ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನೂರು ಎಕರೆ ವಿಸ್ತಾರದಲ್ಲಿ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ ತಲೆ ಎತ್ತಲಿದ್ದು, 320 ಕೋಟಿ ರೂ. ವೆಚ್ಚದಲ್ಲಿ ಕ್ಯಾಂಪಸ್ ನಿರ್ಮಾಣವಾಗಲಿದೆ. ಸದ್ಯ ಈ ವಿವಿ ವ್ಯಾಪ್ತಿಗೆ 31 ಕಾಲೇಜುಗಳು ಸೇರಿವೆ.
ಮಾಗಡಿ(ಜ.5): ರಾಮನಗರ (Ramanagara) ಜಿಲ್ಲೆಯ ಮಾಗಡಿ (Magadi) ತಾಲೂಕಿನಲ್ಲಿ ನೂರು ಎಕರೆ ವಿಸ್ತಾರದಲ್ಲಿ ತಲೆ ಎತ್ತಲಿದೆ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ (Karnataka Sanskrit University). ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ ಈ ವಿಶ್ವ ವಿದ್ಯಾಲಯ (University) ಕ್ಯಾಂಪಸ್ ಸ್ಥಾಪನೆಯಾಗಲಿದೆ. ವೇದ, ವಿಜ್ಞಾನ, ಗಣಿತ ಹಾಗೂ ವಿಜ್ಞಾನ ತಂತ್ರಜ್ಞಾನಕ್ಕೆ ಸಂಸ್ಕೃತ ಭಾಷೆಯ ಕೊಡುಗೆ ಅನನ್ಯ. ಇದರ ಕುರಿತು ಜಗತ್ತಿನ ವಿವಿಧ ಮೂಲೆಗಳಿಂದ ಅಧ್ಯಯನ ಮಾಡಲು ಭಾರತಕ್ಕೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯ ಜೊತೆಗೆ ಆಧುನಿಕ ಶಿಕ್ಷಣ ಪಡೆಯುವಂತಹ ಕೇಂದ್ರಗಳನ್ನು ಇದೇ ವಿಶ್ವವಿದ್ಯಾಲಯ ಅಡಿಯಲ್ಲಿ ಪ್ರಾರಂಭಿಸಲಾಗುತ್ತಿದೆ.
ಹತ್ತು ವರ್ಷಗಳ ಹಿಂದೆ ಸಂಸ್ಕೃತ ವಿಶ್ವವಿದ್ಯಾಲಯ ಇಲ್ಲಿ 100 ಎಕರೆ ಜಾಗ ಮಂಜೂರಾಗಿದ್ದರೂ ತಾಂತ್ರಿಕ ಕಾರಣಗಳಿಂದ ಜಾಗ ಹಸ್ತಾಂತರ ವಿಳಂಬವಾಗಿತ್ತು. ಇದೀಗ ಇಲ್ಲಿ 320 ಕೋಟಿ ರೂ. ವೆಚ್ಚದಲ್ಲಿ ಕ್ಯಾಂಪಸ್ ನಿರ್ಮಾಣವಾಗಲಿದೆ. ತರ್ಕ, ವಿಮರ್ಶೆ, ಅರ್ಥಶಾಸ್ತ್ರ, ಕಂಪ್ಯೂಟರ್, ಯೋಗ, ಆಯುರ್ವೇದ ವೈದ್ಯ ತರಬೇತಿ, ದೇಶಿ ಗಿಡಮೂಲಿಕೆಗಳ ವನ ಹಾಗೂ ವೇದಗಣಿತ, ಶಿಕ್ಷಕ ತರಬೇತಿ ಕೇಂದ್ರಗಳು, ಬೃಹತ್ ಗ್ರಂಥಾಲಯ ನಿರ್ಮಾಣವೂ ಸೇರಿದಂತೆ ಅನೇಕ ಯೋಜನೆಗಳು ಬರಲಿವೆ. ಸದ್ಯ ಈ ವಿವಿ ವ್ಯಾಪ್ತಿಗೆ 31 ಕಾಲೇಜುಗಳು ಸೇರಿವೆ.
ರಾಜ್ಯದಲ್ಲಿ 2010ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಲಾಗಿತ್ತು. 2013ರಲ್ಲಿ ಈ ವಿಶ್ವವಿದ್ಯಾಲಯದ ಕಟ್ಟಡಗಳ ನಿರ್ಮಾಣಕ್ಕೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ 100 ಎಕರೆ ಜಾಗ ಮಂಜೂರು ಮಾಡಲಾಗಿತ್ತು. 2015ರಲ್ಲಿ ಸದರಿ ಜಮೀನಿನ ನಕ್ಷೆ ಅನುಮೋದಿಸಿ ವಿಶ್ವ ವಿದ್ಯಾಲಯಕ್ಕೆ ಹಸ್ತಾಂತರಿಸಲಾಗಿತ್ತು. ವಿಶ್ವ ವಿದ್ಯಾಲಯವು ಸುಮಾರು 369 ಕೋಟಿ ವೆಚ್ಚದಲ್ಲಿ ಆಡಳಿತ ಭವನ, ಶೈಕ್ಷಣಿಕ ಭವನಗಳು ಮತ್ತು ವಿದ್ಯಾರ್ಥಿ ನಿಲಯಗಳು ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ನೀಲನಕ್ಷೆ ಸೇರಿದಂತೆ ಇತರ ವಿವರಗಳ ಪ್ರಸ್ತಾವನೆಯನ್ನು 2019 ರಲ್ಲಿ ಸರಕಾರದ ಅನುಮೋದನೆಗೆ ಸಲ್ಲಿಸಲಾಗಿತ್ತು.
ಆದರೆ ಭೂಸ್ವಾಧೀನ ಸಮಸ್ಯೆಗಳಿಂದ, ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಅನುದಾನ ಬಿಡುಗಡೆಗೆ ನಿರ್ಬಂಧ ಹೇರಿದ್ದರಿಂದ ಕಟ್ಟಡ ನಿರ್ಮಾಣ ತಡವಾಗಿದೆ. ಸದ್ಯ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಜಯಚಾಮರಾಜೇಂದ್ರ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದೆ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಿ ಕಟ್ಟಡ ನಿರ್ಮಾಣವಾಗಲಿದೆ.
undefined
Education Loan: ಉನ್ನತ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಸಾಲ ಪಡೆಯುತ್ತಿದ್ದೀರಾ?
ಮಾಗಡಿಯಲ್ಲಿ ಶೈಕ್ಷಣಿಕ ಅಭಿವೃದ್ಧಿಯ ಪರ್ವ: ರಾಮನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾಗಡಿ ತಾಲೂಕಿನಲ್ಲಿರುವ ತಿಪ್ಪಸಂದ್ರ ಹೋಬಳಿಯಲ್ಲಿ 100 ಎಕರೆ ವಿಸ್ತಾರದಲ್ಲಿ ತಲೆಯೆತ್ತಲಿರುವ ಕರ್ನಾಟಕ ರಾಜ್ಯ ಸಂಸ್ಕೃತ ವಿವಿ ಕ್ಯಾಂಪಸ್, ಕರ್ನಾಟಕ ಮುಕ್ತ ವಿವಿ ಪ್ರಾದೇಶಿಕ ಕೇಂದ್ರ ನಿರ್ಮಾಣ, ಅಜ್ಜನಹಳ್ಳಿಯಲ್ಲಿ ಮೆಟ್ರಿಕ್-ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ನಿರ್ಮಾಣ, ಮಾಗಡಿ ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಮತ್ತು ನೂತನ ಗ್ರಂಥಾಲಯ ಕಟ್ಟಡ, ಕುದೂರಿನಲ್ಲಿ ತಲೆಯೆತ್ತಲಿರುವ ಮೆಟ್ರಿಕ್-ಪೂರ್ವ ಬಾಲಕಿಯರ ಹಾಸ್ಟೆಲ್ ಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಇದರ ಜೊತೆಗೆ ರಾಮನಗರ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ 5 ಅಂಗನವಾಡಿಗಳು, ಚನ್ನಪಟ್ಟಣ ತಾಲೂಕು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಿಸಿರುವ ಹೆಚ್ಚುವರಿ ಕೊಠಡಿಗಳು, ಮಾಕಳಿ ಮತ್ತು ಚಕ್ಕೆರೆಗಳಲ್ಲಿ ನಿರ್ಮಿಸಿರುವ ಸರಕಾರಿ ಪದವಿಪೂರ್ವ ಕಾಲೇಜುಗಳನ್ನು ಉದ್ಘಾಟಿಸಿದರು. ಮಾತ್ರವಲ್ಲ ರಾಮನಗರದ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಸಂಸ್ಥೆಯ 2 ಮತ್ತು 3ನೇ ಮಹಡಿ, ಅರ್ಚಕರಹಳ್ಳಿಯಲ್ಲಿ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಹಾಸ್ಟೆಲ್ ನಿರ್ಮಾಣ ಮತ್ತು ರಾಮನಗರದಲ್ಲಿ ತಲೆಯೆತ್ತಲಿರುವ ಸರಕಾರಿ ಯುನಾನಿ ಕಾಲೇಜು ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.