ಕ್ಷೀರಭಾಗ್ಯ ಹಾಲು ಸೇವನೆ; 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥ !

By Kannadaprabha News  |  First Published Sep 24, 2022, 10:52 AM IST
  • ಹಾಲು ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
  • ದುಂಡಶಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಘಟನೆ

ಶಿಗ್ಗಾಂವಿ (ಸೆ.24) : ಕ್ಷೀರಭಾಗ್ಯ ಯೋಜನೆಯಡಿ ಶಾಲಾ ವಿದ್ಯಾರ್ಥಿಗಳಿಗೆ ಪೂರೈಸಿದ ಹಾಲು ಕುಡಿದು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ತಾಲೂಕಿನ ದುಂಡಶಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದಿದೆ. ಈ ಪ್ರೌಢಶಾಲೆಯಲ್ಲಿ ಶುಕ್ರವಾರ ಮುಂಜಾನೆ ಅದಮ್ಯ ಚೇತನ ಸಂಸ್ಥೆ ಸರಬರಾಜು ಮಾಡುತ್ತಿರುವ ಹಾಲನ್ನು ವಿದ್ಯಾರ್ಥಿಗಳು ಪ್ರತಿದಿನದಂತೆ ಸೇವಿಸಿದ್ದರು. ಕೆಲವು ವಿದ್ಯಾರ್ಥಿಗಳು ಕುಡಿದಿರಲಿಲ್ಲ ಎಂದು ತಿಳಿದುಬಂದಿದೆ.

Raichuru; ಬಿಸಿಯೂಟ ಸೇವಿಸಿ 58 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ಮಸ್ಕಿ ತಹಸೀಲ್ದಾರ್ ಕವಿತಾ ಭೇಟಿ!

Tap to resize

Latest Videos

undefined

ಶಾಲೆಯಲ್ಲಿ ಒಟ್ಟು 174 ವಿದ್ಯಾರ್ಥಿಗಳಿಗೆ ಹಾಲು ನೀಡಲಾಗಿತ್ತು. ಅದರಲ್ಲಿ ಓರ್ವ ವಿದ್ಯಾರ್ಥಿನಿಗೆ ವಾಂತಿಯಾಗಿದ್ದು, ಇನ್ನು ಕೆಲವು ವಿದ್ಯಾರ್ಥಿಗಳಿಗೆ ಹೊಟ್ಟೆತೊಳಸಿದಂತಹ ಅನುಭವವಾಗಿದೆ. ಕೆಲವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ವಿದ್ಯಾರ್ಥಿಗಳನ್ನು ದುಂಡಶಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಯಿತು. ಅದರಲ್ಲಿ ತೀವ್ರ ಅಸ್ವಸ್ಥರಾಗಿದ್ದ 6 ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ 108 ವಾಹನದಲ್ಲಿ ಕಳುಹಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ತಾಪಂ ಇಒ ಪ್ರಶಾಂತ ತುರ್ಕಾನಿ, ತಡಸ ಪಿಎಸ್‌ಐಗಳಾದ ಸಿದ್ದಪ್ಪ ಎಂ.ಪಿ., ಶಿವಾನಂದ ವನಹಳ್ಳಿ, ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಿ ತೆಪ್ಪದ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅಶೋಕ ಕುಂಬಾರ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಕಾರ್ಯದರ್ಶಿ ಎಸ್‌.ಜಿ. ಗಾಣಿಗೇರ, ಮುಖ್ಯಾಧ್ಯಾಪಕಿ ಜೆ.ಆರ್‌. ಪರಮೇಕರ, ಸಹ ಶಿಕ್ಷಕರು ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಮನೋಜ ನಾಯಕ್‌ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ತಂಡ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿ, ತುರ್ತು ಚಿಕಿತ್ಸೆ ನೀಡಿತು.

ಪಾಲಕರ ಪರದಾಟ: ಸುದ್ದಿ ತಿಳಿದ ಪಾಲಕರು ನನ್ನ ಮಗಳಿಗೆ ಏನು ಆಗೈತ್ರಿ? ನಮ್ಮ ಮಗನಿಗೆ ಏನು ಆಗೇದರೀ? ಎಂದು ಆತಂಕದಿಂದ ಕೇಳುತ್ತ ದುಂಡಶಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಓಡೋಡಿ ಬಂದರು..

ಪ್ರತಿದಿನದಂತೆ ವಿದ್ಯಾರ್ಥಿಗಳಿಗೆ ಹಾಲು ನೀಡುವ ಮೊದಲು ಇಬ್ಬರು ಶಿಕ್ಷಕರು ಕುಡಿದಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳು ಹಾಲು ಕುಡಿದ ಬಳಿಕ ಅಸ್ವಸ್ಥರಾಗಿದ್ದಾರೆ. ನಾವು ತಕ್ಷಣ ಅದಮ್ಯ ಚೇತನ ಕಚೇರಿಗೆ ದೂರವಾಣಿ ಮೂಲಕ ಮಾತನಾಡಿದೆವು. ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಕ್ಲಾಸಿಕ್ಸ್‌ ಕಾರ್ಪೊಹೈಡ್ರಾಲ್‌ ಹಾಕಲಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಜ್ವರದ ಲಕ್ಷಣ ಇದ್ದರೆ ಈ ರೀತಿಯಾಗುತ್ತದೆ ಎಂದು ತಿಳಿಸಿದರು.

ಜೆ.ಆರ್‌. ಪರಮೇಕರ, ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಮುಖ್ಯಾಧ್ಯಾಪಕಿ

ಘಟನೆ ತನಿಖೆಗೆ ಗ್ರಾಮಸ್ಥರ ಆಗ್ರಹ

ತಾಲೂಕಿನ ದುಂಡಶಿ ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಹಾಲು ಕುಡಿದು ಅಸ್ವಸ್ಥರಾದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹಾಗೂ ಅಕ್ಷರ ದಾಸೋಹ ಯೋಜನಾಧಿಕಾರಿ ಅಶೋಕ ಕುಂಬಾರ ತನಿಖೆಯನ್ನು ಮಾಡಬೇಕು ಗ್ರಾಮಸ್ಥರ ಆಗ್ರಹವಾಗಿದೆ.

ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಮಿತಿಯ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಎಸ್‌.ಎಂ. ಗಾಣಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಅಂಬಿಗೇರ, ತಾಪಂ ಇಓ, ಪ್ರಶಾಂತ ತುರ್ಕಾಣಿ, ಅಕ್ಷರ ದಾಸೋಹದ ಅಶೋಕ ಕುಂಬಾರ, ಗ್ರಾ.ಪಂ.ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಈರಣ್ಣ ಮಹಾಜನಶೆಟ್ಟರ, ಧರಣೇಂದ್ರ ಪುಟ್ಟಣ್ಣವರ, ಪಿಎಸ್‌ಐ ಶಿವಾನಂದ ವನಹಳ್ಳಿ ಸೇರಿದಂತೆ ಹಲವರು ಸಭೆಯಲ್ಲಿದ್ದರು.

ಘಟನೆ ಹಿನ್ನೆಲೆಯಲ್ಲಿ ಮಧ್ಯಾಹ್ನ ಶಾಲೆಯಲ್ಲಿ ವಿದ್ಯಾರ್ಥಿಗಳು ಅದಮ್ಯ ಚೇತನ ಆಹಾರವನ್ನು ಪೂರೈಸಿದ ಅನ್ನ ಹಾಗೂ ಸಾರ ಊಟವನ್ನು ಮಾಡಲು ನಿರಾಕರಿಸಿದರು. ತಕ್ಷಣವಾಗಿ ಅವರರವರ ಮನೆಗಳಿಗೆ ತೆರಳಲು 3-4 ವಾಹನಗಳನ್ನು ವ್ಯವಸ್ಥೆಯನ್ನು ಮಾಡಲಾಯಿತು. ಸುಮಾರು ಮದ್ಯಾಹ್ನ 2-30 ಗಂಟೆಯಾಗಿದ್ದರಿಂದ ಮುಖ್ಯೋಪಾಧ್ಯಾಯರು ಬಾಳೆ ಹಣ್ಣಿನ ವ್ಯವಸ್ಥೆಯನ್ನು ಮಾಡಿ ತಿನ್ನಿಸಿ ಅವರವರ ಮನೆಗಳಿಗೆ ಕಳಿಸಿದರು.

ಬಿಸಿಯೂಟ ಸೇವಿಸಿ 40 ಮಕ್ಕಳು ಅಸ್ವಸ್ಥ, ನಾಲ್ವರು ಗಂಭೀರ

ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಗೆ ಹಲವಾರು ಗ್ರಾಮಗಳಾದ ದುಂಡಶಿ, ಶೀಲವಂತಸೋಮಾಪೂರ, ಅರಟಾಳ, ದುಂಡಶಿ ತಾಂಡೆ, ಮಡ್ಲಿ, ತರ್ಲಘಟ್ಟ, ಮಾಕಾಪುರ ಗ್ರಾಮಗಳ ವಿದ್ಯಾರ್ಥಿಗಳು ಅವರವರ ಮನೆಗಳಿಗೆ ತೆರಳಿದರು.

ಹಸಿವಿನಿಂದ ಬಳಲಿದ ಹಾಸ್ಟೆಲ್‌ ವಿದ್ಯಾರ್ಥಿಗಳು!

ಶಿಗ್ಗಾಂವಿ: ಅತ್ತ ವಿದ್ಯಾರ್ಥಿಗಳು ಹಾಲು ಕುಡಿದು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದರೆ ಇತ್ತ ವಿದ್ಯಾರ್ಥಿಗಳು ತಮ್ಮ ಗ್ರಾಮ ಹಾಗೂ ಮನೆಗಳಿಗೆ ತೆರಳಿದರು. ಚಿಕಿತ್ಸೆಯೂ ಆಯಿತು. ಆದರೆ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಮಾತ್ರ ಹಸಿವಿನಿಂದ ಬಳಲುವ ಸ್ಥಿತಿ ಬಂತು. ತಾಲೂಕಿನ ದುಂಡಶಿ ಗ್ರಾಮದಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳು ವಿವೇಕಾನಂದ ಶಾಲೆಗೆ ಬರುತ್ತಾರೆ. ಮಧ್ಯಾಹ್ನ ಶಾಲೆಯಲ್ಲಿ ಊಟ ಮಾಡುತ್ತಾರೆ. ಆದರೆ ಹಾಲು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಯಾರೂ ಊಟ ಮಾಡಲಿಲ್ಲ.

ಅಧೀಕ್ಷಕ ಪ್ರವೀಣ ಹೊಸಮನಿ ಅವರಿಗೆ ದೂರವಾಣಿ ಮೂಲಕ ಗ್ರಾಮಸ್ಥರು ನಾಲ್ಕು ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯಾಗಲಿ, ಅಲ್ಪೋಪಹಾರದ ವ್ಯವಸ್ಥೆಯನ್ನು ಮಾಡಬೇಕು ಎಂದು ಮನವಿ ಮಾಡಿದರು. ಆದರೆ ವಿದ್ಯಾರ್ಥಿಗಳು ಮಾತ್ರ 3 ಗಂಟೆಯಾದರೂ ಊಟ ಸಿಗದೆ ಅತಂತ್ರವಾಗಿ ಉಳಿಯಬೇಕಾಯಿತು. ಇಷ್ಟಾದ ನಂತರ ಶಾಸಕರ ಮಾದರಿ ಶಾಲೆಯಲ್ಲಿ ಫಲಾವ್‌ ತಂದು ಹಸಿವಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ನೀಡಿದರು ಎನ್ನಲಾಗಿದೆ.

click me!