ಶಾಲಾ ಶುಲ್ಕ ಹೆಚ್ಚಿಸದಂತೆ ಸುತ್ತೋಲೆ: ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ನೋಟಿಸ್‌

By Kannadaprabha NewsFirst Published Mar 20, 2021, 7:20 AM IST
Highlights

ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ| ಕೋವಿಡ್‌ನಿಂದ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ| ಶುಲ್ಕ ಹೆಚ್ಚಿಸದಿದ್ದರೆ ಶಾಲೆ ನಡೆಸುವುದೇ ಕಷ್ಟ| 

ಬೆಂಗಳೂರು(ಮಾ.20):  ಶಾಲಾ ಶುಲ್ಕ ಹೆಚ್ಚಿಸದಂತೆ ಸುತ್ತೋಲೆ ಹೊರಡಿಸಿರುವ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದೆ.

ಈ ಕುರಿತು ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಏ.16ಕ್ಕೆ ಮುಂದೂಡಿದೆ.

ಮೋದಿಯವರ 'ಪರೀಕ್ಷಾ ಪೇ ಚರ್ಚಾ'ಗೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

ಕೊರೋನಾ ಹಿನ್ನೆಲೆಯಲ್ಲಿ ಶಾಲಾ ಶುಲ್ಕ ಪಾವತಿ ಮಾಡದಂತೆ ಪೋಷಕರಿಗೆ ಸರ್ಕಾರವು ನಿರ್ದೇಶಿಸಿತ್ತು. ಆದರೆ ಪೋಷಕರು ಶುಲ್ಕ ನೀಡದೆ ಹೋದರೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಲು ಆಗುತ್ತಿಲ್ಲ. ಹಾಗೆಯೇ, ಸರ್ಕಾರ ಆರ್‌ಟಿಇ ಮರು ಪಾವತಿ ಶುಲ್ಕ ಬಿಡುಗಡೆ ಮಾಡಿಲ್ಲ. ಆದ್ದರಿಂದ ಪೋಷಕರಿಗೆ ನೀಡಿರುವ ಸೂಚನೆ ಹಿಂಪಡೆಯಲು ಮತ್ತು ಆರ್‌ಟಿಇ ಮರು ಪಾವತಿ ಶುಲ್ಕ ಬಿಡುಗಡೆ ಮಾಡಲು ಕೋರಿ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಸಂಘದ ಮನವಿಯನ್ನು ಸರ್ಕಾರ ಪರಿಗಣಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು.

‘ಆ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಸಂಘದ ಮನವಿ ಪರಿಗಣಿಸುವಂತೆ ಸೂಚಿಸಿತ್ತು. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಸೂಚನೆಯಂತೆ ಸಂಘದ ಮನವಿ ಪರಿಗಣಿಸಿಲ್ಲ. ಅಲ್ಲದೆ, 2020-21ನೇ ಸಾಲಿನಲ್ಲಿ ಶಾಲೆಗಳು ಶುಲ್ಕ ಹೆಚ್ಚಿಸಿದರೆ ಕ್ರಮ ಕೈಗೊಳ್ಳುವುದಾಗಿ ಸುತ್ತೋಲೆ ಹೊರಡಿಸಿದೆ. ರಾಜ್ಯದ ಖಾಸಗಿ ಶಾಲೆಗಳಲ್ಲಿ 55 ಸಾವಿರಕ್ಕೂ ಅಧಿಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕೋವಿಡ್‌ನಿಂದ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಶುಲ್ಕ ಹೆಚ್ಚಿಸದಿದ್ದರೆ ಶಾಲೆಗಳನ್ನು ನಡೆಸುವುದೇ ಕಷ್ಟವಾಗಲಿದೆ. ಆದ್ದರಿಂದ ಏಕ ಸದಸ್ಯ ನ್ಯಾಯಪೀಠದ ಸೂಚನೆ ಪಾಲಿಸದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕು’ ಎಂದು ಸಂಘ ಅರ್ಜಿಯಲ್ಲಿ ಕೋರಿದೆ.
 

click me!