ಧಾರವಾಡ ಐಐಟಿ ವಿದ್ಯಾರ್ಥಿಗಳ ಆವಿಷ್ಕಾರ: ಸುಳ್‌ ಸುದ್ದಿ ಪತ್ತೆ ಹಚ್ಚಲು ಫೇಕ್‌ವಿಡ್‌ ಆ್ಯಪ್‌..!

By Kannadaprabha NewsFirst Published Oct 13, 2020, 11:00 AM IST
Highlights

ಫೇಕ್‌ವಿಡ್‌ ಹೆಸರಿನಿಂದ ಸುಳ್ಳು ಸುದ್ದಿ ಪತ್ತೆ ಹಚ್ಚಬಹುದು| ಧಾರವಾಡದ ಐಐಟಿ ವಿದ್ಯಾರ್ಥಿಗಳಿಂದ ಹೊಸ ಆ್ಯಪ್‌ ಆವಿಷ್ಕಾರ, ಇನ್ನೂ ಪರೀಕ್ಷಾ ಹಂತ| ಧಾರವಾಡ ಐಐಟಿಗೆ ಟ್ವೀಟ್‌ನಲ್ಲಿ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ ರಮೇಶ ಪೋಕ್ರಿಯಾಲ್‌| 

ಧಾರವಾಡ(ಅ.13): ಪ್ರಸ್ತುತ ಪತ್ರಿಕೆ, ಟಿವಿಗಳಿಗಿಂತ ಮುಂಚಿತವಾಗಿ ಸಾಮಾಜಿಕ ಜಾಲತಾಣಗಳ ಮೂಲಕವೇ ಅದೆಷ್ಟೋ ಸುದ್ದಿಗಳು ಬಿತ್ತರವಾಗುತ್ತಿವೆ. ಕ್ಷಣ- ಕ್ಷಣದಲ್ಲಿ ಬ್ರೇಕಿಂಗ್‌ ಸುದ್ದಿಗಳು ಕಾಣಿಸಿಕೊಳ್ಳುತ್ತವೆ. ಆದರೆ, ಈ ರೀತಿಯ ಸುದ್ದಿಗಳ ಸತ್ಯಾಸತ್ಯತೆ ಮಾತ್ರ ಪ್ರಶ್ನಾರ್ಹ.

ಈ ಹಿನ್ನೆಲೆ ಧಾರವಾಡದ ಐಐಟಿ ವಿದ್ಯಾರ್ಥಿಗಳು ಸುಳ್ಳು ಸುದ್ದಿ ಹಾಗೂ ವಿಡಿಯೋ ಪತ್ತೆ ಮಾಡುವ ಮೊಬೈಲ್‌ ಆ್ಯಪ್‌ವೊಂದನ್ನು ಆವಿಷ್ಕರಿಸಿದ್ದಾರೆ. ಐಐಟಿ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಅಮನ್‌ ಸಿಂಘಲ್‌ ಹಾಗೂ ಅವರ ತಂಡವು ‘ಫೇಕ್‌ವಿಡ್‌’ ಹೆಸರಿನ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದ್ದು, ಇನ್ನೂ ಪರೀಕ್ಷಾ ಹಂತದಲ್ಲಿದೆ. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ ಪೋಕ್ರಿಯಾಲ್‌ ಟ್ವೀಟ್‌ ಮೂಲಕ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆ ಮೂಲಕವಾದರೂ ಸುಳ್ಳು ಸುದ್ದಿ ಹರಡುವುದನ್ನು ತಡೆಯಬಹುದು ಎಂದು ಟ್ವೀಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಹೇಗೆ ಪತ್ತೆ?:

ಯಾವುದೇ ಸುದ್ದಿಯ ಮೂಲ ದೃಶ್ಯ ಮತ್ತು ಧ್ವನಿಯನ್ನು ಒಂದು ವೇಳೆ ಬದಲಾಯಿಸಿದ್ದರೆ, ತಿರುಚಿದ್ದರೆ ಆ ಸುದ್ದಿಯನ್ನು ‘ಫೇಕ್‌ವಿಡ್‌’ ಅಪ್ಲಿಕೇಶನ್‌ ಮೂಲಕ ಪರೀಕ್ಷಿಸಿದರೆ ಇದು ನಿಜವೇ ಅಥವಾ ಸುಳ್ಳಾ ಎಂಬುದನ್ನು ಪತ್ತೆ ಮಾಡಬಹುದು. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗುವ ಸುದ್ದಿಗಳು ನಿಜವೇ ಅಥವಾ ಸುಳ್ಳಾ ಎಂಬುದು ಕೂಡ ಪತ್ತೆ ಆಗಲಿದೆ. ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಹತ್ತಾರು ಸುಳ್ಳು ಸುದ್ದಿಗಳು ವಿಡಿಯೋ ಸಮೇತ ಹರಿದಾಡುತ್ತಿವೆ. ಆದರೆ ಇವುಗಳನ್ನು ನಂಬುವ ಮೊದಲು ಅದರ ಅಸಲಿತನವನ್ನು ತಿಳಿಯುವ ಸಲುವಾಗಿ ಈ ಪ್ರಯತ್ನ ಮಾಡಲಾಗಿದೆ. ಸದ್ಯ ಪರೀಕ್ಷಾ ಹಂತದಲ್ಲಿದ್ದು ಎರಡು ತಿಂಗಳಲ್ಲಿ ಸಂಪೂರ್ಣಗೊಳ್ಳಲಿದೆ ಎನ್ನುತ್ತಾರೆ ಐಐಟಿ ವಿದ್ಯಾರ್ಥಿ ಅಮನ್‌ ಸಿಂಘಲ್‌.

ಸುಳ್ಳು ಸುದ್ದಿಗಳಿಂದ ಜನರ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ: ವಸುಧಾ ಗುಪ್ತ

ಸಾಮಾನ್ಯವಾಗಿ ಅಕ್ಷರ ರೂಪದಲ್ಲಿ ಸುದ್ದಿಗಳಿರುತ್ತವೆ. ಇಲ್ಲಿನ ಸುಳ್ಳು ಮಾಹಿತಿಯನ್ನು ಪತ್ತೆ ಹೆಚ್ಚುವುದು ಕಷ್ಟ ಸಾಧ್ಯ. ಆದರೂ ಕೆಲವೇ ಪ್ಯಾರಾಗಳನ್ನು ಓದಿ, ಅದರಲ್ಲಿರುವ ನಕಲಿ ಅಂಶಗಳು ಯಾವುವು ಎಂದು ಪತ್ತೆ ಮಾಡಿ ಓದುಗರಿಗೆ ತಿಳಿಸುವಂತಹ ತಂತ್ರಾಂಶವನ್ನು ಈ ಆ್ಯಪ್‌ನಲ್ಲಿ ಸೇರಿಸಲಾಗುತ್ತಿದೆ ಎನ್ನುತ್ತಾರೆ ಅಮನ್‌.

ಈ ಆ್ಯಪ್‌ ಆವಿಷ್ಕಾರ ಇನ್ನೂ ನಡೆಯುತ್ತಿರುವ ಕಾರಣ ಐಐಟಿಯಿಂದ ಅಧಿಕೃತವಾಗಿ ಯಾವ ಮಾಹಿತಿ ನೀಡಿಲ್ಲ. ‘ಫೇಕ್‌ವಿಡ್‌’ ಆ್ಯಪ್‌ ಬಗ್ಗೆ ಸಂಪೂರ್ಣ ಮಾಹಿತಿ ಹೊರಬರುವ ವರೆಗೂ ಕಾಯಬೇಕಿದ್ದು, ನಂತರದಲ್ಲಿ ಸುಳ್‌ ಸುದ್ದಿ, ವಿಡಿಯೋ ಹಬ್ಬಿಸುವವರಿಗೆ ಸಿಕ್ಕಿಹಾಕಿಕೊಳ್ಳುವ ಭಯ ಮಾತ್ರ ಕಟ್ಟಿಟ್ಟಬುತ್ತಿ.
 

click me!