* ನೀವೆಲ್ಲರೂ ಈಗಾಗಲೇ ಪಾಸಾಗಿದ್ದೀರಿ
* ಆತಂಕ ಮಾಡಿಕೊಳ್ಳದೆ ಪರೀಕ್ಷೆ ಬರೆಯಿರಿ
* ಕೊರೋನಾ ಕುರಿತ ಸುರಕ್ಷತೆ ಮರೆಯದಿರಿ
ಬೆಂಗಳೂರು(ಜು.19): ನಿಗದಿಯಂತೆ ರಾಜ್ಯಾದ್ಯಂತ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಮೊದಲ ದಿನ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಹೀಗಾಗಿ ವಿದ್ಯಾರ್ಥಿಗಳೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಆರಾಮಾಗಿ ಪರೀಕ್ಷೆ ಬರೆಯಿರಿ. ಆಲ್ ದಿ ಬೆಸ್ಟ್.
ಈ ಬಾರಿ ರಾಜ್ಯದ 14,929 ಪ್ರೌಢ ಶಾಲೆಗಳಿಂದ 7.83 ಲಕ್ಷ ಹೊಸ ವಿದ್ಯಾರ್ಥಿಗಳು ಸೇರಿ ಒಟ್ಟಾರೆ 8,76,508 ಮಂದಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಇದರಲ್ಲಿ 4.72 ಲಕ್ಷ ಬಾಲಕರು, 4.03 ಲಕ್ಷ ಮಂದಿ ಬಾಲಕಿಯರಾಗಿದ್ದಾರೆ. ಪರೀಕ್ಷೆ ನಿಗದಿಪಡಿಸಿರುವ ಒಟ್ಟು 4885 ಪರೀಕ್ಷಾ ಕೇಂದ್ರಗಳಲ್ಲೂ ಯಾವುದೇ ರೀತಿಯ ಭದ್ರತೆ ಹಾಗೂ ಸುರಕ್ಷಾ ಲೋಪಗಳಾಗದಂತೆ ಆಯಾ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸರ್ವ ರೀತಿಯಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದ್ದು, ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಅಂತರದಲ್ಲಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಪರೀಕ್ಷಾ ಕಾರ್ಯಕ್ಕೆ 1.19 ಲಕ್ಷ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಕೇಂದ್ರಕ್ಕೆ ಬೇಗ ಹೋಗಿ:
ಮಳೆ ಹಾಗೂ ಆರೋಗ್ಯ ತಪಾಸಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕೆಲ ಗಂಟೆ ಮುಂಚಿತವಾಗಿ ಹೋಗುವುದು ಒಳ್ಳೆಯದು. ಹೋದ ತಕ್ಷಣವೇ ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಒಳಗೆ ಬಿಡಲಿದ್ದಾರೆ. ಪರೀಕ್ಷೆ ಆರಂಭಕ್ಕೆ ಬೆಲ್ ಹೊಡೆಯುವವರೆಗೂ ಕೊಠಡಿಯ ಒಳಗೇ ಕೂತು ಓದಿಕೊಳ್ಳಬಹುದು. ಬೆಲ್ ಆದ ಬಳಿಕ ಹೊರಗೆ ಬಂದು ತಮ್ಮ ಬ್ಯಾಗ್ ಇಟ್ಟು ಮತ್ತೆ ಪರೀಕ್ಷಾ ಕೊಠಡಿಗೆ ತೆರಳಲು ಅವಕಾಶ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳು ಹಾಗೂ ತಮ್ಮ ಮಕ್ಕಳನ್ನು ಕರೆತರುವ ಪೋಷಕರು ಸಂಪೂರ್ಣ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಾಗಲಿ, ಕೇಂದ್ರಗಳ ಮುಂದಾಗಲಿ ವಾಹನಗಳನ್ನು ಜಮಾಯಿಸುವುದು, ಗುಂಪುಗೂಡುವುದು ಮಾಡದೆ ಸಂಪೂರ್ಣ ಸುರಕ್ಷತಾ ವಾತಾವರಣದಲ್ಲಿ ಪರೀಕ್ಷೆ ನಡೆಸಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿಷಯವಾರು ಒಎಂಆರ್ ಸರಿಯಾಗಿ ಗಮನಿಸಿ:
ಈ ಬಾರಿ ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ಇರಲಿದ್ದು, ಪ್ರತಿಯೊಂದು ಪ್ರಶ್ನೆಗಳನ್ನೂ ಸರಿಯಾಗಿ ಓದಿಕೊಂಡು ತಮಗೆ ನೀಡಿರುವ ಒಎಂಆರ್ ಶೀಟ್‌ನಲ್ಲಿ ಆಯಾ ಪ್ರಶ್ನೆಯ ಸಂಖ್ಯೆಯ ಮುಂದೆ ಇರುವ ನಾಲ್ಕು ಉತ್ತರದಲ್ಲಿ ಸರಿಯಾದ ಉತ್ತರದ ಸಂಖ್ಯೆಯನ್ನು ಕಪ್ಪು ಅಥವಾ ನೀಲಿ ಬಾಲ್ ಬಾಯಿಂಟ್ ಪೆನ್ನಿಂದ ಮಾತ್ರ ನಿಗದಿತ ನಮೂನೆಯಲ್ಲಿ ಗುರುತಿಸಿ. ಒಂದೇ ದಿನ ಮೂರು ವಿಷಯಗಳಿಗೆ ಪರೀಕ್ಷೆ ನಡೆಯುತ್ತಿದೆ. ಪ್ರತಿ ವಿಷಯಕ್ಕೂ ಬಹು ಆಯ್ಕೆ ಪ್ರಶ್ನೆಗಳ ಮಾದರಿಯ 40 ಅಂಕಗಳ ಪ್ರಶ್ನೆಗಳಂತೆ ಒಟ್ಟು 120 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಒಂದೇ ಪ್ರಶ್ನೆ ಪತ್ರಿಕೆಯಲ್ಲಿ ಮೂರೂ ವಿಷಯದ ಪ್ರಶ್ನೆಗಳನ್ನು ಕ್ರಮವಾಗಿ ಕೇಳಲಾಗಿರುತ್ತದೆ. ಆದರೆ, ಉತ್ತರ ಗುರುತಿಸಲು ಪ್ರತಿ ವಿಷಯಕ್ಕೂ ಪ್ರತ್ಯೇಕ ಬಣ್ಣದ ಒಎಂಆರ್ ಪ್ರಶ್ನೆಗಳನ್ನು ನೀಡಲಾಗಿರುತ್ತದೆ. ಆ ಒಎಂಆರ್‌ನಲ್ಲೇ ಅದು ಯಾವ ವಿಷಯದ್ದು ಎಂದು ಸ್ಪಷ್ಟವಾಗಿ ನಮೂದಿಸಿರುತ್ತದೆ ಗಮನಿಸಿ ಉತ್ತರಿಸಿ ಎಂದು ಇಲಾಖೆ ತಿಳಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ಮಕ್ಕಳಿಗೆ ಶುಭ ಹಾರೈಕೆಗಳು. ಎಲ್ಲರೂ ಶಾಂತಚಿತ್ತರಾಗಿ, ಏಕಾಗ್ರತೆಯಿಂದ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಪರೀಕ್ಷೆಗಳನ್ನು ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ ಎಂದು ಪಾಲಕರಿಗೆ ಭರವಸೆ ನೀಡುತ್ತೇನೆ.
— B.S. Yediyurappa (@BSYBJP)ಪರೀಕ್ಷೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಪ್ರತಿ ವಿಷಯಕ್ಕೂ ಒಂದೊಂದು ಗಂಟೆ ಸಮಯ ಪಡೆದುಕೊಂಡು ಸರಾಗವಾಗಿ ಉತ್ತರಿಸಬಹುದು. ಸೋಮವಾರದ ಬಳಿಕ ಜು.22ರಂದು ಭಾಷಾ ವಿಷಯಗಳಿಗೆ ಎರಡನೇ ದಿನದ ಪರೀಕ್ಷೆ ನಡೆಯಲಿದೆ.
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ನಮ್ಮ ಹೆಮ್ಮೆಯ ಎಲ್ಲಾ ಮಕ್ಕಳಿಗೆ ಶುಭ ಹಾರೈಕೆಗಳು.
ಮಕ್ಕಳೆಲ್ಲರೂ ಶಾಂತಚಿತ್ತರಾಗಿ, ನಿರಾತಂಕವಾಗಿ, ಏಕಾಗ್ರತೆಯಿಂದ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ.
23ಕ್ಕೂ ಹೆಚ್ಚು ಪರೀಕ್ಷಾರ್ಥಿಗಳಿಗೆ ಪಾಸಿಟಿವ್
ಸೋಮವಾರ ಪರೀಕ್ಷೆ ಬರೆಯಬೇಕಿರುವ ವಿವಿಧ ಜಿಲ್ಲೆಗಳ 23 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಅವರೆಲ್ಲರಿಗೂ ಕೋವಿಡ್ ನಿಗಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಸುಮಂಗಲಾ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಇನ್ನೂ ಹೆಚ್ಚಿನ ಮಕ್ಕಳಿಗೆ ಸೋಂಕು ದೃಢಪಟ್ಟಿದ್ದು, ಎಲ್ಲ ಜಿಲ್ಲೆಗಳ ಡಿಡಿಪಿಐ, ಬಿಇಒಗಳಿಂದ ಮಾಹಿತಿ ಬರುವುದು ತಡವಾಗಿದೆ. ಒಟ್ಟಾರೆ ಎಷ್ಟುಮಕ್ಕಳು ಸೋಂಕಿತರಾಗಿದ್ದಾರೆ ಎಂಬುದು ಸೋಮವಾರ ಪರೀಕ್ಷೆ ಮುಗಿದ ಬಳಿಕ ತಿಳಿಯಲಿದೆ ಎನ್ನಲಾಗಿದೆ.