೀಟ್‌ ಪರೀಕ್ಷೆ ನಡೆಸುವುದಾಗಿ ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ 1563 ವಿದ್ಯಾರ್ಥಿಗಳು ಒಂದೋ ಹೊಸದಾಗಿ ಪರೀಕ್ಷೆ ಬರೆಯಬೇಕು. ಇಲ್ಲವೇ ಗ್ರೇಸ್‌ ಅಂಕ ಕಡಿತವಾದ ಬಳಿಕ ಸಿಗುವ ಅಂಕವನ್ನು ಉಳಿಸಿಕೊಳ್ಳಬೇಕು.

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ