* ಮೊದಲ ಬಾರಿ ಆನ್‌ಲೈನ್ ಅಡ್ಮಿಷನ್‌ಗೆ ಅವಕಾಶ
* ಪದವಿ ಕೋರ್ಸುಗಳ ಪ್ರವೇಶದ ವೇಳೆ ವಿದ್ಯಾರ್ಥಿಗಳಿಗೆ ಸಾಕಷ್ಟು ಬಹುಶಿಸ್ತೀಯ ಕೋರ್ಸುಗಳ ಆಯ್ಕೆಗೆ ಅವಕಾಶ
* ಎಲ್ಲ ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕ್ಕೆ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ
ಬೆಂಗಳೂರು(ಜು.11): ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳಿಗೆ ಸೋಮವಾರದಿಂದ (ಜು.11) ಏಕಕಾಲಕ್ಕೆ ಪ್ರವೇಶಾತಿ ಪ್ರಕ್ರಿಯೆಗಳು ಆರಂಭವಾಗಲಿವೆ. ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಪ್ರವೇಶಾತಿ ನಡೆಯಲಿದೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕವಾದ ಜೂ.18ರ ಮರುದಿನದಿಂದಲೇ ಬಹಳಷ್ಟು ವಿವಿಗಳು ಮತ್ತು ಕಾಲೇಜುಗಳು ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದವು. ಆದರೆ, ಸರ್ಕಾರ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕ್ಕೆ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ. ಹೀಗಾಗಿ ಅಧಿಕೃತವಾಗಿ ಜು.11ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸರ್ಕಾರ ಸಿದ್ಧಪಡಿಸಿರುವ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ತಂತ್ರಾಂಶದ ಮೂಲಕವೇ ಪ್ರವೇಶಾತಿ ನಡೆಸುವುದು ಕಡ್ಡಾಯವಾಗಿದೆ.
ಪಿಯು ಕಾಲೇಜುಗಳಲ್ಲಿ ಡಿಸೆಂಬರ್ ಬಳಿಕ NEP ಪಠ್ಯಕ್ರಮ: BC Nagesh
ರಾಜ್ಯದಲ್ಲಿ ಉನ್ನತ ಶಿಕ್ಷಣದ ವ್ಯವಸ್ಥೆಯಲ್ಲಿ ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿರುವುದರಿಂದ ಪದವಿ ಕೋರ್ಸುಗಳ ಪ್ರವೇಶದ ವೇಳೆ ವಿದ್ಯಾರ್ಥಿಗಳಿಗೆ ಸಾಕಷ್ಟು ಬಹುಶಿಸ್ತೀಯ ಕೋರ್ಸುಗಳ ಆಯ್ಕೆಗೆ ಅವಕಾಶ ದೊರೆಯಲಿದೆ. ಜೊತೆಗೆ ಪದವಿಯನ್ನು ಯಾವುದೇ ವರ್ಷದಲ್ಲಿ ಮೊಟಕುಗೊಳಿಸಿದರೂ ಅದಕ್ಕೂ ಪ್ರಮಾಣ ಪತ್ರಗಳು ಸಿಗಲಿವೆ. ಬಳಿಕ ಯಾವಾಗ ಬೇಕಾದರೂ ಮೊಟಕುಗೊಳಿಸಿದ ಸೆಮಿಸ್ಟರ್‌ನಿಂದ ಓದನ್ನು ಪುನಾರಂಭಿಸಬಹುದಾಗಿದೆ. ಏಕರೂಪ ವೇಳಾಪಟ್ಟಿ ಪ್ರಕಾರ ಆಗಸ್ಟ್ 15ಕ್ಕೆ ಮೊದಲ ಸೆಮಿಸ್ಟರ್‌ನ ಎಲ್ಲ ಪ್ರವೇಶ ಮುಕ್ತಾಯವಾಗಿ ಆ.17ರಿಂದ ತರಗತಿಗಳು ಆರಂಭವಾಗಲಿವೆ.