Karnataka II PUC| ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪಬ್ಲಿಕ್‌ ಪರೀಕ್ಷೆ ಮುಂದಕ್ಕೆ!

Published : Nov 18, 2021, 09:09 AM ISTUpdated : Nov 18, 2021, 09:35 AM IST
Karnataka II PUC| ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪಬ್ಲಿಕ್‌ ಪರೀಕ್ಷೆ ಮುಂದಕ್ಕೆ!

ಸಾರಾಂಶ

* ಇಂದು ಪರಿಷ್ಕೃತ ದಿನಾಂಕ ಪ್ರಕಟಣೆ ಸಾಧ್ಯತೆ * ಪಿಯು-2 ಅರ್ಧವಾರ್ಷಿಕ ಪಬ್ಲಿಕ್‌ ಪರೀಕ್ಷೆ ಮುಂದಕ್ಕೆ * ಕಾಲೇಜು ಮಟ್ಟದಲ್ಲೇ ಮೌಲ್ಯಮಾಪನಕ್ಕೆ ಓಕೆ

ಬೆಂಗಳೂರು(ನ.18): ನವೆಂಬರ್‌ 29ರಿಂದ ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆಯನ್ನು (Second PUC Mid- Term Examination) ಪಬ್ಲಿಕ್‌ ಪರೀಕ್ಷೆಯಾಗಿ ನಡೆಸಲು ಮುಂದಾದ ಕ್ರಮಕ್ಕೆ ವಿದ್ಯಾರ್ಥಿಗಳಿಂದ ವಿರೋಧ, ಪ್ರತಿಭಟನೆ ಹಾಗೂ ಉಪನ್ಯಾಸಕರಿಂದ ಕೆಲ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷೆಗಳನ್ನು (Pre University Examination) ಮುಂದೂಡಲು ತೀರ್ಮಾನಿಸಿದೆ. ಜೊತೆಗೆ ಜಿಲ್ಲೆ, ತಾಲ್ಲೂಕು ಕೇಂದ್ರಗಳ ಬದಲು ಆಯಾ ಕಾಲೇಜುಗಳಲ್ಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಡಲು ಇಲಾಖೆ ಒಪ್ಪಿದೆ.

ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ (Time table) ನಿಗದಿ ಸಂಬಂಧ ಗುರುವಾರ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (Minister BC Nagesh) ಅವರೊಂದಿಗೆ ಪಿಯು ಇಲಾಖೆಯ ನಿರ್ದೇಶಕರಾದ ಆರ್‌.ಸ್ನೇಹಲ್‌ ಅವರು ಚರ್ಚಿಸಿ ನಿರ್ಧರಿಸಲಿದ್ದಾರೆ. ಬಳಿಕ ಅಧಿಕೃತ ಸುತ್ತೋಲೆ ಹೊರಬೀಳುವ ಸಾಧ್ಯತೆ ಇದೆ.

ಅರ್ಧವಾರ್ಷಿಕ ಪರೀಕ್ಷೆಯನ್ನು ಇಲಾಖೆಯಿಂದ ನಡೆಸುವ ನಿರ್ಧಾರಕ್ಕೆ ವಿದ್ಯಾರ್ಥಿಗಳಿಂದ ವಿರೋಧ ಹಾಗೂ ಈ ಸಂಬಂಧ ಕೆಲ ಅಂಶಗಳನ್ನು ಪುನರ್‌ ಪರಿಶೀಲಿಸುವಂತೆ ಪಿಯು ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಂದ ಮನವಿ ಬಂದ ಹಿನ್ನೆಲೆಯಲ್ಲಿ ನಿರ್ದೇಶಕರು ಬುಧವಾರ ಪ್ರಾಂಶುಪಾಲರ ಸಂಘದ ಅಧ್ಯಕ್ಷರೂ ಆದ ಹಾಲಿ ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡ, ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್‌.ನಿಂಗೇಗೌಡ, ಅನುದಾನಿತ ಶಾಲಾ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗಳ ಸಂಘದ ಅಧ್ಯಕ್ಷ ಕರಬಸಪ್ಪ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ನಿರ್ದೇಶಕರು ಮಲ್ಲೇಶ್ವರದ ಕಚೇರಿಯಲ್ಲಿ ಸಭೆ ನಡೆಸಿ ಅಭಿಪ್ರಾಯ ಪಡೆದರು.

ಏಕಕಾಲಕ್ಕೆ ಪರೀಕ್ಷೆ:

ಸಭೆಯಲ್ಲಿ ಇಲಾಖೆಯಿಂದಲೇ ಪ್ರಶ್ನೆ ಪತ್ರಿಕೆ ನೀಡಿ ಏಕಕಾಲಕ್ಕೆ ಪರೀಕ್ಷೆ ನಡೆಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ. ಆದರೆ, ಕಾಲೇಜುಗಳು ತಡವಾಗಿ ಆರಂಭವಾಗಿದ್ದರಿಂದ ನಿಗದಿತ ಪಠ್ಯಕ್ರಮ ಬೋಧನೆ ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಪರೀಕ್ಷಾ ದಿನಾಂಕ ಮುಂದೂಡಿ ನಿಗದಿತ ಪಠ್ಯಕ್ರಮ ಬೋಧನೆ ಪೂರ್ಣಗೊಳಿಸಲು ಇನ್ನಷ್ಟುಕಾಲಾವಕಾಶ ನೀಡಿ ಪರೀಕ್ಷೆ ಮುಂದೂಡಲು ನಿರ್ಧರಿಸಲಾಗಿದೆ.

ಇಂದು ಅಂತಿಮ ವೇಳಾಪಟ್ಟಿ:

ದ್ವಿತೀಯ ಪಿಯು ಜತೆಗೆ ಪ್ರಥಮ ಪಿಯು ಅರ್ಧವಾರ್ಷಿಕ ಪರೀಕ್ಷೆಯನ್ನೂ ಒಂದೇ ಅವಧಿಯಲ್ಲಿ ನಡೆಸಲು ಸಲಹೆಗಳು ಬಂದಿವೆ. ಉಪನ್ಯಾಸಕರ ಒತ್ತಾಯದಂತೆ ಜಿಲ್ಲೆ, ತಾಲ್ಲೂಕು ಕೇಂದ್ರಗಳ ಬದಲು ಆಯಾ ಕಾಲೇಜುಗಳಲ್ಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಡಲು ಇಲಾಖೆ ಒಪ್ಪಿದೆ. ಸಭೆಯಲ್ಲಿ ಡಿ.13ರಿಂದ 24ರವರೆಗೆ ಪರೀಕ್ಷೆ ನಡೆಸಲು ಚರ್ಚೆ ನಡೆಯಿತಾದರೂ, ಈ ಅವಧಿಯಲ್ಲಿ ಕೆಪಿಎಸ್ಸಿ ಪರೀಕ್ಷೆಗಳು ಇರುವುದರಿಂದ ಪರಿಶೀಲಿಸಬೇಕಾಗುತ್ತದೆ. ಗುರುವಾರ ಸಚಿವರೊಂದಿಗೆ ಸಭೆ ನಡೆಸಿ ಪರಿಷ್ಕೃತ ವೇಳಾಪಟ್ಟಿಸಿದ್ಧಪಡಿಸಿ ಪ್ರಕಟಿಸುವುದಾಗಿ ನಿರ್ದೇಶಕರು ಸಭೆಗೆ ತಿಳಿಸಿದರು ಎಂದು ತಿಳಿದು ಬಂದಿದೆ.

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ