ದಿನಗೂಲಿ ಕೆಲಸ, ಬಡತನದ ನಡುವೆಯೂ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದ ರೈತಮಹಿಳೆ!

By Santosh Naik  |  First Published Jul 20, 2023, 11:50 AM IST

ಕಲಿಯುವ ಮನಸ್ಸಿದ್ದರೆ ಎಂಥಾ ಕಷ್ಟಗಳೂ ನಮ್ಮೆದರು ಇರೋದಿಲ್ಲ ಅನ್ನೋದಕ್ಕೆ ಸಾಕ್ಷಿ ಎನ್ನುವಂತಿದೆ ಈ ಯಶಸ್ಸಿನ ಕಥೆ. ಪ್ರತಿದಿನ ತುತ್ತಿನ ಚೀಲ ತುಂಬಿಸಿಕೊಳ್ಳುವುದು ಕಷ್ಟವಾಗಿದ್ದ ಮನೆಯಲ್ಲಿ ತನ್ನ ಗಂಡ ಹಾಗೂ 11 ವರ್ಷ ಮಗಳೊಂದಿಗೆ ಬದುಕು ಸಾಗಿಸುತ್ತಿದ್ದ ರೈತ ಮಹಿಳೆ ಇಂದು ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದು ಮಾದರಿಯಾಗಿದ್ದಾರೆ.
 


ಅನಂತಪುರ (ಜು.20): ಮನುಷ್ಯನಿಗೆ ಹಸಿವು ಎಲ್ಲವನ್ನೂ ಕಲಿಸುತ್ತದೆ. ತುತ್ತು ಅನ್ನ ಹುಡುಕೋ ಮಾರ್ಗ, ಬದುಕು ಕಟ್ಟಿಕೊಳ್ಳುವ ಮಾರ್ಗ ಎಲ್ಲವನ್ನೂ ಇದು ಕಲಿಸುತ್ತದೆ. ಅದರೆ, ತುತ್ತಿನಚೀಲ ತುಂಬಿಸಿಕೊಳ್ಳುವ ಹಾದಿಯಲ್ಲಿ ಹೆಚ್ಚಿನವರು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ತೊರೆದು ಕೆಲಸದ ಮಾರ್ಗ ಹಿಡಿಯುತ್ತಾರೆ. ಆದರೆ, ಏನನ್ನಾದರೂ ಸಾಧಿಸುವ ಹಂಬಲವಿದ್ದಾಗ ಮಾತ್ರವೇ ಈ ಮಹಿಳೆ ಕಂಡಂತ ಯಶಸ್ಸು ಗಳಿಸಲು ಸಾಧ್ಯ. ಪ್ರತಿದಿನ ಜಮೀನಿನಲ್ಲಿ ದಿನಗೂಲಿ ನೌಕರಳಾಗಿ ದುಡಿಯುತ್ತಿದ್ದ ಮಹಿಳೆ ಇಂದು ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆಯುವ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ. ಬಹುಶಃ ಇದು ಸಿನಿಮಾದ ಕಥೆಯ ರೀತಿ ಅನಿಸಿರಬಹುದು.  ಆದರೆ, ಇದು ಅನಂತಪುರ ಜಿಲ್ಲೆಯ ರೈತ ಮಹಿಳೆ ಸಾಕ್‌ ಭಾರತಿ ಅವರ ನಿಜಕಥೆ. 3 ಹೆಣ್ಣುಮಕ್ಕಳ ಕುಟುಂಬದಲ್ಲಿ ಹಿರಿಯವರಾಗುದ್ದ ಭಾರತಿ,  ದ್ವಿತೀಯ ಪಿಯುಸಿ ಮುಕ್ತಾಯವಾದ ಬೆನ್ನಲ್ಲಿಯೇ ತನ್ನ ಸಂಬಂಧಿಯನ್ನು ವಿವಾಹವಾಗಿದ್ದರು. ಆ ಬಳಿಕ ಶಿಕ್ಷಣವನ್ನು ತೊರೆದಿದ್ದ ಭಾರತಿ ಜೀವನೋಪಾಯಕ್ಕಾಗಿ ಗಂಡನ ಜೊತೆಗೆ ಜಮೀನಿನಲ್ಲಿ ದಿನಗೂಲಿ ನೌಕರಳಾಗಿ ದುಡಿಯುತ್ತಿದ್ದರು. 11 ವರ್ಷದ ಹೆಣ್ಣು ಮಗುವಿನ ತಾಯಿಯಾಗಿರುವ ಭಾರತಿ ಈ ಹಾದಿಯಲ್ಲಿ ಎಂದಿಗೂ ಶಿಕ್ಷಣವನ್ನು ತೊರೆದಿರಲಿಲ್ಲ. 

Inspiring story of from : Married off after class 12 to maternal uncle as she was eldest among 3 girls, fulfilled duties as daily wage labourer, wife, mother of 11-year-old but she did not give up, earned Ph.D in chemistry pic.twitter.com/JbSkVTLn4N

— Uma Sudhir (@umasudhir)


ಏನನ್ನಾದರೂ ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ಗಂಡನ ಸಹಾಯದೊಂದಿಗೆ ಓದು ಮುಂದುವರಿಸಿದ ಈಕೆ, ಈಗ ಶ್ರೀಕೃಷ್ಣದೇವರಾಯ ವಿವಿಯಿಂದ ಕೆಮಿಸ್ಟ್ರಿಯಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಶಿಕ್ಷಣದ ಕುರಿತಾದ ಶ್ರದ್ಧೆಯ ಕಥೆ ದಾಖಲಾಗಿರುವುದು ಅನಂತಪುರ ಜಿಲ್ಲೆಯಲ್ಲಿ. ಭಾರತಿ ( Saake Bharathi) ಈ ಜಿಲ್ಲೆಯ ಸಿಂಗನಮಲ ಮಂಡಲದ ನಾಗುಲಗುಡ್ಡಂ ಎಂಬ ದೂರದ ಗ್ರಾಮದಲ್ಲಿ ವಾಸವಿದ್ದಾರೆ. ಆದರೆ, ಇತ್ತೀಚೆಗೆ ಈ ಹಳ್ಳಿಯ ಕೊನೆಯಲ್ಲಿದ್ದ ಚಿಕ್ಕ ಶೆಡ್‌ನಂತಿದ್ದ ಮನೆಯಲ್ಲಿ ಜನಸಮೂಹ ಸೇರಿತ್ತು. ಎಲ್ಲರ ಮುಖದಲ್ಲೂ ಆಶ್ಚರ್ಯ ಹಾಗೂ ಸಂತೋಷ. ಏಕೆಂದರೆ, ಅವರ ಜೊತೆ ಸದಾ ಕೆಲಸಕ್ಕೆ ಬರುತ್ತಿದ್ದ ಭಾರತಿ ಅಂದು 'ಡಾಕ್ಟರ್‌' ಆಗಿದ್ದರು.

ಹಾಗಂತ ಆಕೆಯೇನು ವೈದ್ಯ ಶಿಕ್ಷಣ ಪಡೆದು ಡಾಕ್ಟರ್‌ ಆಗಿರಲಿಲ್ಲ. ಆಕೆ ಕೆಮಿಸ್ಟ್ರಿ ವಿಷಯದಲ್ಲಿ ಡಾಕ್ಟರೇಟ್‌ ಪೂರೈಸಿದ್ದರು. ಯಾವುದೇ ಕೋಚಿಂಗ್‌ ಇಲ್ಲದೆ, ಯಾವುದೇ ಹೆಚ್ಚುವರಿ ಕ್ಲಾಸ್‌ಗಳಿಗೆ ಹೋಗದೇ ಭಾರತಿ ಪಿಎಚ್‌ಡಿ ಪೂರೈಸಿದ್ದರು. ಬಹುತೇಕರ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಕೆಮಿಸ್ಟ್ರಿ ವಿಷಯದಲ್ಲಿ ಈಕೆ ಪಿಎಚ್‌ಡಿ ಪದವಿ ಪಡೆದಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಆಕೆಯಲ್ಲೂ ತನ್ನ ಸಾಧನೆಯ ಬಗ್ಗೆ ಸಂಭ್ರಮವಿದ್ದರೂ, ಅದಕ್ಕಿಂತ ಹೆಚ್ಚಾಗಿ ಆಕೆಯ ಮುಖದಲ್ಲಿ ಕಂಡಿದ್ದು ಇಲ್ಲಿಯವರೆಗೆ ಆಕೆ ಪಟ್ಟಿದ್ದ ಕಷ್ಟ.

ಇತ್ತೀಚೆಗೆ ಅನಂತಪುರ ನಗರದ  ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲೂ ಭಾಗಿಯಾಗಿದ್ದರು. ಪಿಎಚ್‌ಡಿ ಪದವಿ ಪಡೆದ ಭಾರತಿ ತನ್ನ 11 ವರ್ಷದ ಮಗಳು ಗಾಯತ್ರಿ ಹಾಗೂ ಪತಿಯೊಂದಿಗೆ ವೇದಿಕೆಗೆ ಆಗಮಿಸಿದ್ದರು. ಸಾದಾ ಸೀರೆ ಹಾಗೂ ಪ್ಯಾರಗಾನ್‌ ಚಪ್ಪಲಿ ಧರಿಸಿ ವೇದಿಕೆ ಏರಿದ್ದ ಆಕೆಯನ್ನು ನೋಡಿ ವೇದಿಕೆಯಲ್ಲಿದ್ದರು ಹಾಗೂ ವೇದಿಕೆಯ ಮುಂದಿದ್ದವರು ಅಚ್ಚರಿಗೊಂಡಿದ್ದರು. ಆಕೆ ಪಿಎಚ್‌ಡಿ ಪದವಿ ಸ್ವೀಕರಿಸುವಾಗ, ಜೀವದ ಗುರಿ ಸಾಧಿಸಲು ಯಾವ ಬಡತನಗಳು ಕೂಡ ಅಡ್ಡಿಯಾಗೋದಿಲ್ಲ ಎಂದು ಅನಿಸಿದ್ದಂತೂ ನಿಜ. ಆದರೆ, ಆಕೆಯ ಮುಖದಲ್ಲಿ ಮಾತ್ರ ತನ್ನ ಸಾಧನೆಯ ಕುರಿತಾಗಿ ಯಾವುದೇ ಹೆಮ್ಮೆ ಇದ್ದಿರಲಿಲ್ಲ.

ಬಾಲ್ಯದಿಂದಲೂ ಕಲಿಯುವ ಉತ್ಸಾಹದಲ್ಲಿದ್ದ ಭಾರತಿ ತನ್ನ 10ನೇ ತರಗತಿ ವಿದ್ಯಾಭ್ಯಾಸವನ್ನು ಶಿಂಗನಮಲ ಸರಕಾರಿ ಶಾಲೆ ಮತ್ತು ಇಂಟರ್ ಪಾಮಿಡಿ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದ್ದರು. ತಂದೆ-ತಾಯಿಗೆ ಮೂವರು ಹೆಣ್ಣುಮಕ್ಕಳಲ್ಲಿ ಹಿರಿಯಾಕೆ ಭಾರತಿ.  ಈ ಎಲ್ಲಾ ಜವಾಬ್ದಾರಿಗಳ ಹೊರೆ ಮತ್ತು ಕುಟುಂಬದ ಆರ್ಥಿಕ ಸ್ಥಿತಿಯಿಂದಾಗಿ ಅವಳು ತನ್ನ ಸಂಬಂಧಿ ಶಿವಪ್ರಸಾದ್‌ರನ್ನು ದ್ವಿತೀಯ ಪಿಯುಸಿ ಆದ ಬಳಿಕ ವಿವಾಹವಾಗಿದ್ದರು. ಭವಿಷ್ಯದ ಬಗ್ಗೆ ಎಷ್ಟೇ ಕನಸುಗಳನ್ನು ಕಂಡರೂ ಗಂಡನಿಗೆ ಅದನ್ನು ತಿಳಿಸಿರಲಿಲ್ಲ. ಆದರೆ, ಪತ್ನಿಯ ಆಸೆ ಗಂಡನಿಗೆ ತಿಳಿದಿತ್ತು. ವಿದ್ಯಾಭ್ಯಾಸ ಮುಂದುವರಿಸಲು ಶಿವಪ್ರಸಾದ್‌ ಪ್ರೋತ್ಸಾಹ ನೀಡಿದ್ದರು. ತನ್ನ ಹೆಚ್ಚಿನ ಕಲಿಕೆಗೆ ಇದು ಅವಕಾಶ ಎಂದುಕೊಂಡ ಭಾರತಿ ಅದರಂತೆ ಓದಲು ಆರಂಭಿಸಿದ್ದರು.

Tap to resize

Latest Videos

undefined

ಅರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರ ಗುರು, ಈಗ ಬುಡಕಟ್ಟು ಜನರಿಗೆ ದೇವರು!

ವಿದ್ಯಾಭ್ಯಾಸ ಮುಂದುವರಿಸುವಂತೆ ಗಂಡ ಪ್ರೋತ್ಸಾಹ ನೀಡಿದರೆ, ಭಾರತಿ ಕೂಡ ತಮ್ಮ ಜೀವನವನ್ನು ಸುಧಾರಿಸಲು ಇದೊಂದು ಅವಕಾಶ ಎಂದು ಭಾವಿಸಿದ್ದರು. ಗಂಡನ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಇದರಿಂದಾಗಿ ಭಾರತಿ ತನ್ನ ಪದವಿ ಮತ್ತು ಪಿಜಿಯನ್ನು ಅನಂತಪುರ ಎಸ್‌ಎಸ್‌ಬಿಎನ್‌ನಲ್ಲಿ ಮುಗಿಸಿದರು. ಕೆಲವು ದಿನ ಕಾಲೇಜಿಗೆ ಹೋಗುತ್ತಿದ್ದ ಆಕೆ, ಕಾಲೇಜು ಇಲ್ಲದ ದಿನದಲ್ಲಿ ದಿನಗೂಲಿ ನೌಕರಳಾಗಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮಗಳಿನ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಲೇ ಅಧ್ಯಯನ ಮತ್ತು ಕೆಲಸವನ್ನು ಮಾಡುತ್ತಿದ್ದರು. ಮಗಳ ಓದು-ಬರಹ ಮುಗಿದ ಬಳಿಕ ಪ್ರತಿದಿನ ರಾತ್ರಿ ಬೆಳಗಾಗುವವರೆಗೂ ಭಾರತಿ ಓದುತ್ತಿದ್ದರು.

380 ಸಾವಿರ ಕೋಟಿ ಮೊತ್ತವನ್ನು ದಾನ ಮಾಡಿದ ವಾರನ್‌ ಬಫೆಟ್‌!

ಇನ್ನು ಕಾಲೇಜಿಗೆ ಹೋಗಬೇಕೆಂದರೆ, ಆಕೆ ತನ್ನ ಗ್ರಾಮದಿಂದ ಕನಿಷ್ಠ 28 ಕಿಲೋಮೀಟರ್‌ ದೂರ ಪ್ರಯಾಣ ಮಾಡಬೇಕಿತ್ತು. ಖಾಸಗಿ ಬಸ್‌ನಲ್ಲಿ ಹೋಗುವುದು ಸಾಧ್ಯವಿರಲಿಲ್ಲ. ಆದರೆ, 8 ಕಿಲೋಮೀಟರ್‌ ದೂರದ ಗಾರ್ಲದಿನ್ನೆಗೆ ನಡೆದುಕೊಡು ಹೋಗುತ್ತಿದ್ದ ಆಕೆ ಅಲ್ಲಿಂದ ಸರ್ಕಾರಿ ಬಸ್‌ ಹಿಡಿದು ಕಾಲೇಜಿಗೆ ಹೋಗುತ್ತಿದ್ದಳು. ಇಷ್ಟೆಲ್ಲ ಕಷ್ಟದ ನಡುವೆ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಉತ್ತಮ ಅಂಕದೊಂದಿಗೆ ಭಾರತಿ  ಪೂರೈಸಿದ್ದರು. ಬಳಿಕ ಆಕೆಯ ಪತಿ ಹಾಗೂ ಪ್ರೊಫೆಸರ್‌ಗಳು ಪಿಎಚ್‌ಡಿಗೆ ಪ್ರಯತ್ನ ಮಾಡುವಂತೆ ಒತ್ತಾಯ ಮಾಡಿದ್ದರು. ಪ್ರೊಫೆಸರ್ ಡಾ.ಎಂ.ಸಿ.ಎಸ್.ಶುಭಾ ಅವರ ಬಳಿ ‘ಬೈನರಿ ಮಿಕ್ಸ್ಚರ್ಸ್’ ವಿಷಯದ ಬಗ್ಗೆ ಸಂಶೋಧನೆ ಮಾಡುವ ಅವಕಾಶ ಸಿಕ್ಕಿತು. ಇದಕ್ಕಾಗಿ ಪಡೆದ ಸ್ಟೈಫಂಡ್ ಸ್ವಲ್ಪ ಮಟ್ಟಿಗೆ ಭಾರತಿಗೆ ಸಹಾಯ ಮಾಡಿತು. ಆದರೂ ದಿನಗೂಲಿ ನಿಲ್ಲಿಸಲಿಲ್ಲ. "ಡಾಕ್ಟರೇಟ್ ಮಾಡಿದರೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕೆಲಸ ಸಿಗುತ್ತದೆ. ಅದರಿಂದ ನಮ್ಮ ಬದುಕು ಹಸನಾಗುತ್ತದೆ. ನಾನು ಕಲಿತ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ನಾನು ಸಾಧಿಸಿದರೆ ಅದು ಅನೇಕರಿಗೆ ಸ್ಫೂರ್ತಿ ನೀಡುತ್ತದೆ. ಇವೆಲ್ಲವೂ ನನ್ನನ್ನು ಪ್ರೇರೇಪಿಸಿವೆ..' ಎನ್ನುತ್ತಾರೆ ಭಾರತಿ.

click me!