ಬೆಂಗಳೂರು (ಆ.06) : ರಾಜ್ಯದಲ್ಲಿ ಕೊರೋನಾ ಹಿನ್ನೆಲೆ ಶಾಲಾ-ಕಾಲೇಜುಗಳು ಬಂದ್ ಆಗಿ 2 ವರ್ಷಗಳೇ ಆಗುತ್ತಲಿದ್ದು, ಇದೀಗ ಮತ್ತೆ ಶಾಲೆ ಆರಂಭಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.
ಈಗಾಗಲೇ ಶಾಲೆ ಪ್ರಾರಂಭಿಸುವಂತೆ ಸರ್ಕಾರಕ್ಕೆ ತಜ್ಞರ ಸಮಿತಿ ವರದಿ ಸಲ್ಲಿಸಿದ್ದು, ಭೌತಿಕ ತರಗತಿ ಅಥವಾ ವಿದ್ಯಾಗಮ ಪ್ರಾರಂಭಿಸಲು ಸಲಹೆ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಶಿಕ್ಷಣ ಇಲಾಖೆ ಆಯುಕ್ತರು ಚರ್ಚೆ ನಡೆಸಿದದ್ದು, ಆಗಸ್ಟ್ 23 ರಿಂದ ಶಾಲಾ-ಕಾಲೇಜು ಪ್ರಾರಂಭದ ಬಗ್ಗೆ ನಿರ್ಧರಿಸಿದ್ದಾರೆ.
ಎರಡು ಹಂತದಲ್ಲಿ ಶಾಲಾ-ಕಾಲೇಜು ಪ್ರಾರಂಭ ಮಾಡುವ ಬಗ್ಗೆ ಸಿಎಂ ಹಾಗೂ ಶಿಕ್ಷಣ ಇಲಾಖೆ ಆಯುಕ್ತರು ಚರ್ಚಿಸಿದ್ದು ಮೊದಲ ಹಂತದಲ್ಲಿ 9-12 ನೇ ತರಗತಿಗೆ ಬ್ಯಾಚ್ ವೈಸ್ ತರಗತಿಗಳು ನಡೆಸಲು ಸೂಚನೆ ನೀಡಲಾಗಿದೆ. ದಿನ ಬಿಟ್ಟು ದಿನ ತರಗತಿಗಳನ್ನ ನಡೆಸಲು ಸೂಚನೆ ನೀಡಲಾಗಿದೆ. ಒಂದು ಬ್ಯಾಚ್ ಗೆ ವಾರದಲ್ಲಿ ಮೂರು ದಿನ ತರಗತಿಗಳಿರುತ್ತದೆ.
ಶಾಲೆ ಆರಂಭ ಸ್ವಲ್ಪ ಲೇಟ್, SSLC Resultಗೆ ಮುಹೂರ್ತ ಫಿಕ್ಸ್
1-8 ನೇ ತರಗತಿ ಪ್ರಾರಂಭ ವಿಚಾರದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆಗಸ್ಟ್ ಕೊನೆ ವಾರದಲ್ಲಿ ಪರಿಸ್ಥಿತಿ ಅವಲೋಕನ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.