* ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಭರದ ಸಿದ್ಧತೆ
* ವಿದ್ಯಾರ್ಥಿ ಚಿತ್ರ ಸಹಿತ ಎಸ್ಸೆಸ್ಸೆಲ್ಸಿ ಉತ್ತರಪತ್ರಿಕೆ!
* ಹೆಸರು, ನೋಂದಣಿ ಸಂಖ್ಯೆ ವಿವರ ಕೂಡ ಮುದ್ರಣ
* ಸರಿ ಇದೆಯಾ ಎಂದು ನೋಡಿ ಉತ್ತರ ಬರೆಯಬೇಕು
ಬೆಂಗಳೂರು(ಜು.14): ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನೀಡಲಾಗುವ ಒಎಂಆರ್ (ಆಪ್ಟಿಕಲ್ ಮಾರ್ಕ್ಸ್ ರೀಡರ್) ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ತಮ್ಮ ಹೆಸರು, ರಿಜಿಸ್ಟರ್ ನಂಬರ್ ಸೇರಿದಂತೆ ಯಾವುದೇ ವಿವರಗಳನ್ನು ನೋಂದಾಯಿಸುವ ಅಗತ್ಯವಿಲ್ಲ. ವಿದ್ಯಾರ್ಥಿಯ ಫೋಟೋಸಹಿತ ಉತ್ತರ ಪತ್ರಿಕೆಯಲ್ಲಿ ಎಲ್ಲ ಮಾಹಿತಿಯೂ ಮುದ್ರಿತ ರೂಪದಲ್ಲೇ ಸಿದ್ಧವಾಗಿ ಬರಲಿದೆ.
ವಿದ್ಯಾರ್ಥಿಗಳು ಕೇವಲ ತಮ್ಮ ಸಹಿ ಮಾಡಿ, ಉತ್ತರ ನೀಡುವುದನ್ನು ಆರಂಭಿಸುವುದಷ್ಟೇ ಕೆಲಸ!
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಸಂಪೂರ್ಣ ವಿದ್ಯಾರ್ಥಿಸ್ನೇಹಿಯಾಗಿ ರೂಪಿಸಿದ್ದು, ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಸುಲಭವಾಗುವಂತೆ ಒಎಂಆರ್ ಸಿದ್ಧಪಡಿಸಿದೆ.
ಈ ಮೊದಲು ಒಎಂಆರ್ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಈ ಎಲ್ಲಾ ಮಾಹಿತಿಯನ್ನು ದಾಖಲಿಸಬೇಕಿತ್ತು. ಜತೆಗೆ, ತಮ್ಮ ಭಾವಚಿತ್ರವನ್ನು ಅಂಟಿಸಬೇಕಿತ್ತು. ಆದರೆ, ಈ ಬಾರಿ ಫೋಟೋ ಸೇರಿದಂತೆ ವಿದ್ಯಾರ್ಥಿಯ ಎಲ್ಲ ಅಗತ್ಯ ಮಾಹಿತಿ ಪೂರ್ವ ಮುದ್ರಣದೊಂದಿಗೆ ನೀಡಲು ಮಂಡಳಿ ಸಿದ್ಧತೆ ನಡೆಸಲಾಗಿದೆ ಎಂದು ಮಂಡಳಿಯ ನಿರ್ದೇಶಕರಾದ ವಿ.ಸುಮಂಗಲ ಅವರು ತಿಳಿಸಿದ್ದಾರೆ.
ಪರಿಶೀಲನೆ ಅಗತ್ಯ:
ವಿದ್ಯಾರ್ಥಿಗಳು ಒಎಂಆರ್ ಕೈಗೆ ಬಂದ ಕೂಡಲೇ ಅದರಲ್ಲಿ ಮುದ್ರಿತವಾಗಿರುವ ಹೆಸರು, ನೋಂದಣಿ ಸಂಖ್ಯೆ, ಪೋಟೋ ಹಾಗೂ ಇತರೆ ವಿವರಗಳು ಎಲ್ಲವೂ ತಮ್ಮದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿ ನಂತರ ಸಹಿ ಮಾಡುವುದು ಒಳ್ಳೆಯದು. ಪರೀಕ್ಷಾ ಅಕ್ರಮಗಳನ್ನು ತಡೆಯಲು ಹಾಗೂ ಭದ್ರತಾ ದೃಷ್ಟಿಯಿಂದ ಮಂಡಳಿಯು ಈ ಬಾರಿ ಪ್ರತಿ ಒಎಂಆರ್ ಹಾಳೆಯಲ್ಲಿ ಕ್ಯೂಆರ್ ಕೋಡ್ ಅನ್ನು ಮುದ್ರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಣ್ಣ ಬಣ್ಣದ ಒಎಂಆರ್:
ಈ ಬಾರಿ ಕೇವಲ ಎರಡೇ ದಿನದಲ್ಲಿ ಸರಳವಾಗಿ ಪರೀಕ್ಷೆ ನಡೆಯಲಿದೆ. ಮೂರು ಭಾಷಾ ವಿಷಯಗಳಿಗೆ ಒಂದು ಪ್ರಶ್ನೆ ಪತ್ರಿಕೆ, ಇನ್ನುಳಿದ ಮೂರು ಕೋರ್ ಸಬ್ಜೆಕ್ಟ್ಗಳಿಗೆ ಮತ್ತೊಂದು ಪ್ರಶ್ನೆ ಪತ್ರಿಕೆ ಇರುತ್ತದೆ. ಹೀಗೆ ನೀಡುವ ಪ್ರತಿ ಪ್ರಶ್ನೆ ಪತ್ರಿಕೆಯಲ್ಲಿ ಪ್ರತಿ ವಿಷಯಕ್ಕೆ ತಲಾ 40 ಅಂಕಗಳ ಪ್ರಶ್ನೆಗಳಂತೆ ಒಟ್ಟು ಮೂರು ವಿಷಯಗಳಿಂದ 120 ಅಂಕಗಳಿಗೆ ಪ್ರಶ್ನೆಗಳಿರುತ್ತವೆ. ಹೀಗೆ ಒಂದೇ ಬಾರಿ ಮೂರು ವಿಷಯಗಳಿಗೆ ವಿದ್ಯಾರ್ಥಿಗಳು ಉತ್ತರ ಗುರುತಿಸಬೇಕಿರುವುದರಿಂದ ಗೊಂದಲವಾಗಬಾರದೆಂದು ಒಎಂಆರ್ ಪ್ರತಿಗಳನ್ನು ಭಿನ್ನ ಬಣ್ಣಗಳೊಂದಿಗೆ ರೂಪಿಸಲಾಗಿದೆ.
ಪ್ರತಿ ವಿಷಯಕ್ಕೂ ಬೇರೆ ಬೇರೆ ಬಣ್ಣದ ಉತ್ತರ ಪತ್ರಿಕಾ ಪ್ರತಿಗಳನ್ನು ಒಎಂಆರ್‌ನಲ್ಲಿ ನೀಡಲಾಗಿರುತ್ತದೆ. ಅಧಿಕಾರಿಗಳು ಹೇಳುವ ಪ್ರಕಾರ, ಗಣಿತ ಪತ್ರಿಕೆಗೆ ಗುಲಾಬಿ, ವಿಜ್ಞಾನಕ್ಕೆ ಕಿತ್ತಳೆ ಮತ್ತು ಸಾಮಾಜಿಕ ವಿಜ್ಞಾನಕ್ಕೆ ಹಸಿರು ಬಣ್ಣದಲ್ಲಿರುತ್ತದೆ. ಅದೇ ರೀತಿ ಭಾಷಾ ವಿಷಯಗಳಿಗೂ ಪ್ರಥಮ ಭಾಷೆಗೆ ಗುಲಾಬಿ, ದ್ವಿತೀಯ ಭಾಷೆಗೆ ಕಿತ್ತಳೆ ಮತ್ತು ಮೂರನೇ ಭಾಷಾ ವಿಷಯಕ್ಕೆ ಹಸಿರು ಬಣ್ಣದ ಉತ್ತರ ಪ್ರತ್ರಿಕೆಯ ಪ್ರತಿ ಇರುತ್ತದೆ ಎಂದು ಮಾಹಿತಿ ನೀಡಿದರು.
ಜುಲೈ 19 ಮತ್ತು 22 ರಂದು ಎರಡು ದಿನಗಳಲ್ಲಿ ಈ ಬಾರಿಯ ಪರೀಕ್ಷೆ ನಡೆಯಲಿದ್ದು, ಪ್ರತಿ ದಿನದ ಪರೀಕ್ಷೆಗೆ ಮೂರು ಗಂಟೆಯ ಸಮಯಾವಕಾಶ ನೀಡಲಾಗಿದೆ. ಮೊದಲ ದಿನದ ಕೋರ್ ಸಬ್ಜೆಕ್ಟ್ಗಳ ಪರೀಕ್ಷೆಯಲ್ಲಿ 1ರಿಂದ 40 ರವರೆಗಿನ ಪ್ರಶ್ನೆಗಳು ಗಣಿತ, 41ರಿಂದ 80ರವರೆಗೆ ವಿಜ್ಞಾನ ಮತ್ತು 81 ರಿಂದ 120ರವರೆಗಿನ ಪ್ರಶ್ನೆಗಳು ಸಾಮಾಜಿಕ ವಿಜ್ಞಾನ ವಿಷಯಕ್ಕೆ ಸಂಬಂಧಿಸಿರುತ್ತವೆ. ಅದೇ ರೀತಿ ಎರಡನೇ ದಿನದ ಭಾಷಾ ವಿಷಯದ ಪರೀಕ್ಷೆಯಲ್ಲಿ 1 ರಿಂದ 40 ಮೊದಲ ಭಾಷೆ, 41 ರಿಂದ 80 ಎರಡನೇ ಭಾಷೆ ಮತ್ತು 81 ರಿಂದ 120ರ ವರೆಗಿನ ಪ್ರಶ್ನೆಗು ಮೂರನೇ ಭಾಷೆಗೆ ಸಂಬಂಧಿಸಿರುತ್ತವೆ ಎಂದು ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ವಿವರಿಸಲಾಗಿದೆ.