ಕೊಡಗು ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರರವರಿಗೆ 2024 ರ ಮಂತ್ರಾಲಯದ ಪ್ರತಿಷ್ಠಿತ ಪರಿಮಳ ಪ್ರಶಸ್ತಿ ಒಲಿದು ಬಂದಿದೆ.
ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.3): ಕೊಡಗು ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರರವರಿಗೆ 2024 ರ ಮಂತ್ರಾಲಯದ ಪ್ರತಿಷ್ಠಿತ ಪರಿಮಳ ಪ್ರಶಸ್ತಿ ಒಲಿದು ಬಂದಿದೆ. ಸ್ಪೇಸ್ ಮೀಡಿಯಾದ ಗುರುದತ್ತ ಕುಲಕರ್ಣಿ ಸಹಯೋಗದೊಂದಿಗೆ ಮರಳಿ ಸಂಸ್ಕೃತಿಗೆ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವದ ಸುಸಂದರ್ಭದಲ್ಲಿ ಶ್ರೀ ಸುಬುಧೇಂದ್ರ ತೀರ್ಥರ ಸಾನಿಧ್ಯದಲ್ಲಿ ನೀಡುವ ಮಂತ್ರಾಲಯ ಪರಿಮಳ ಪ್ರಶಸ್ತಿ ಪ್ರೊ. ಅಶೋಕ ಸಂಗಪ್ಪ ಆಲೂರ ಇವರಿಗೆ ಸಂದಿದೆ.
ಕೃಷಿ, ತೋಟಗಾರಿಕೆ, ಉನ್ನತ ಶಿಕ್ಷಣ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಸುಮಾರು 25 ವರ್ಷಗಳ ಅನುಭವವನ್ನು ಹೊಂದಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯವರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿಯನ್ನು ಪಡೆದಿರುವ ಇವರು ಮಣ್ಣು ಆರೋಗ್ಯ, ಜಲಾಯನ ಅಭಿವೃದ್ಧಿ, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಅಂತಾರಾಷ್ಟ್ರೀಯ ಸಹಕಾರ, ಆಹಾರ ಭದ್ರತೆ, ಸಾಂಸ್ಥಿಕ ಅಭಿವೃದ್ಧಿ, ವಾಣಿಜ್ಯೋದ್ಯಮ ಅಭಿವೃದ್ಧಿ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ರೈತ ಉತ್ಪಾದಕ ಸಂಘಗಳ ಸ್ಥಾಪನೆ, ಅಭಿವೃದ್ಧಿ ಹಾಗೂ ನೀತಿ-ನಿಯಮ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇವರ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು, ಅವುಗಳಲ್ಲಿ 20ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳು, 6 ರಾಷ್ಟ್ರೀಯ ಪ್ರಶಸ್ತಿಗಳು ಮತ್ತು 6 ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದರಲ್ಲಿ ಪ್ರಮುಖವಾದವುವೆಂದರೆ, ಥೈಲ್ಯಾಂಡ್ ಸರ್ಕಾರದಿಂದ ಗೌರವ ಮಾನ್ಯತೆ, ಚೈನಾ ಸರ್ಕಾರದ ಲಿಯಾನಿಂಗ್ ಕೃಷಿ ವಿಜ್ಞಾನ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಮತ್ತು ಚೀನಾದ ಸೋರ್‌ಗಂ ಸಂಶೋಧನಾ ಸಂಸ್ಥೆ ಪ್ರಶಸ್ತಿ, ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಚೀನಾ ಸರ್ಕಾರದಿಂದ ಗೌರವ ಪ್ರಮಾಣ ಪತ್ರ, ಸ್ವಾಜಿಲ್ಯಾಂಡ್ ಮತ್ತು ಮೊಜಾಂಬಿಕ್ ಸರ್ಕಾರದಿಂದ ಗೌರವ ಪ್ರಮಾಣ ಪತ್ರ ಹೀಗೆ ಹಲವು ರಾಷ್ಟ್ರಗಳಿಂದ ಮೆಚ್ಚುಗೆಯ ಪ್ರಮಾಣಪತ್ರ ಮತ್ತು ನಿಷ್ಠೆ ಪ್ರಶಸ್ತಿಗಳನ್ನು ಇವರು ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ.
ಹಲವಾರು ಸರ್ಕಾರಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮಿತಿಗಳು ಮತ್ತು ಮಿಷನ್‌ಗಳಲ್ಲಿ ಅಧ್ಯಕ್ಷರಾಗಿ ಹಾಗೂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 50ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದ್ದಲ್ಲದೇ ಹಲವಾರು ಅಂತರಾಷ್ಟ್ರೀಯ ಯೋಜನೆಗಳಲ್ಲಿ, ನಿಯೋಗಗಳಲ್ಲಿ, ಕಾರ್ಯಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಪ್ರೊ. ಅಶೋಕ ಸಂಗಪ್ಪ ಆಲೂರರವರು ನೂರಾರು ರಾಷ್ಟ್ರೀಯ-ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಧಾನ ಭಾಷಣಗಳನ್ನು ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.