ಆ ಒಂದು ನಿಯಮದಿಂದ SSLC ಪರೀಕ್ಷೆ ವಂಚಿತ, ಕಾರವಾರದ ಚಿಗಳ್ಳಿ ಸರ್ಕಾರಿ ಶಾಲೆಯ 23 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

Published : Mar 23, 2026, 09:25 PM IST
sslc exam

ಸಾರಾಂಶ

ಮುಂಡಗೋಡ ತಾಲೂಕಿನ ಚಿಗಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ, ಕನಿಷ್ಠ 75% ಹಾಜರಾತಿ ಇಲ್ಲದ ಕಾರಣ 23 ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಾಲ್ ಟಿಕೆಟ್ ನಿರಾಕರಿಸಲಾಗಿದೆ. ಈ ನಿರ್ಧಾರದಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಂಡಿದ್ದು, ಶಿಕ್ಷಣ ಇಲಾಖೆಯು ನಿಯಮ ಪಾಲನೆಯಲ್ಲಿ ಕಟ್ಟುನಿಟ್ಟಾಗಿದೆ. ಸೂಕ್ತ ದಾಖಲೆ ನೀಡಿದರೆ ಪೂರಕ ಪರೀಕ್ಷೆಗೆ ಅವಕಾಶವಿದೆ ಎಂದು ತಿಳಿಸಲಾಗಿದೆ.

ಕಾರವಾರ: ಕೆಟ್ಟ ಮೇಲೆ ಬುದ್ದಿ ಎಂಬಂತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿದ್ದ 23 ವಿದ್ಯಾರ್ಥಿಗಳು SSLC ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ವಂಚಿತರಾಗಿರುವ ಘಟನೆ ಬೆಳಕಿಗೆ ಬಂದಿದೆ. ಹಾಲ್ ಟಿಕೆಟ್ ಸಿಗದೇ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಶಾಲೆಗೆ ಹೋಗುವ ಸಮಯದಲ್ಲಿ ನೆಟ್ಟಗೆ ಶಾಲೆಗೆ ಹೋಗಿಲ್ಲ. ಈಗ ಬುಡಕ್ಕೆ ಬೆಂಕಿ ಬಿದ್ದು ಭವಿಷ್ಯದ ಚಿಂತೆ ಕಾಡುತ್ತಿದೆ. ಪರೀಕ್ಷೆ ಆರಂಭವಾದ ಬಳಿಕ ಎಚ್ಚೆತ್ತುಕೊಂಡಿದ್ದಾರೆ.

ಈ ಶಾಲೆಯಲ್ಲಿ ಒಟ್ಟು 105 ವಿದ್ಯಾರ್ಥಿಗಳು SSLC ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಆದರೆ, ಹಾಜರಾತಿ ಪ್ರಮಾಣ ಕಡಿಮೆಯಿರುವ ಕಾರಣದಿಂದ 23 ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಲು ಶಾಲಾ ಆಡಳಿತ ಮತ್ತು ಶಿಕ್ಷಣ ಇಲಾಖೆ ನಿರಾಕರಿಸಿದೆ. ಈ ಪೈಕಿ 14 ವಿದ್ಯಾರ್ಥಿಗಳು ಹಾಗೂ 9 ವಿದ್ಯಾರ್ಥಿನಿಯರು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಶಿಕ್ಷಣ ಇಲಾಖೆಯ ನಿಯಮವೇನು?

ಶಿಕ್ಷಣ ಇಲಾಖೆಯ ನಿಯಮಾನುಸಾರ, SSLC ಪರೀಕ್ಷೆಗೆ ಹಾಜರಾಗಲು ಕನಿಷ್ಠ 75 ಶೇಕಡಾ ಹಾಜರಾತಿ ಕಡ್ಡಾಯವಾಗಿದೆ. ಆದರೆ ಚಿಗಳ್ಳಿ ಶಾಲೆಯ ಈ 23 ವಿದ್ಯಾರ್ಥಿಗಳ ಹಾಜರಾತಿ ಶೇಕಡಾ 8 ರಿಂದ 50 ರವರೆಗೆ ಮಾತ್ರ ಇರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆ, ನಿಯಮಗಳನ್ನು ಉಲ್ಲಂಘಿಸಿ ಹಾಲ್ ಟಿಕೆಟ್ ನೀಡಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದ್ದು, ಅವರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಸ್ಥಿತಿಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಹಲವು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಹಾಗೂ ಕುಟುಂಬ ಸಂಬಂಧಿತ ಸಮಸ್ಯೆಗಳ ಕಾರಣದಿಂದ ನಿಯಮಿತವಾಗಿ ಶಾಲೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ಹಾಗೊಂದು ವೇಳೆ ಇದ್ದರೆ ದಾಖಲೆಗಳನ್ನು ನೀಡಿ ಪರೀಕ್ಷೆಗೆ ಹಾಜರಾಗಬಹುದು.

ಪೋಷಕರು ಕೂಡ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಮಕ್ಕಳಿಗೆ ಒಂದು ಅವಕಾಶ ನೀಡುವಂತೆ ಶಿಕ್ಷಣ ಇಲಾಖೆಯನ್ನು ವಿನಂತಿಸಿದ್ದಾರೆ. “ವರ್ಷಪೂರ್ತಿ ಓದಿದ ಮಕ್ಕಳನ್ನು ಒಂದೇ ನಿಯಮದ ಆಧಾರದಲ್ಲಿ ಪರೀಕ್ಷೆಯಿಂದ ವಂಚಿಸುವುದು ಅನ್ಯಾಯ” ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರಕ ಪರೀಕ್ಷೆ ಬರೆಯೋ ಅವಕಾಶ ಸಿಗಬಹುದೇ?

ಇನ್ನೊಂದೆಡೆ, ಶಿಕ್ಷಣ ಇಲಾಖೆ ಅಧಿಕಾರಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಲುವಿನಲ್ಲಿ ಇದ್ದಾರೆ. ಹಾಜರಾತಿ ನಿಯಮವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಅಗತ್ಯವಾಗಿದ್ದು, ಅದನ್ನು ಸಡಿಲಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಘಟನೆ ಗ್ರಾಮದಲ್ಲಿಯೇ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆತಂಕ ಹೆಚ್ಚಿಸಿದೆ.

2026ನೇ ಸಾಲಿನ SSLC ಪರೀಕ್ಷೆ-1 ಅನ್ನು ಮಾರ್ಚ್ 18 ರಿಂದ ಏಪ್ರಿಲ್ 2, 2026 ರವರೆಗೆ ನಡೆಯಲಿದೆ. ಈಗಾಗಲೇ 2 ವಿಷಯದ ಪರೀಕ್ಷೆಗಳು ಮುಗಿದಿದೆ. ಇನ್ನು ಪರೀಕ್ಷೆ-2 (ಪೂರಕ ಪರೀಕ್ಷೆ) ಮೇ 18 ರಿಂದ ಮೇ 25, 2026 ರವರೆಗೆ ನಡೆಯಲಿದೆ. ಅದಕ್ಕಾದರೂ ಈ ವಿದ್ಯಾರ್ಥಿಗಳು ಸೂಕ್ತ ದಾಖಲೆ ನೀಡಿ ಹಾಜರಾಗಲು ಅವಕಾಶವಿದೆ,

PREV
Read more Articles on
click me!

Recommended Stories

ತಲೆಮೇಲೆ ಸೌದೆ ಹೊರೆ ಹೊತ್ತರೂ, ಬ್ರಿಟೀಷರು ನಾಚುವಂತಹ ಇಂಗ್ಲೀಷ್ ಮಾತು! ಮಹಿಳೆ ಆತ್ಮವಿಶ್ವಾಸಕ್ಕೆ ನೆಟ್ಟಿಗರು ಫಿದಾ!
ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ ತರಬೇತಿಯಾದ ಮಂಗಳೂರಿನ 15200 ಅಭ್ಯರ್ಥಿಗಳಲ್ಲಿ ಕೇವಲ 8.45%ಗೆ ಮಾತ್ರ ಜಾಬ್!