ಮುಂದಿನ ಎರಡು ವರ್ಷದಲ್ಲಿ ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಅತ್ಯುತ್ತಮ ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು 36 ಸಾವಿರಕ್ಕೆ ಹೆಚ್ಚಿಸುವ ಗುರಿಯನ್ನು ಪಾಲಿಕೆ ಹಾಕಿಕೊಂಡಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಅ.09): ಮುಂದಿನ ಎರಡು ವರ್ಷದಲ್ಲಿ ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಅತ್ಯುತ್ತಮ ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು 36 ಸಾವಿರಕ್ಕೆ ಹೆಚ್ಚಿಸುವ ಗುರಿಯನ್ನು ಪಾಲಿಕೆ ಹಾಕಿಕೊಂಡಿದೆ. ಕೊರೋನಾ ಪೂರ್ವದಲ್ಲಿ ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಎಲ್ಲ ಶಾಲಾ ಕಾಲೇಜುಗಳನ್ನು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಅಧೀನಕ್ಕೆ ನೀಡಬೇಕೆಂಬ ಚರ್ಚೆ ನಡೆಯುತ್ತಿದ್ದವು.
ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಬಿಬಿಎಂಪಿ ಶಾಲಾಕಾಲೇಜುಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 26 ಸಾವಿರ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಹೀಗಾಗಿ. ಪಾಲಿಕೆಯ ಶಾಲಾ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ಮತ್ತು ಸೌಲಭ್ಯ ನೀಡುವ ಮೂಲಕ ಸಬಲೀಕರಣಕ್ಕೆ ಸರ್ಕಾರ ಮತ್ತು ಪಾಲಿಕೆ ಮುಂದಾಗಿದ್ದು, 2024-25ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು 36 ಸಾವಿರಕ್ಕೆ ಏರಿಕೆ ಮಾಡುವ ಗುರಿಯನ್ನು ಹೊಂದಿದೆ.
Bengaluru: ಅ.10ರಿಂದ ರಾಜಕಾಲುವೆ ಒತ್ತುವರಿ ತೆರವು ಕಾರ‍್ಯಕ್ಕೆ ಚುರುಕು: ಪಾಲಿಕೆ
ಕೊರೋನಾ ಬಳಿಕ 10 ಸಾವಿರ ಏರಿಕೆ: ಕೊರೋನಾ ಪೂರ್ವದಲ್ಲಿ ಬಿಬಿಎಂಪಿಯ ನರ್ಸರಿಯಿಂದ ಸ್ನಾತಕೋತ್ತರ ಪದವಿ ತರಗತಿಗೆ 15ರಿಂದ 16 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಈಗ ಈ ಸಂಖ್ಯೆ 26 ಸಾವಿರಕ್ಕೆ ಏರಿಕೆಯಾಗಿದೆ. ಪ್ರೌಢ ಶಾಲೆ ಮತ್ತು ಪಿಯುಸಿಗೆ ಹೆಚ್ಚಿನ ದಾಖಲಾತಿಯಾಗುತ್ತಿದೆ. ಕನಿಷ್ಠ 10 ರಷ್ಟುದಾಖಲಾತಿ ಪ್ರಮಾಣ ಎಲ್ಲ ಹಂತದಲ್ಲಿ ಹೆಚ್ಚಾಗಿದೆ.
ದಾಖಲಾತಿ ಹೆಚ್ಚಳಕ್ಕೆ ಕ್ರಮಗಳು: ಪ್ರೌಢ ಶಾಲೆ ಮುಗಿದ ಬಳಿಕ ಪಿಯುಸಿಗೆ ಬೇರೆ ಕಾಲೇಜುಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ಬಿಬಿಎಂಪಿ ಶಾಲೆಗಳಿಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದರಿಂದ ಪಾಲಿಕೆಯ ಪ್ರೌಢ ಶಾಲೆಗಳ ಆವರಣದಲ್ಲಿಯೇ ಪಿಯುಸಿ ತರಗತಿ ಆರಂಭಿಸಲಾಗುತ್ತಿದೆ. 2022-23ನೇ ಸಾಲಿನಲ್ಲಿ ಉತ್ತರಹಳ್ಳಿ ಹಾಗೂ ಥಣಿಸಂದ್ರದಲ್ಲಿ ಪಿಯು ತರಗತಿ ಆರಂಭಿಸಲಾಗಿದ್ದು, 250ಕ್ಕೂ ಅಧಿಕ ವಿದ್ಯಾರ್ಥಿಗಳು ಮೊದಲ ವರ್ಷವೇ ದಾಖಲಾಗಿದ್ದಾರೆ. ಮುಂದಿನ ವರ್ಷ ಕೆ.ಜಿ.ನಗರ ಹಾಗೂ ಯಲಹಂಕ ವಲಯದಲ್ಲಿ ತಲಾ ಒಂದು ಪಿಯುಸಿ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ.
ಪಾಲಿಕೆ ಶಾಲಾ-ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಅಮೃತ ನಗರೋತ್ಥಾನ ಯೋಜನೆಯಡಿ .160 ಕೋಟಿ ನೀಡಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಮತ್ತು ಉಪನ್ಯಾಸಕರಿಗೆ ತರಬೇತಿ ಹಾಗೂ ಕಾರ್ಯಾಗಾರ ಹಾಗೂ ‘ವಿದ್ಯಾರ್ಥಿ ಬೆಳಕು’ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸಂಜೆ ಟ್ಯೂಷನ್ ಸಹ ಆರಂಭಿಸಲಾಗಿದೆ.
ಹೆಚ್ಚಿನ ಸೌಲಭ್ಯ ಏರಿಕೆಗೆ ಕಾರಣ: ಕೊರೋನಾದಿಂದ ಪೋಷಕರ ಆದಾಯ ಕಡಿಮೆಯಾದ ಪರಿಣಾಮ ಮಕ್ಕಳನ್ನು ಖಾಸಗಿ ಶಾಲಾ ಕಾಲೇಜುಗಳ ಬದಲು ಪಾಲಿಕೆ ಶಾಲಾ-ಕಾಲೇಜುಗಳಿಗೆ ದಾಖಲಿಸುತ್ತಿರುವುದು. ಕಳೆದ ಎರಡ್ಮೂರು ವರ್ಷದಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವೀತಿಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಬರುತ್ತಿರುವುದು. ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ಶ್ಯೂ, ಬ್ಯಾಗ್, ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯ ನೀಡುತ್ತಿರುವುದು. ಎಸ್‌ಎಸ್‌ಎಲ್‌ಸಿ ಮತ್ತು ದ್ವೀತಿಯ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚಿನ ಅಂಕ ತೆಗೆದ ವಿದ್ಯಾರ್ಥಿಗಳಿಗೆ 25 ಸಾವಿರ ರಿಂದ 35 ಸಾವಿರ ರು, ವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ದ್ವಿತೀಯ ಪಿಯುಸಿಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೊದಲ ಮೂವರು ವಿದ್ಯಾರ್ಥಿಗಳಿಗೆ 50 ಸಾವಿರ, 35 ಸಾವಿರ ಹಾಗೂ 25 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ. 2021-22 ಸಾಲಿನಲ್ಲಿ ಒಟ್ಟು 85 ಲಕ್ಷ ರು.ಗಳನ್ನು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ವೆಚ್ಚ ಮಾಡಲಾಗಿದೆ. ಈ ಕಾರಣಕ್ಕೆ ಬಿಬಿಎಂಪಿ ಶಾಲಾ-ಕಾಲೇಜುಗಳ ಪ್ರವೇಶಾತಿ ಹೆಚ್ಚಳವಾಗಿದೆ.
ಬಿಬಿಎಂಪಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ವಿವರ
ವಿಭಾಗ ಸಂಖ್ಯೆ ವಿದ್ಯಾರ್ಥಿಗಳ ಸಂಖ್ಯೆ
ನರ್ಸರಿ 93 5,100
ಪ್ರಾಥಮಿಕ ಶಾಲೆ 16 4,100
ಪ್ರೌಢ ಶಾಲೆ 33 8,100
ಪಿಯುಸಿ 18 6,700
ಪದವಿ/ ಸ್ನಾತಕೋತ್ತರ ಪದವಿ 4/2 1,500
ಡಿಸೆಂಬರೊಳಗೆ ರಾಜ್ಯಾದ್ಯಂತ ‘ನಮ್ಮ ಕ್ಲಿನಿಕ್’: ಸಚಿವ ಸುಧಾಕರ್
ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಬಿಬಿಎಂಪಿ ಶಾಲಾ ಕಾಲೇಜಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇನ್ನಷ್ಟುಉತ್ತಮ ಸೌಲಭ್ಯ ನೀಡುವ ಮೂಲಕ ಮುಂದಿನ ಎರಡು ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 36 ಸಾವಿರಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
- ಉಮೇಶ್, ಉಪ ಆಯುಕ್ತ, ಬಿಬಿಎಂಪಿ ಶಿಕ್ಷಣ ವಿಭಾಗ