ಪೋಷಕರನ್ನು ಶಾಲೆಗಳು ಗ್ರಾಹಕರ ರೀತಿ ಕಾರಣಬಾರದು : ಸಚಿವರ ಎಚ್ಚರಿಕೆ

By Kannadaprabha News  |  First Published Aug 17, 2021, 7:26 AM IST
  • ಖಾಸಗಿ ಶಾಲೆಗಳು ಪೋಷಕರನ್ನು ಗ್ರಾಹಕರ ರೀತಿಯಲ್ಲಿ ಕಾಣಬಾರದು
  • ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಸೂಚನೆ

  ಬೆಂಗಳೂರು (ಆ.17):  ಖಾಸಗಿ ಶಾಲೆಗಳು ಪೋಷಕರನ್ನು ಗ್ರಾಹಕರ ರೀತಿಯಲ್ಲಿ ಕಾಣಬಾರದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಸೂಚಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರಿಗೆ ‘ಖಾಸಗಿ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಶುಲ್ಕ ಪಾವತಿಸುವಂತೆ ಒತ್ತಾಯ ಮಾಡುತ್ತಿರುವ’ ಪತ್ರಕರ್ತರು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪೋಷಕರನ್ನು ಗ್ರಾಹಕರ ರೀತಿಯಲ್ಲಿ ನೋಡಬಾರದು. ಈಗಾಗಲೇ ಖಾಸಗಿ ಶಾಲೆಗಳ ಸಂಘಟನೆ ‘ರುಪ್ಸಾ’ ಜೊತೆ ಮಾತನಾಡಿದ್ದೇನೆ. ಕೋವಿಡ್‌ನಿಂದಾಗಿ ಪೋಷಕರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಶುಲ್ಕಕ್ಕಾಗಿ ಹೆಚ್ಚು ಬಲವಂತ ಮಾಡಬೇಡಿ ಎಂದು ಮನವಿ ಮಾಡಿದ್ದು, ಇದಕ್ಕೆ ಖಾಸಗಿ ಶಾಲೆಗಳ ಸಂಘಟನೆಗಳು ಒಪ್ಪಿಕೊಂಡಿವೆ ಎಂದರು.

Tap to resize

Latest Videos

ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್ : ಸಂಭಾವನೆ ಹೆಚ್ಚಳಕ್ಕೆ ಚಿಂತನೆ

ಖಾಸಗಿ ಶಿಕ್ಷಣ ಸಂಸ್ಥೆಗಳ ಹೈಸ್ಕೂಲ್‌ ಮತ್ತು ಪಿಯುಸಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಶುಲ್ಕ ವಿಷಯದಲ್ಲಿ ನೇರವಾಗಿ ಹಿಡಿತ ಸಾಧಿಸುವುದು ಕಷ್ಟ. ಈ ವಿಚಾರದಲ್ಲಿ ಸರ್ಕಾರದ ಇತಿ ಮಿತಿ ಸಹ ಇದೆ. ಶುಲ್ಕ ವಿಚಾರ ಕೋರ್ಟ್‌ನಲ್ಲಿದೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾವುದೇ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು, ಒಟ್ಟಾರೆ ಸರ್ಕಾರ ಮಕ್ಕಳ ಹಿತಕ್ಕೆ ಆದ್ಯತೆ ನೀಡುತ್ತದೆ ಎಂದು ತಿಳಿಸಿದರು.

ಈಗಾಗಲೇ ನಿರ್ಧರಿಸಿರುವಂತೆ ಆ. 23ರಿಂದ 9ರಿಂದ 12ನೇ ತರಗತಿಗಳನ್ನು ಆರಂಭಿಸಲಾಗುವುದು. ಈ ತರಗತಿಗಳು ಯಾವ ರೀತಿ ನಡೆಯಲಿವೆ ಎಂಬುದನ್ನು ನೋಡಿಕೊಂಡು 1ರಿಂದ 8ನೇ ತರಗತಿ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆ. 23ರಿಂದ ಶಾಲೆ ಆರಂಭಿಸುವ ಸಂಬಂಧ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳು, ಡಿಡಿಪಿಐಗಳ ಜೊತೆ ಚರ್ಚಿಸಲಾಗಿದೆ. ಕೊರೋನಾ ಸೋಂಕು ಹೆಚ್ಚಿರುವ ಎರಡು ಜಿಲ್ಲೆ ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು. ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ಶಿಕ್ಷಣ ಪಡೆಯಬಹುದು. ಮಕ್ಕಳನ್ನು ಶಾಲೆಗೆ ಕಳಿಸುವುದನ್ನು ಪೋಷಕರ ನಿರ್ಧಾರಕ್ಕೆ ಬಿಡಲಾಗಿದೆ. ಮಕ್ಕಳಿಗೆ ಮಾಸ್ಕ್‌ ಕಡ್ಡಾಯ ಮಾಡಲಾಗುವುದು, ಮನೆಯಿಂದ ಶಾಲೆಗೆ ಬಂದು ಪುನಃ ಮನೆಗೆ ಹೋಗುವವರೆಗೆ ಮಾಸ್ಕ್‌ ಧರಿಸಿರಬೇಕಾಗುತ್ತದೆ. ಇದರ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡಲಾಗುವುದು. ಶಾಲೆಗೆ ಕಳಿಸಿ ಎಂದು ಕಡ್ಡಾಯ ಮಾಡುವುದಿಲ್ಲ ಎಂದರು.

ಈಗಾಗಲೇ ತಹಶೀಲ್ದಾರ್‌ ಹಾಗೂ ಬಿಇಒ ಜೊತೆ ಮಾತನಾಡಿ ಶಿಕ್ಷರ ಜೊತೆ ಕೈ ಜೋಡಿಸುವಂತೆ ಸೂಚಿಸಲಾಗಿದೆ. ಶಾಲಾ ಕೊಠಡಿಗಳನ್ನು ಸ್ಯಾನಿಟೈಜ್‌ ಮಾಡುವುದು, ಮಕ್ಕಳಿಗೆ ಮಾಸ್ಕ್‌ ಒದಗಿಸುವ ಮುಂತಾದ ಜವಾಬ್ದಾರಿಗಳನ್ನು ಆಯಾ ಗ್ರಾಮ ಪಂಚಾಯಿತಿಗೆ ಬಿಡಲಾಗಿದೆ ಎಂದ ಸಚಿವರು, ಯಾವುದೇ ಶಾಲೆಯಲ್ಲಿ ಒಂದೇ ಒಂದು ಸೋಂಕು ಪ್ರಕರಣ ಕಂಡು ಬಂದರೂ ಅಂತಹ ಶಾಲೆಗಳನ್ನು ಬಂದ್‌ ಮಾಡಿ, ಸ್ಯಾನಿಟೈಜ್‌ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಈ 9 ಹಾಗೂ 10ನೇ ತರಗತಿ ಹೇಗೆ ನಡೆಯುತ್ತದೆ ಎಂಬುದನ್ನು ನೋಡಿಕೊಂಡು ಉಳಿದ ತರಗತಿಗಳ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಈ ಬಗ್ಗೆ ಆ. 30 ರಂದು ತಜ್ಞರ ಜೊತೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.

click me!