ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ

Published : Dec 02, 2025, 07:17 PM IST
KPS Schools

ಸಾರಾಂಶ

ಏಷ್ಯನ್‌ ಅಭಿವೃದ್ಧಿ ಬ್ಯಾಂಕ್ ಮತ್ತು ಕೆಕೆಆರ್‌ಡಿಬಿ ನೆರವಿನೊಂದಿಗೆ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆಗಳನ್ನು ಆರಂಭಿಸಲಿದೆ. ಈ ಮೂಲಕ, ಸರ್ಕಾರಿ ಶಾಲೆಗಳಲ್ಲಿ ಕುಸಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು  ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ.

ವರದಿ: ಸೋಮರಡ್ಡಿ ಅಳವಂಡಿ

ಕೊಪ್ಪಳ: ಏಷ್ಯನ್‌ ಅಭಿವೃದ್ಧಿ ಬ್ಯಾಂಕ್ ನೆರವಿನೊಂದಿಗೆ ಮತ್ತು ಕೆಕೆಆರ್‌ಡಿಬಿ ಅನುದಾನದ ಅಡಿಯಲ್ಲಿ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆಗಳನ್ನು ಬರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ರಾಜ್ಯ ಸರ್ಕಾರ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಇರುವ ಶಾಲೆಗಳನ್ನೇ ಗುರುತಿಸಿ, ಅಲ್ಲಿ ಸಕಲ ಸೌಕರ್ಯಗಳೊಂದಿಗೆ ಈಗಿರುವ ಕನ್ನಡ ಮಾಧ್ಯಮ ಶಾಲೆಯ ಜತೆಗೆ ಎಲ್‌ಕೆಜಿಯಿಂದ 12ನೇ ತರಗತಿ ವರೆಗೂ ಆಂಗ್ಲಮಾಧ್ಯಮ ಶಾಲೆ ಪ್ರಾರಂಭಿಸಲಾಗುತ್ತದೆ. ಅದರ ಜತೆಯಲ್ಲಿಯೇ ಅದರ ಸುತ್ತಮುತ್ತಲ ಶಾಲೆಗಳನ್ನೂ ಅಭಿವೃದ್ಧಿಪಡಿಸಲು ಮುಂದಾಗಿದೆ. ಹೌದು, ಕಳೆದ ವರ್ಷ ಬಜೆಟ್‌ನಲ್ಲಿ ರಾಜ್ಯ ಸರ್ಕಾರ 500 ಕೆಪಿಎಸ್ ಶಾಲೆ ಘೋಷಣೆ ಮಾಡಿತ್ತು. ಈಗ ಅದರ ಜತೆಗೆ ಕೆಕೆಆರ್‌ಡಿಬಿ ಅನುದಾನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ 200 ಕೆಪಿಎಸ್ ಶಾಲೆಯನ್ನು ಹೆಚ್ಚುವರಿಯಾಗಿ ಆರಂಭಿಸಲಾಗುತ್ತದೆ.

ನಾಲ್ಕು ಕೋಟಿ ರು. ಅನುದಾನ:

ಈಗಾಗಲೇ ಏಷ್ಯನ್‌ ಅಭಿವೃದ್ಧಿ ಬ್ಯಾಂಕಿನಿಂದ ₹500 ಕೋಟಿ ನೆರವಿನ ಜತೆಗೆ ರಾಜ್ಯ ಸರ್ಕಾರದ ಅನುದಾನದಿಂದ ಈ ಶಾಲೆಗಳು ತೆರೆಯಲಿವೆ. ಇದಕ್ಕೆ ಹೆಚ್ಚುವರಿಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 200 ಕೆಪಿಎಸ್ ಶಾಲೆಗಳನ್ನು ತೆರೆಯಲು ಕೆಕೆಆರ್‌ಡಿಬಿ ಅನುದಾನದಲ್ಲಿ ಪ್ರಸಕ್ತ ವರ್ಷ ₹200 ಕೋಟಿ ಹಾಗೂ ರಾಜ್ಯ ಸರ್ಕಾರದ ಅನುದಾನ ₹200 ಬಳಕೆ ಮಾಡಲಾಗುತ್ತದೆ. ಪ್ರತಿ ಶಾಲೆಗೆ ₹4 ನಾಲ್ಕು ಕೋಟಿ ನೀಡಲಾಗುತ್ತದೆ. ಕೊಠಡಿಗಳ ನಿರ್ಮಾಣ, ಗ್ರಂಥಾಲಯ, ಪ್ರಯೋಗಾಲಯವನ್ನೊಳಗೊಂಡು ಸುಸಜ್ಜಿತಗೊಳಿಸಲಾಗುತ್ತದೆ.

ಕುಸಿದ ವಿದ್ಯಾರ್ಥಿಗಳ ಸಂಖ್ಯೆ:

ಈಗಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದರಿಂದ ಹಾಗೂ ಈಗಾಗಲೇ ಪ್ರಾರಂಭಿಸಿರುವ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರ ಈ ನಿರ್ಧಾರ ಮಾಡಿದೆ. ಈ ಮೂಲಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಶಾಲೆಯಿಂದ ಹೊರಗೆ ಉಳಿಯವ ಮಕ್ಕಳ ಸಂಖ್ಯೆ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ಅಧಿಕವಾಗಿರುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಆಂಗ್ಲಮಾಧ್ಯಮ ಶಾಲೆ ಪ್ರಾರಂಭಿಸಲಾಗುತ್ತಿರುವುದು ಗಮನಾರ್ಹ ಸಂಗತಿ.

ಖಾಸಗಿ ಶಾಲೆಗಳಿಗೆ ಸೆಡ್ಡು:

ಖಾಸಗಿ ಶಾಲೆಗಳತ್ತ ವಿದ್ಯಾರ್ಥಿಗಳು ಸೆಳೆಯುತ್ತಿರುವುದಕ್ಕೆ ಪ್ರಮುಖ ಕಾರಣವೇ ಆಂಗ್ಲಮಾಧ್ಯಮ. ಹೀಗಾಗಿ ಸರ್ಕಾರ ಸಹ ಕೆಪಿಎಸ್ ಶಾಲೆಯಲ್ಲಿ ಎಲ್‌ಕೆಜಿಯಿಂದ 12ನೇ ತರಗತಿ ವರೆಗೂ ಆಂಗ್ಲಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುತ್ತಿದೆ. ಇದಕ್ಕಾಗಿ ಹೆಚ್ಚಾಗಿ ಹಿರಿಯ ಮತ್ತು ಪ್ರೌಢಶಾಲೆಯ ಹಂತದ ವೇಳೆಗೆ ಶಾಲೆಯಿಂದ ಹೊರಗೆ ಉಳಿಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಒಂದೇ ಕ್ಯಾಂಪಸ್‌ನಲ್ಲಿ ಎಲ್‌ಕೆಜಿಯಿಂದ 12ನೇ ತರಗತಿ ವರೆಗೆ ಪ್ರಾರಂಭಿಸುವುದರಿಂದ ಶಾಲೆಯಿಂದ ಹೊರಗೆ ಉಳಿಯುವುದನ್ನು ತಪ್ಪಿಸುವ ಗುರಿ ಹೊಂದಲಾಗಿದೆ.

ರಾಜ್ಯ ಸರ್ಕಾರ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಸಕಲ ಸೌಕರ್ಯಗಳನ್ನು ನೀಡಲು ಮುಂದಾಗಿದೆ. ಅದರಲ್ಲೂ ಎಲ್‌ಕೆಜಿಯಿಂದ 12ನೇ ತರಗತಿ ವರೆಗೂ ಒಂದೇ ಕ್ಯಾಂಪಸ್‌ನಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
90 ದಿನಗಳಲ್ಲಿ 44 ವಿದ್ಯಾರ್ಥಿಗಳ ಟಾರ್ಗೆಟ್: 6 ವರ್ಷದಲ್ಲಿ ವಿದೇಶದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳೆಷ್ಟು?