
ನವದೆಹಲಿ (ಏ.3): ಕೇಂದ್ರ ಚುನಾವಣಾ ಆಯೋಗ ಕಳೆದ ತಿಂಗಳು ದೇಶದ ಎಲ್ಲಾ 543 ಲೋಕಸಭಾ ಕ್ಷೇತ್ರಗಳಿಗೆ ದಿನಾಂಕವನ್ನು ಘೋಷಣೆ ಮಾಡಿದೆ. ಇದರೊಂದಿಗೆ ದೇಶದಲ್ಲಿ 2024ರ ಲೋಕಸಭೆ ಚುನಾವಣೆಯ ಕಣ ರಂಗೇರಿದೆ. ಇದರ ಬೆನ್ನಲ್ಲಿಯೇ ದೇಶದಲ್ಲಿ ಪ್ರಮುಖ ನೇಮಕಾತಿ ಪರೀಕ್ಷೆಗಳು ಹಾಗೂ ಅರ್ಹತಾ ಪರೀಕ್ಷೆಗಳ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ. ಚುನಾವಣಾ ಆಯೋಗ ಪ್ರಕಟ ಮಾಡಿರುವ ದಿನಾಂಕದ ಪ್ರಕಾರ 2024ರ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದ್ದು ಏಪ್ರಿಲ್ 19 ರಿಂದ ಜೂನ್ 1ರವರೆಗೆ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆ ಜೂನ್ 4 ರಂದು ನಡೆಯಲಿದೆ. ಆದರೆ, ಚುನಾವಣಾ ದಿನಾಂಕಗಳು ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಪ್ರಿಲಿಮ್ಸ್ ( UPSC Civil Service Prelims), ನೀಟ್ ಪಿಜಿ 2024 (NEET PG 2024), ಜೆಇಇ ಮೇನ್ಸ್ (JEE Main) ದಿನಾಂಕಗಳಂದೇ ನಡೆಯುತ್ತಿದೆ. ಈ ಸಮಯದಲ್ಲಿ ತಮ್ಮ ಪರೀಕ್ಷೆಗಳನ್ನು ಹೊಂದಿರುವ ಅಭ್ಯರ್ಥಿಗಳು ವೇಳಾಪಟ್ಟಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಗಮನ ನೀಡುವಂತೆ ತಿಳಿಸಲಾಗಿದೆ.
ಚುನಾವಣೆಯ ಕಾರಣದಿಂದಾಗಿ ಬದಲಾಗಿರುವ ಪ್ರಮುಖ ಪರೀಕ್ಷೆಗಳ ವೇಳಾಪಟ್ಟಿ..
1. ಯುಪಿಎಸ್‌ಸಿ ಸಿಎಸ್‌ಇ ಪ್ರಿಲಿಮ್ಸ್ 2024:
ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲಿಯೇ ಕೇಂದ್ರ ನಾಗರೀಕ ಸೇವಾ ಆಯೋಗ (ಯುಪಿಎಸ್‌ಸಿ) ತನ್ನ ನಾಗರಿಕ ಸೇವೆಗಳ ಪರೀಕ್ಷೆ (ಸಿಎಸ್‌ಇ) 2024 ವೇಳಾಪಟ್ಟಿಯನ್ನು ಪರಿಷ್ಕರಿಸಿತು, ಇದನ್ನು ಮೂಲತಃ ಮೇ 26 ಕ್ಕೆ ನಿಗದಿಪಡಿಸಲಾಗಿತ್ತು. ಅಧಿಕೃತ ಅಧಿಸೂಚನೆಯ ಪ್ರಕಾರ, UPSC CSE ಪೂರ್ವಭಾವಿ ಪರೀಕ್ಷೆ 2024 ಅನ್ನು ಈಗ ಜೂನ್ 16 ಕ್ಕೆ ಮುಂದೂಡಲಾಗಿದೆ. ಚುನಾವಣೆಯ ಕಾರಣದಿಂದಾಗಿ 2024 ರ ಭಾರತೀಯ ಅರಣ್ಯ ಸೇವಾ ಪರೀಕ್ಷೆಯ ಸ್ಕ್ರೀನಿಂಗ್ ಪರೀಕ್ಷೆಯಾಗಿ ಕಾರ್ಯನಿರ್ವಹಿಸುವ 2024 ರ ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆಯನ್ನು ಮೇ 26 ರಿಂದ ಜೂನ್ 16ಕ್ಕೆ ಮುಂದೂಡಲು ಆಯೋಗವು ನಿರ್ಧರಿಸಿದೆ ಎಂದು ತಿಳಿಸಲಾಗಿದೆ.
2. ನೀಟ್ ಪಿಜಿ 2024:
ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ನೀಟ್ ಪಿಜಿ 2024 ಪರೀಕ್ಷೆಯ ದಿನಾಂಕವನ್ನು ಪರಿಷ್ಕರಿಸಿದೆ. ಪರೀಕ್ಷೆಯನ್ನು ಈಗ ಹಿಂದೂಡಲಾಗಿದೆ. ಈ ಮೊದಲು ಪರೀಕ್ಷ ಜುಲೈ 7 ರಂದು ನಡೆಯಬೇಕಿತ್ತು. ಈಗ ಈ ಪರೀಕ್ಷೆಯನ್ನು ಜೂನ್ 23ಕ್ಕೆ ನಡೆಸಲಾಗಿತ್ತು. ವೇಳಾಪಟ್ಟಿಯ ಪ್ರಕಾರ, ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಸ್ನಾತಕೋತ್ತರ) ಫಲಿತಾಂಶಗಳು ಜುಲೈ 15 ರೊಳಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ, ಆದರೆ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆಗಸ್ಟ್ 5 ರಿಂದ ಅಕ್ಟೋಬರ್ 15 ರವರೆಗೆ ನಿಗದಿಪಡಿಸಲಾಗಿದೆ.
3. ಜೆಇಇ ಮೇನ್ 2024:
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜಂಟಿ ಪ್ರವೇಶ ಪರೀಕ್ಷೆ (JEE) ಮೇನ್ 2024 ರ ಪರೀಕ್ಷೆಯ ದಿನಾಂಕಗಳನ್ನು ಸಹ ಪರಿಷ್ಕರಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಜೆಇಇ ಮೇನ್ 2024 ಸೆಷನ್ 2 ಅನ್ನು ಏಪ್ರಿಲ್ 4 ಮತ್ತು 12 ರ ನಡುವೆ ನಡೆಸಲಾಗುತ್ತದೆ. ಇದಕ್ಕೂ ಮುನ್ನ ಪರೀಕ್ಷೆಗಳು ಏಪ್ರಿಲ್ 4 ರಿಂದ ಏಪ್ರಿಲ್ 15ರವರೆಗೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ಪೇಪರ್ 1 (ಬಿಇ/ಬಿಟೆಕ್) ಏಪ್ರಿಲ್ 4, 5, 6, 8 ಮತ್ತು 9 ರಂದು ನಡೆಯಲಿದ್ದು, ಪೇಪರ್ 2 ಏಪ್ರಿಲ್ 12 ರಂದು ನಡೆಯಲಿದೆ.
4. ಐಸಿಎಐ ಸಿಎ ಮಧ್ಯಂತರ ಪರೀಕ್ಷೆ:
ಭಾರತೀಯ ಚಾರ್ಟೆಡ್ ಅಕೌಂಟೆಂಟ್‌ಗಳ ಸಂಸ್ಥೆ ನಡೆಸುವ, ಚಾರ್ಟೆಡ್ ಅಕೌಂಟೆಂಟ್ ಮಧ್ಯಂತರ ಪರೀಕ್ಷೆಗಳ ಗ್ರೂಪ್ 1 ಅನ್ನು ಮೇ 3, 5, ಮತ್ತು 9ರಂದು ನಡೆಸಲಾಗುತ್ತದೆ. ಇದಕ್ಕೂ ಮುನ್ನ ಮೇ 7 ರಂದು ನಡೆಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಅದೇ ರೀತಿ, ಗ್ರೂಪ್ 2 ಪರೀಕ್ಷೆಯು ಮೇ 9, 11 ಮತ್ತು 13 ರ ಬದಲಿಗೆ ಮೇ 11, 15 ಮತ್ತು 17 ರಂದು ನಿಗದಿಯಾಗಿದೆ.
5. ಕರ್ನಾಟಕ-ಪಿಎಸ್‌ಐ ಪರೀಕ್ಷೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 8 ರಂದು ನಡೆಸಲು ಉದ್ದೇಶಿಸಲಾಗಿದ್ದ ಪಿಎಸ್‌ಐ ಪರೀಕ್ಷೆಯನ್ನೂ ಮುಂದೂಡಿಕೆ ಮಾಡಿದೆ. ಪರಿಷ್ಕೃತ ದಿನಾಂಕವನ್ನು ಕರ್ನಾಟಕದಲ್ಲಿ ಚುನಾವಣೆ ಮುಗಿದ ಬಳಿಕ ಪ್ರಕಟ ಮಾಡಲಾಗುವುದು ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.
6. ಎಂಎಚ್‌ಟಿ ಸಿಇಟಿ-MHT CET (ಪಿಸಿಎಂ ಮತ್ತು ಪಿಸಿಬಿ)
ಮಹಾರಾಷ್ಟ್ರ ರಾಜ್ಯ ಸಾಮಾನ್ಯ ಪ್ರವೇಶ ಪರೀಕ್ಷೆ (MHT CET) ಕೋಶವು ಪಿಸಿಬಿ ಮತ್ತು ಪಿಸಿಎಂ ಅಭ್ಯರ್ಥಿಗಳಿಗೆ MHT CET 2024 ಪರೀಕ್ಷೆಗಳಿಗೆ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದೆ. ಮೂಲತಃ ಏಪ್ರಿಲ್ 16 ಮತ್ತು 30 ರ ನಡುವೆ ನಿಗದಿಯಾಗಿದ್ದ MHT-CET (PCM ಗುಂಪು) ಪರೀಕ್ಷೆಗಳನ್ನು ಈಗ ಮೇ 2 ರಿಂದ 17 ರವರೆಗೆ ನಡೆಸಲಾಗುವುದು. ಮತ್ತೊಂದೆಡೆ, PCB ಪರೀಕ್ಷೆಗಳು ಏಪ್ರಿಲ್ 22 ಮತ್ತು 30 ರ ನಡುವೆ ನಡೆಯಲಿವೆ.
7. ಟಿಎಸ್ ಇಎಪಿಸಿಇಟಿ (TS EAPCET) 2024
ತೆಲಂಗಾಣ ರಾಜ್ಯ ಇಂಜಿನಿಯರಿಂಗ್, ಕೃಷಿ ಮತ್ತು ಫಾರ್ಮಸಿ (ಪಶುವೈದ್ಯಕೀಯ ಇತ್ಯಾದಿ) ಸಾಮಾನ್ಯ ಪ್ರವೇಶ ಪರೀಕ್ಷೆ-2024 (TS EAPCET-2024) ಮೇ 9, 10, 11 ಮತ್ತು 12 ರಂದು ಎರಡು ಪಾಳಿಗಳಲ್ಲಿ ನಡೆಯಲಿದೆ. ಒಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಇತರೆ 3 ರಿಂದ 6 ರವರೆಗೆ ನಡೆಯಲಿದೆ.
8. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ, 'ಸ್ವಯಂ' ಜನವರಿ 2024 ಸೆಮಿಸ್ಟರ್ ಪರೀಕ್ಷೆಗಳ ದಿನಾಂಕಗಳನ್ನು ಮೇ 25 ರಿಂದ ಮೇ 27 ಕ್ಕೆ ಮುಂದೂಡಿದೆ.
ವರದಿಗಳ ಪ್ರಕಾರ, ಮೇ 15 ರಿಂದ 31 ರವರೆಗೆ ನಿಗದಿಪಡಿಸಲಾದ CUET ಯುಜಿ ಪರೀಕ್ಷೆಯ ದಿನಾಂಕಗಳು ಲೋಕಸಭೆ ಚುನಾವಣೆ ದಿನಾಂಕಗಳೊಂದಿಗೆ ಘರ್ಷಣೆಯಾಗುವ ಕಾರಣದಿಂದ ಪರಿಷ್ಕರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.