ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: 1, 2ನೇ ಕ್ಲಾಸ್‌ ಮಕ್ಕಳ ಬ್ಯಾಗ್‌ ತೂಕ 2 ಕೆಜಿ, ಸರ್ಕಾರದ ಸುತ್ತೋಲೆ

By Kannadaprabha News  |  First Published Jun 22, 2023, 8:03 AM IST

ಶಾಲಾ ಶಿಕ್ಷಣ ಇಲಾಖೆ ಪ್ರತಿ ವರ್ಷದಂತೆ ಈ ವರ್ಷವೂ 1ರಿಂದ 10ನೇ ತರಗತಿವರೆಗೆ ತರಗತಿವಾರು ಮಕ್ಕಳು ತರುವ ಬ್ಯಾಗ್‌ ತೂಕ ಇಂತಿಷ್ಟೇ ಇರಬೇಕೆಂದು ಮಿತಿ ನಿಗದಿಪಡಿಸಿ ಸುತ್ತೋಲೆ ಹೊರಡಿಸಿದೆ.


ಬೆಂಗಳೂರು (ಜೂ.22): ಶಾಲಾ ಶಿಕ್ಷಣ ಇಲಾಖೆ ಪ್ರತಿ ವರ್ಷದಂತೆ ಈ ವರ್ಷವೂ 1ರಿಂದ 10ನೇ ತರಗತಿವರೆಗೆ ತರಗತಿವಾರು ಮಕ್ಕಳು ತರುವ ಬ್ಯಾಗ್‌ ತೂಕ ಇಂತಿಷ್ಟೇ ಇರಬೇಕೆಂದು ಮಿತಿ ನಿಗದಿಪಡಿಸಿ ಸುತ್ತೋಲೆ ಹೊರಡಿಸಿದೆ. ಜೊತೆಗೆ 1 ಮತ್ತು 2ನೇ ತರಗತಿ ಮಕ್ಕಳಿಗೆ ಮನೆಗೆಲಸ (ಹೋಮ್‌ವರ್ಕ್) ನೀಡಬಾರದು, ಅತಿಯಾದ ತೂಕದ ಬ್ಯಾಗ್‌ನಿಂದ ಆಗುವ ಪರಿಣಾಮದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡುವುದು ಸೇರಿದಂತೆ 12 ಸೂಚನೆಗಳನ್ನು ನೀಡಲಾಗಿದೆ.

ಇಲಾಖೆಯ ಎಲ್ಲ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಲ್ಲಿ ಮಕ್ಕಳ ಬ್ಯಾಗ್‌ ಭಾರ ಇಳಿಸಲು ನೀಡಿರುವ ಎಲ್ಲ ನಿಯಮಗಳನ್ನೂ ಕಟ್ಟುನಿಟ್ಟಾಗಿ ಜಾರಿಯಾಗುವಂತೆ ಕ್ರಮ ವಹಿಸಲು ಸೂಚಿಸಿದೆ. ಸುತ್ತೋಲೆ ಪ್ರಕಾರ, 1 ಮತ್ತು 2ನೇ ತರಗತಿ ಮಕ್ಕಳ ಶಾಲಾ ಬ್ಯಾಗುಗಳು ಒಂದೂವರೆ ಕೆ.ಜಿಯಿಂದ ಎರಡು ಕೆಜಿ ಇರಬೇಕು. 3ರಿಂದ 5ನೇ ತರಗತಿ ಮಕ್ಕಳ ಬ್ಯಾಗುಗಳು 2ರಿಂದ 3 ಕೆ.ಜಿ ತೂಕ ಹೊಂದಿರಬೇಕು. 6ರಿಂದ 8ನೇ ತರಗತಿ ಮಕ್ಕಳ ಬ್ಯಾಗುಗಳು 3ರಿಂದ 4 ಕೆಜಿ ಹಾಗೂ 9 ಮತ್ತು 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ಬ್ಯಾಗುಗಳು 4ರಿಂದ 5 ಕೆ.ಜಿ ತೂಕ ಇರಬೇಕು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

Tap to resize

Latest Videos

undefined

ಅಕ್ಕಿಭಾಗ್ಯ ಕಾಂಗ್ರೆಸ್‌ ಸ್ವಯಂಕೃತ ಅಪರಾಧ, ಕೇಂದ್ರದ ಮೇಲೆ ಗೂಬೆ ಕೂರಿಸಲೆತ್ನ: ಎಚ್‌ಡಿಕೆ

ಶಾಲಾ ಮಕ್ಕಳಿಗೆ ಹೆಚ್ಚಿನ ಬ್ಯಾಗ್‌ ಹೊರೆಯಾಗದಂತೆ ಸಂತಸದಿಂದ ಕಲಿಯುವ ವಾತಾವರಣ ರೂಪಿಸಲು ‘ಮಗು ಮತ್ತು ಕಾನೂನು ಕೇಂದ್ರ’ ಮತ್ತು ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಯುಐ) ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಅಧ್ಯಯನ ನಡೆಸಿ 2019ರಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಆಧಾರದ ಮೇಲೆ ಬ್ಯಾಗ್‌ ಮಿತಿ ನಿಗದಿಪಡಿಸಲಾಗಿದೆ. ವರದಿ ಪ್ರಕಾರ, ಶಾಲಾ ಮಕ್ಕಳ ದೇಹದ ತೂಕದ ಶೇಕಡಾ 10ರಿಂದ 15ರಷ್ಟುತೂಕದ ಬ್ಯಾಗ್‌ ತರಬಹುದು ಎಂದು ಮೂಳೆ ತಜ್ಞರು ಶಿಫಾರಸು ಮಾಡಿದ್ದಾರೆ. ಇದರ ಆಧಾರದ ಮೇಲೆ ತರಗತಿವಾರು ಮಕ್ಕಳ ಬ್ಯಾಗ್‌ ತೂಕದ ಮಿತಿ ನಿಗದಿಪಡಿಸಲಾಗಿದೆ.

12 ನಿರ್ದೇಶನಗಳು: 1 ಮತ್ತು 2ನೇ ತರಗತಿ ಮಕ್ಕಳಿಗೆ ಮನೆಗೆಲಸ ನೀಡಬಾರದು. ವಿದ್ಯಾರ್ಥಿಗಳು ಎಲ್ಲ ಪುಸ್ತಕಗಳನ್ನೂ ಪ್ರತಿ ದಿನವೂ ತರದಂತೆ ತಡೆಯಲು ಯಾವ ದಿನ ಯಾವ ಪುಸ್ತಕ ತರಬೇಕೆಂದು ವೇಳಾಪಟ್ಟಿನೀಡಬೇಕು. 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆ, ಗಣಿತ ಹಾಗೂ ಪರಿಸರ ವಿಜ್ಞಾನ ವಿಷಯ ಪಾಠಗಳನ್ನು ಮಾತ್ರ ಬೋಧಿಸಬೇಕು. 3ರಿಂದ 10ನೇ ತರಗತಿ ಮಕ್ಕಳಿಗೆ ಅಗತ್ಯಕ್ಕೆ ಅನುಸಾರ ಸೀಮಿತ ಪ್ರಮಾಣದಲ್ಲಿ ಮನೆಗೆಲಸ ನೀಡಬೇಕು. ಪದಕೋಶ, ಜ್ಞಾನ ವಿಜ್ಞಾನ, ಅಟ್ಲಾಸ್‌ ಸೇರಿ ಮಕ್ಕಳಿಗೆ ಬೇಕಾದ ಪುಸ್ತಕಗಳು ಗ್ರಂಥಾಲಯಗಳಲ್ಲಿ ಸಾಕಷ್ಟುಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳಬೇಕು. ನೋಟ್‌ ಪುಸ್ತಕಗಳು 100 ರಿಂದ 200 ಪುಟಕ್ಕಿಂತ ಹೆಚ್ಚು ಇರಬಾರದು. ಕಡಿಮೆ ತೂಕದ ದೀರ್ಘ ಬಾಳಿಕೆಯ ಬ್ಯಾಕ್‌ ಖರೀದಿಗೆ ಪ್ರೋತ್ಸಾಹಿಸಬೇಕು.. ಶಾಲೆಗಳಲ್ಲೇ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಅನ್ಯ ಪಠ್ಯ ಬೋಧಿಸಿದರೆ ಮಾನ್ಯತೆ ರದ್ದು: ಯಾವುದೇ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಎನ್‌ಸಿಇಆರ್‌ಟಿ ನಿಗದಿ ಪಡಿಸಿರುವ ಪಠ್ಯಕ್ರಮವನ್ನು ಹೊರತುಪಡಿಸಿ ಬೇರೆ ಯಾವುದೇ ಪಠ್ಯಕ್ರಮವನ್ನು ಬೋಧಿಸಿದರೆ ಅಂತಹ ಶಾಲೆಗಳ ಮಾನ್ಯತೆ ರದ್ದು ಪಡಿಸುವುದಾಗಿ ಇಲಾಖೆ ತಿಳಿಸಿದೆ. ಈ ಬಗ್ಗೆ ನಿಗಾವಹಿಸಲು ಹಾಗೂ ಪರಿಶೀಲನೆ ನಡೆಸಲು ತಂಡಗಳನ್ನು ರಚಿಸುವಂತೆ ಜಿಲ್ಲಾ ಡಿಡಿಪಿಐಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ.

ಸುತ್ತೋಲೆಯ ಪ್ರಮುಖ ಅಂಶಗಳು
1 ಮತ್ತು 2ನೇ ತರಗತಿ ಮಕ್ಕಳಿಗೆ ಮನೆಗೆಲಸ ನೀಡಬಾರದು.
ನಿತ್ಯ ಬೇಕಾದ ಪುಸ್ತಕ ಮಾತ್ರ ತರಲು ಸೂಕ್ತ ವೇಳಾಪಟ್ಟಿ
1-5ನೇ ತರಗತಿಗೆ ಭಾಷೆ, ಗಣಿತ, ಪರಿಸರ ವಿಜ್ಞಾನ ವಿಷಯ ಮಾತ್ರ ಬೋಧನೆ
3-10ನೇ ತರಗತಿ ಮಕ್ಕಳಿಗೆ ಅಗತ್ಯಕ್ಕೆ ಅನುಸಾರ ಸೀಮಿತ ಪ್ರಮಾಣದಲ್ಲಿ ಮನೆಗೆಲಸ
ನೋಟ್‌ ಪುಸ್ತಕಗಳು 100 ರಿಂದ 200 ಪುಟಕ್ಕಿಂತ ಹೆಚ್ಚು ಇರಬಾರದು
ಕಡಿಮೆ ತೂಕದ ದೀರ್ಘ ಬಾಳಿಕೆಯ ಬ್ಯಾಗ್‌ ಖರೀದಿಗೆ ಪ್ರೋತ್ಸಾಹ
ಶಾಲೆಗಳಲ್ಲೇ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು

ಬ್ರ್ಯಾಂಡ್‌ ಬೆಂಗಳೂರು ಸಲಹೆಗೆ ವೆಬ್‌ಸೈಟ್‌ ಶುರು: ಡಿ.ಕೆ.ಶಿವಕುಮಾರ್‌

ತರಗತಿವಾರು ಮಕ್ಕಳ ಬ್ಯಾಕ್‌ ತೂಕ ಎಷ್ಟಿರಬೇಕು?
ತರಗತಿ ತೂಕ

1ರಿಂದ 2 1.5-2 ಕೆ.ಜಿ
3ರಿಂದ 5 2-3 ಕೆ.ಜಿ
6ರಿಂದ 8 3-4 ಕೆ.ಜಿ
9ಮತ್ತು10 4-5 ಕೆ.ಜಿ.

click me!