ರಾಷ್ಟ್ರೀಯ ಶಿಕ್ಷಣ ನೀತಿ 10 ವರ್ಷಗಳಲ್ಲಿ ಪೂರ್ಣ ಅನುಷ್ಠಾನ: ಸಚಿವ ಅಶ್ವತ್ಥ ನಾರಾಯಣ

By Kannadaprabha News  |  First Published Aug 28, 2021, 7:10 AM IST

* ವಿದ್ಯಾರ್ಥಿಗಳಿಗೆ ಆಸಕ್ತಿಯ ವಿಷಯದ ಆಯ್ಕೆ
* ಉದ್ಯೋಗವಕಾಶ ಯೋಜನೆಯ ಮುಖ್ಯ ಗುರಿ
* ಮುಂದಿನ ವರ್ಷ ಸ್ನಾತಕೋತ್ತರ ಪದವಿ, ಶಿಕ್ಷಕರ ಶಿಕ್ಷಣದಲ್ಲಿ ಅನುಷ್ಠಾನ 


ಬೆಂಗಳೂರು(ಆ.28):  ರಾಜ್ಯದಲ್ಲಿ 2021-22ನೇ ಸಾಲಿನಿಂದಲೇ ಜಾರಿಗೊಳಿಸಿರುವ 2020ನ್ನು ಮುಂದಿನ 10 ವರ್ಷಗಳಲ್ಲಿ ಶಿಕ್ಷಣದ ಎಲ್ಲ ಸ್ತರಗಳಲ್ಲೂ ಹಂತಹಂತವಾಗಿ ಅನುಷ್ಠಾನಗೊಳಿಸುವ ಗುರಿ ಹೊಂದಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತಮಗೆ ಆಸಕ್ತಿ ಇರುವ ವಿಷಯಗಳನ್ನೇ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡಬೇಕು. ಇದಕ್ಕಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಸಹಭಾಗಿತ್ವಕ್ಕೆ ಅವಕಾಶ ನೀಡುವುದು. ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಅಂತರ ಕಡಿಮೆ ಮಾಡಿ ವಿದ್ಯಾರ್ಥಿಗಳಿಗೆ ವ್ಯಾಸಂಗ ಮುಗಿಸಿದ ಕೂಡಲೇ ಉದ್ಯೋಗಾವಕಾಶ ಲಭ್ಯವಾಗುವಂತೆ ಮಾಡುವುದು ಸೇರಿ ಹಲವು ಪ್ರಮುಖ ಉದ್ದೇಶಗಳೊಂದಿಗೆ ಈ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಇದನ್ನು ಸಂಪೂರ್ಣ ಅನುಷ್ಟಾನಕ್ಕೆ 15 ವರ್ಷಗಳ ಕಾಲಾವಕಾಶವಿದೆ. ಆದರೆ, ದೇಶದಲ್ಲೇ ಮೊದಲು ಈ ನೀತಿ ಜಾರಿಗೊಳಿಸಿರುವ ನಮ್ಮ ರಾಜ್ಯದಲ್ಲಿ ಹತ್ತೇ ವರ್ಷದಲ್ಲಿ ಸಂಪೂರ್ಣ ಅನುಷ್ಠಾನದ ಗುರಿ ಹೊಂದಿದ್ದೇವೆ ಎಂದು ಹೇಳಿದರು.

Latest Videos

undefined

ಪ್ರಸಕ್ತ ಸಾಲಿನಲ್ಲಿ ಪದವಿ, ಇಂಜಿನಿಯರಿಂಗ್‌ ಸೇರಿದಂತೆ ಸಾಮಾನ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಮಾತ್ರ ಈ ನೂತನ ನೀತಿ ಅನುಷ್ಠಾನಗೊಳಿಸಲಾಗಿದೆ. ಶಾಲಾ ಶಿಕ್ಷಣದಲ್ಲೂ ಪ್ರಸಕ್ತ ಸಾಲಿನಿಂದಲೇ ನೂತನ ಶಿಕ್ಷಣ ನೀತಿ ಜಾರಿಗೆ ಸರ್ಕಾರ ಉದ್ದೇಶಿಸಿದೆ. ಮುಂದಿನ ವರ್ಷ ಸ್ನಾತಕೋತ್ತರ ಪದವಿ, ಶಿಕ್ಷಕರ ಶಿಕ್ಷಣದಲ್ಲಿ (ಟೀಚ​ರ್‍ಸ್ ಎಜುಕೇಷನ್‌) ಅನುಷ್ಠಾನಗೊಳಿಸಲಾಗುವುದು. ನಂತರದ ವರ್ಷಗಳಲ್ಲಿ ಹಂತ ಹಂತವಾಗಿ ಉಳಿದ ಎಲ್ಲಾ ಹಂತದ ಶಿಕ್ಷಣದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಈ ನೀತಿ ಅನುಷ್ಠಾನ ಸಂಬಂಧ ಆಡಳಿತಾತ್ಮಕ, ಶಾಸನಾತ್ಮಕ ಹಂತಗಳಲ್ಲಿ ಸಾಕಷ್ಟುಬದಲಾವಣೆಗಳನ್ನು ಮಾಡಬೇಕಿದೆ. ಆ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದರು. ಈ ನೀತಿಯ ಆಶಯದಂತೆ ಶಿಕ್ಷಣ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.

ಭಾರತದ ಐಸಿಎಐ-ರಷ್ಯಾದ ಐಪಿಎಆರ್ ತಿಳಿವಳಿಕಾ ಒಪ್ಪಂದಕ್ಕೆ ಕೇಂದ್ರ ಒಪ್ಪಿಗೆ

5000 ತರಗತಿ ಕೋಠಡಿಗಳನ್ನು ಪ್ರೊಜೆಕ್ಟರ್‌, ಇಂಟರ್ನೆಟ್‌ ಸಂಪರ್ಕ, ಯುಪಿಎಸ್‌ ಸೌಲಭ್ಯಗಳನ್ನು ನೀಡಿ ಸ್ಮಾರ್ಟ್‌ ಕ್ಲಾಸ್‌ಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸುಮಾರು 10 ಸಾವಿರ ಉತ್ತಮ ಶಿಕ್ಷಕರಿಂದ ತರಗತಿ ಪಾಠದ ವಿಡಿಯೋ ಮಾಡಿ ಅದನ್ನು ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳು ಯಾವಾಗ ಬೇಕಾದರೂ ವೀಕ್ಷಿಸುವ ಅವಕಾಶ ಕಲ್ಪಿಸಲಾಗುತ್ತದೆ. ಕಳೆದ ವರ್ಷ 1.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ ನೀಡಲಾಗಿದ್ದು, ಈ ವರ್ಷವೂ ಪ್ರಥಮ ಪದವಿಯ ಸುಮಾರು 2 ಲಕ್ಷ ಮಕ್ಕಳಿಗೆ ಟ್ಯಾಬ್‌ ನೀಡಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ ಎಂದು ಹೇಳಿದರು.

ಸೆಪ್ಟಂಬರ್‌ಗೆ ಪಠ್ಯಕ್ರಮ: 

ನೂತನ ಶಿಕ್ಷಣ ನೀತಿ ಅನುಷ್ಠಾನ ಸಂಬಂಧ ಉನ್ನತ ಶಿಕ್ಷಣ ಪರಿಷತ್‌ ವತಿಯಿಂದ 27 ವಿಷಯ ತಜ್ಞರ ಸಮಿತಿ ರಚಿಸಿ ಈಗಾಗಲೇ ಪ್ರತಿ ವಿಷಯವಾರು ಮಾದರಿ ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಅವುಗಳನ್ನು ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿನ ಸಿಂಡಿಕೇಟ್‌ ಮತ್ತು ಅಕಾಡೆಮಿಕ್‌ ಕೌನ್ಸಿಲ್‌ನಲ್ಲಿ ಚರ್ಚೆಯಾಗಿ ಮಾದರಿ ಪಠ್ಯಕ್ರಮದಲ್ಲಿ ಯಾವುದೇ ಅಂಶ ತೆಗೆಯುವ ಹಾಗೂ ಹೊಸದನ್ನು ಸೇರಿಸುವ ಶೈಕ್ಷಣಿಕ ಅಧಿಕಾರ ವಿವಿಗಳಿಗಿದೆ. ಅಂತಿಮಗೊಳಿಸಿ ಕಳುಹಿಸಿದ ಪಠ್ಯಕ್ರಮಕ್ಕೆ ರಾಜ್ಯಪಾಲರ ಅನುಮತಿ ಪಡೆದು ಅನುಷ್ಠಾನಗೊಳಿಸಲಾಗುವುದು. ಸೆ.1ರ ವೇಳೆಗೆ ಈ ಪಠ್ಯಕ್ರಮ ಅನುಷ್ಠಾನಕ್ಕೆ ಬರಲಿದೆ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಡಾ.ಬಿ.ತಿಮ್ಮೇಗೌಡ ಅವರು ವಿವರಿಸಿದರು.

ಈ ವರ್ಷ ಕಾಲೇಜಲ್ಲೇ ದಾಖಲಾತಿ

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಮಾತನಾಡಿ, ಹೊಸ ನೀತಿಯಡಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಏಕರೂಪ ದಾಖಲಾತಿ ವ್ಯವಸ್ಥೆಯನ್ನು ಈ ಬಾರಿ ಜಾರಿಗೆ ತರಲಾಗಿದೆ. ಪ್ರತಿ ಕಾಲೇಜು, ವಿವಿಗಳೂ ಆನ್‌ಲೈನ್‌ ಮೂಲಕವೇ ದಾಖಲಾತಿ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ, ಕೆಲ ಕಾಲೇಜುಗಳು ಈಗಾಗಲೇ ದಾಖಲಾತಿ ಮಾಡಿಕೊಂಡಿರುವುದಾಗಿ ಹೇಳಿದ್ದರಿಂದ ಹಾಗೂ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಈ ವರ್ಷಕ್ಕೆ ಮಾತ್ರ ಕಾಲೇಜು ಹಂತದಲ್ಲೇ ದಾಖಲಾತಿ ಪ್ರಕ್ರಿಯೆ ನಡೆಸಿ ನಂತರ ಅದನ್ನು ಆನ್‌ಲೈನ್‌ ದಾಖಲಾತಿ ವ್ಯವಸ್ಥೆಯಡಿ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.
 

click me!