* ಜುಲೈ 21 ರಿಂದ 27ರೊಳಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ?
* ಈ ವರ್ಷ ಹೇಗೆ ನಡೆಯುತ್ತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ?
* ಎಸ್ಸೆಸ್ಸೆಲ್ಸಿಗೆ 2 ರೀತಿಯ ಪರೀಕ್ಷೆ ನಡೆಸಲು ನಿರ್ಧಾರ
* ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಸೇರಿ 1 ಪ್ರಶ್ನೆ ಪತ್ರಿಕೆ
ಬೆಂಗಳೂರು(ಜೂ.28):
ಕೊರೋನಾ ಯಾವಾಗದಿಂದ ತನ್ನ ಹಾವಳಿ ಆರಂಭಿಸಿದೆಯೋ, ಇದು ಎಲ್ಲರ ಜೀವನದಲ್ಲಿ ನಾನಾ ಬಗೆಯ ಹಾನಿಯುಂಟು ಮಾಡಿದೆ. ಆದರೆ ಈ ಕಣ್ಣಿಗೆ ಕಾಣದ ವೈರಸ್‌ನಿಂದ ಶಿಕ್ಷಣ ಕ್ಷೇತ್ರ ಬಹಳಷ್ಟು ಪ್ರಭಾವಕ್ಕೊಳಗಾಗಿದೆ. ಕೊರೋನಾ ಸಂಕಟದಿಂದ ಶಾಲೆ ಮುಚ್ಚಲಾಗಿದೆ. ಪರೀಕ್ಷೆಗಳು ಪದೇ ಪದೇ ಮುಂದೂಡಲಾಗುತ್ತಿದೆ. ಮಕ್ಕಳೂ ಇದರಿಂದ ಭಾರೀ ಗೊಂದಲಕ್ಕೊಳಗಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ದ್ವಿತೀಯ ಪಿಯುಸಿ ಹಾಗೂ SSLC ಮಕ್ಕಳು ಕಂಗಾಲಾಗಿದ್ದಾರೆ. ಹೀಗಿರುವಾಗ ಇಂದು ಕರ್ನಾಟಕ ಶಿಇಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ಇದರಲ್ಲಿ SSLC ಪರೀಕ್ಷಾ ದಿನಾಂಕದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೌದು ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ SSLC ಪರೀಕ್ಷಾ ದಿನಾಂಕದ ಜೊತೆ ಶಾಲೆ ಪುನಾರಂಭದ ಬಗ್ಗೆಯೂ ಚರ್ಚೆ ನಡೆಯಲಿದೆ. ಹೀಗಿರುವಾಗ ಜುಲೈ 21 ರಿಂದ 27ರೊಳಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಕೇಳಿ ಬಂದಿವೆ. ವೈರಸ್ ಹಾವಳಿ ಹಿನ್ನೆಲೆ ಎಸ್ಸೆಸ್ಸೆಲ್ಸಿಗೆ 2 ಪರೀಕ್ಷೆ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಸೇರಿ 1 ಪ್ರಶ್ನೆ ಪತ್ರಿಕೆಯಾದರೆ, ಕನ್ನಡ, ಹಿಂದಿ, ಇಂಗ್ಲೀಷ್ ಸೇರಿಸಿ 2ನೇ ಪರೀಕ್ಷೆ ನಡೆಯಲಿದೆ.
ತಲಾ 40 ಅಂಕಗಳೊಂದಿಗೆ 6 ವಿಷಯಗಳ ಪರೀಕ್ಷೆ ನಡೆಯಲಿದ್ದು, ಒಂದು ಹಾಲ್ನಲ್ಲಿ 10 - 12 ವಿದ್ಯಾರ್ಥಿ ಕೂರಿಸಿ ಪರೀಕ್ಷೆ ನಡೆಸಲಿದ್ದಾರೆನ್ನಲಾಗಿದೆ. A+, A ಗ್ರೇಡ್ ನೀಡಿ ಎಲ್ಲರನ್ನೂ ಪಾಸ್ ಮಾಡಲಾಗುತ್ತದೆ ಎಂದೂ ಹೇಳಲಾಗಿದೆ. 6 ಸಾವಿರ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದ್ದು, ಈ ವರ್ಷ ಪರೀಕ್ಷೆ 8.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಶಾಲೆ ಪ್ರಾರಂಭಿಸುವ ಬಗ್ಗೆಯೂ ನಿರ್ಧಾರ
ಕಳೆದ ಶುಕ್ರವಾರ ನಡೆದ ಮೊದಲ ಸಭೆಯಲ್ಲಿ ಬಹುತೇಕ ಅಭಿಪ್ರಾಯ ಸಂಗ್ರಹ ಕಾರ್ಯ ಮುಗಿದಿದ್ದು, ಎಂದಿನಿಂದ ಹಾಗೂ ಮೊದಲ ಹಂತದಲ್ಲಿ ಯಾವ ತರಗತಿಗಳಿಗೆ ಶಾಲೆಗಳನ್ನು ಭೌತಿಕವಾಗಿ ಆರಂಭಿಸಬಹುದು ಅಥವಾ ಸದ್ಯಕ್ಕೆ ಭೌತಿಕ ತರಗತಿ ಬದಲು ಆನ್‌ಲೈನ್ ಹಾಗೂ ಇತರೆ ಪರ್ಯಾಯ ಮಾರ್ಗಗಳಲ್ಲಿ ಮಾತ್ರವೇ ಶೈಕ್ಷಣಿಕ ಚಟುವಟಿಕೆ ನಡೆಸುವುದೇ ಎಂಬ ಬಗ್ಗೆ ಒಂದು ಸ್ಪಷ್ಟನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಒಂದು ವೇಳೆ ಶಾಲೆ ಭೌತಿಕವಾಗಿ ಆರಂಭಿಸುವ ನಿರ್ಧಾರಕ್ಕೆ ಬಂದರೆ ಆರೋಗ್ಯ ಇಲಾಖೆಯ ಸಮ್ಮತಿ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ರಾಜ್ಯದಲ್ಲಿ ಆದಷ್ಟುಬೇಗ ಶಾಲೆ ಆರಂಭಿಸುವಂತೆ ಶಿಫಾರಸು ಮಾಡಿರುವ ಡಾ.ದೇವಿಶೆಟ್ಟಿನೇತೃತ್ವದ ತಜ್ಞರ ಸಮಿತಿ ಶಾಲಾರಂಭಕ್ಕೂ ಮುನ್ನ ಸಂಬಂಧಿಸಿದ ಪಾಲುದಾರರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ತಿಳಿಸಿತ್ತು.
ಅದರಂತೆ ಸಚಿವರು, ಶುಕ್ರವಾರವಷ್ಟೇ ಮೊದಲ ಹಂತ ಸಭೆ ನಡೆಸಿ ವಿವಿಧ ಶಿಕ್ಷಣ ತಜ್ಞರು, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪರಿಣತರು ಸೇರಿದಂತೆ ಸಮಾಜದ ವಿವಿಧ ಸ್ತರದ ಪ್ರತಿನಿಧಿಗಳಿಂದ ಸಲಹೆ, ಅಭಿಪ್ರಾಯ ಸಂಗ್ರಹಿದ್ದರು. ಸಭೆಯಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಹೀಗಾಗಿ ಸೋಮವಾರ ಸರ್ವ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಮತ್ತೊಂದು ಸಭೆ ನಡೆಯಲಿದೆ.