ಬರದ ನಾಡು ಯಾದಗಿರಿಯಲ್ಲಿ ಭರ್ಜರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ

By Sathish Kumar KH  |  First Published Jul 20, 2023, 10:22 PM IST

ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭರ್ಜರಿ ಮಳೆಯಾಗುತ್ತಿರುವ ಕಾರಣ ಜು.21ರ ಶುಕ್ರವಾರ ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.


ಯಾದಗಿರಿ (ಜು.20): ರಾಜ್ಯದಲ್ಲಿ ಬರದನಾಡು ಎಂದು ಕರೆಯಲಾಗುವ ಯಾದಗಿರಿ ಹಾಗೂ ರಾಯಚೂರು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಜು.21ರ ಶುಕ್ರವಾರ ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಜಿಲ್ಲೆಗಳೆಂದರೆ ಅದು ರಾಯಚೂರು ಮತ್ತು ಯಾದಗಿರಿ ಎಂದು ಹೇಳುತ್ತಾರೆ. ಜೊತೆಗೆ, ಎಲ್ಲ ಕಲ್ಯಾಣ ಕರ್ನಾಟಕದ ಜಿಲ್ಲೆಗಳೂ ಕೂಡ ಮಳೆ ಕಡಿಮೆ ಬೀಳುವ ಪ್ರದೇಶಗಳಾಗಿವೆ. ಆದರೆ, ಯಾದಗಿರಿ ಜಿಲ್ಲೆ ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳ್ಳ, ಕೊಳ್ಳ, ನದಿಗಳು ಹಾಗೂ ಕೆರೆ ಕಾಲುವೆಗಳು ತುಂಬಿ ಹರಿಯುತ್ತಿದ್ದು, ಮಕ್ಕಳು ಶಾಲೆಗೆ ಹೋಗುವುದಕ್ಕೂ ಸಮಸ್ಯೆ ಆಗುತ್ತಿದೆ. ಆದ್ದರಿಂದ ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಒಂದು ದಿನದ ರಜೆಯನ್ನು ಘೊಷಣೆ ಮಾಡಲಾಗಿದೆ. 

Tap to resize

Latest Videos

undefined

ಮುಂದುವರೆದ ಮಳೆ ಆರ್ಭಟ: ಬೆಳಗಾವಿಯಲ್ಲಿ ಸೇತುವೆ, ಮಂದಿರ ಜಲಾವೃತ

ರಜೆ ಸರಿದೂಗಿಸಲು ಭಾನುವಾರ ಶಾಲೆ ನಡೆಸಿ:  ಇನ್ನು ಆಯಾ ತಹಸೀಲ್ದಾರರು ತಮ್ಮ ತಾಲೂಕುಗಳಲ್ಲಿ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಬೇಕು. ಯಾದಗಿರಿ, ಸುರಪುರ, ಹುಣಸಗಿ, ಶಹಾಪುರ, ವಡಗೇರಾ ಹಾಗೂ ಗುರಮಠಕಲ್ ತಾಲೂಕಿನಾದ್ಯಂತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕಳೆದ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ನಾಳೆ ಕೂಡ ಹೆಚ್ಚಿನ ಪ್ರಮಾಣದ ಮಳೆ ಬರುವ ಮುನ್ಸೂಚನೆಯಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಿ ಪ್ರಾಥಮಿಕ, ಪ್ರೌಢ, ಅನುದಾನಿತ, ಅನುದಾನ ರಹಿತ ಎಲ್ಲಾ ಶಾಲೆಗಳ ರಜೆ ಘೋಷಣೆ ಮಾಡಲಾಗಿದೆ. ರಜಾ ದಿನ ಅವಧಿ ಸರಿದೂಗಿಸಲು ಭಾನುವಾರ ಶಾಲೆಗಳನ್ನು ಯಥಾ ಪ್ರಕಾರ ನಡೆಸಲು ಸೂಚನೆ ನೀಡಲಾಗಿದೆ. ಈ ಕುರಿತು ಯಾದಗಿರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಾಧಾರಣ ಮಳೆಯಿಂದ ಭೀಮಾ ನದಿಗೆ ಹರಿವು ಹೆಚ್ಚಳ:  ಕಲಬುರಗಿ: ಪ್ರಸಕ್ತ ವರ್ಷದ ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆಯುವ ಸಮಯದಲ್ಲಿ ಕಳೆದ ಎರಡು ದಿನಗಳಿಂದ ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆ ತಾಲೂಕಿನ ಜೀವನದಿಯಾಗಿರುವ ಭೀಮಾ ನದಿಯಲ್ಲಿ 150 ಕ್ಯುಸೆಕ್‌ನಷ್ಟುಅಲ್ಪ ಪ್ರಮಾಣದ ಒಳ ಹರಿವು ಕಂಡು ಬಂದಿದೆ. ಸೊನ್ನ ಗ್ರಾಮದಲ್ಲಿರುವ ಭೀಮಾ ಏತ ನೀರಾವರಿ ಬ್ಯಾರೇಜ್‌ನಲ್ಲಿ ಒಟ್ಟು ಸಂಗ್ರಹ ಸಾಮರ್ಥ್ಯ 3.166 ಟಿಎಂಸಿ ಇದ್ದು ಬ್ಯಾರೇಜ್‌ನಲ್ಲಿಗ ಗ್ರಾಸ್‌ ಸ್ಟೋರೇಜ್‌ 0.818 ಟಿಎಂಸಿ ಹಾಗೂ ಲೈವ್‌ ಸ್ಟೋರೇಜ್‌ 0.138 ಟಿಎಂಸಿ ಇದೆ. ಕಳೆದ 24 ಗಂಟೆಗಳಲ್ಲಿ ನದಿಗೆ 150 ಕ್ಯುಸೆಕ್‌ನಷ್ಟು ಸಾಧಾರಣ ಒಳ ಹರಿವು ಬಂದಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಒಳ ಹರಿವು ಹೆಚ್ಚಾಗಿ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗಬಹುದಾಗಿದೆ.

ಗೋಕಾಕ ಜಲಪಾತ ವೀಕ್ಷಣೆಗೆ ನಿರ್ಬಂಧ: ಗೋಕಾಕ(ಜು.20): ಕಳೆದ ಹಲವು ದಿನಗಳಿಂದ ಗೋಕಾಕ ಜಲಪಾತದಲ್ಲಿ ಪ್ರವಾಸಿಗರು ಜಲಪಾತದ ತುತ್ತ ತುದಿಗೆ ತೆರಳಿ ಸೇಲ್ಪಿ ತೆಗೆದುಕೊಳ್ಳುತ್ತಿರುವ ಹಿನ್ನೆಲೆ ಸ್ಥಳೀಯ ಪೊಲೀಸ್‌ ಇಲಾಖೆ ಸೂಕ್ತ ಕ್ರಮವಹಿಸಿ ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ಬ್ಯಾರಿಕೇಡ್‌ ಅಳವಡಿಸಿ ಪ್ರವಾಸಿಗರು ಜಲಪಾತದತ್ತ ತೆರಳದಂತೆ ನಿರ್ಬಂಧ ವಿಧಿಸಿದ್ದಾರೆ. ಪಶ್ಚಿಮ ಘಟ್ಟಅರಣ್ಯ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕಳೆದೆರಡು ದಿನಗಳಿಂದ ಗೋಕಾಕ ಜಲಪಾತ ಹಾಗೂ ಗೊಡಚಿನಮಲ್ಕಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು ಪ್ರವಾಸಿಗರು ಮುಂಜಾಗೃತೆ ವಹಿಸಿ ಪೊಲೀಸ್‌ ಇಲಾಖೆ ನಿಗದಿ ಪಡಿಸಿದ ಸ್ಥಳದಿಂದ ಜಲಪಾತ ವೀಕ್ಷಿಸಬೇಕು. ಪೊಲೀಸ್‌ ಇಲಾಖೆ ನಿಗದಿ ಪಡಿಸಿದ ಸ್ಥಳದಿಂದ ಮುಂದೆ ಹೊದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಡಿ.ಎಸ್‌.ಮುಲ್ಲಾ ತಿಳಿಸಿದ್ದಾರೆ. 

click me!