ವಿಟಿಯು ನೂತನ ಕುಲಪತಿಯಾಗಿ ಡಾ.ವಿದ್ಯಾಶಂಕರ್‌ ನೇಮಕ!

By Suvarna News  |  First Published Sep 30, 2022, 3:52 PM IST

3 ವರ್ಷ ಅವಧಿಗೆ ವಿಟಿಯು ನೂತನ ಕುಲಪತಿಯಾಗಿ ಡಾ.ವಿದ್ಯಾಶಂಕರ್‌ ನೇಮಕ ಮಾಡಿ ಗೌರ್ನರ್‌ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಮುಕ್ತ ವಿವಿ ವಿಸಿಯಾಗಿರುವ ವಿದ್ಯಾಶಂಕರ್‌ಗೆ ವಿಟಿಯು ಹುದ್ದೆ ಲಭಿಸಿದೆ.ವಿದ್ಯಾಶಂಕರ್‌ ವಿರುದ್ಧ ಹಲ್ಲೆ ಮತ್ತು ಜೀವ ಬೆದರಿಕೆ ಆರೋಪವಿದೆ.


ಬೆಂಗಳೂರು (ಸೆ.30): ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ(ವಿಟಿಯು) ನೂತನ ಕುಲಪತಿಯಾಗಿ ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಕುಲಪತಿ ಡಾ.ವಿದ್ಯಾಶಂಕರ್‌ ಅವರನ್ನು ನೇಮಕ ಮಾಡಲಾಗಿದೆ. ಇದೀಗ ಅವರು ಕೆಎಸ್‌ಒಯು ಕುಲಪತಿ ಹುದ್ದೆ ತೊರೆದು ವಿಟಿಯು ಕುಲಪತಿಯಾಗಿ ಮುಂದುವರೆಯಲಿದ್ದಾರೆ. ಡಾ.ವಿದ್ಯಾಂಶಕರ್‌ ಅವರನ್ನು ಅಧಿಕಾರ ವಹಿಸಿಕೊಂಡ ದಿನದಿಂದ ಮುಂದಿನ ಮೂರು ವರ್ಷಗಳ ಅವಧಿಗೆ ವಿಟಿಯು ಕುಲಪತಿ ಸ್ಥಾನಕ್ಕೆ ನೇಮಕ ಮಾಡಿ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಗುರುವಾರ ಆದೇಶ ಮಾಡಿದ್ದಾರೆ. ವಿಟಿಯು ಕುಲಪತಿ ಹುದ್ದೆಗೆ ಸುಮಾರು 80 ಮಂದಿ ಪ್ರಾಧ್ಯಾಪಕರು ಅರ್ಜಿ ಸಲ್ಲಿಸಿದ್ದರು. ಇವುಗಳನ್ನು ಪರಿಶೀಲಿಸಿದ ಸರ್ಕಾರ ರಚಿಸಿದ್ದ ಶೋಧನಾ ಸಮಿತಿಯು ಡಾ.ವಿದ್ಯಾಶಂಕರ್‌ ಹೆಸರು ಸೇರಿದಂತೆ ಮೂವರ ಹೆಸರನ್ನು ಪಟ್ಟಿಮಾಡಿ ಶಿಫಾರಸು ಮಾಡಿತ್ತು. ವಿದ್ಯಾಶಂಕರ್‌ ಅವರ ವಿರುದ್ಧ ಸಾಕಷ್ಟು ಅಕ್ರಮದ ಆರೋಪಗಳು ಕೇಳಿಬಂದಿದ್ದವು. ವಿದ್ಯಾಶಂಕರ್‌ ಅವರ ವಿರುದ್ಧ ಪ್ರದೀಪ್‌ ಗಿರಿ ಎಂಬುವರು ನೀಡಿದ ದೂರಿನ ಮೇಲೆ ಮೈಸೂರಿನ ಜಯಲಕ್ಷ್ಮಿ ಪುರಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಮತ್ತು ಜೀವ ಬೆದರಿಕೆ ಸಂಬಂಧ ಸೆ.2ರಂದು ಎಫ್‌ಐಆರ್‌ ದಾಖಲಾಗಿದೆ. ಅಲ್ಲದೆ, ರಾಮನಗರ ಡೈರಿಯಲ್ಲಿನ ಹುದ್ದೆಗಳಿಗೆ ಅರ್ಜಿ ಹಾಕಿದವರ ಅರ್ಹತಾ ಪ್ರಮಾಣ ಪತ್ರನೀಡುವ ಪ್ರಕ್ರಿಯೆಯಲ್ಲಿ ಪ್ರೊ.ವಿದ್ಯಾಶಂಕರ್‌ ನೇತೃತ್ವದ ಸಮಿತಿ ಅಭ್ಯರ್ಥಿಗಳಿಂದ ಲಕ್ಷಾಂತರ ರು. ಹಣ ಪಡೆದು ಫಲಿತಾಂಶ ನೀಡಿದೆ ಎಂದು ಮೈಸೂರು ವಿವಿ ಸಿಂಡಿಕೇಟ್‌ನ ಮಾಜಿ ಸದಸ್ಯ ಡಾ.ಕೆ.ಮಹದೇವ್‌ ದಾಖಲೆಗಳ ಸಹಿತ ಆರೋಪಿಸಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದರು. ಇದಲ್ಲದೆ ಕೆಎಸ್‌ಒಯುನಲ್ಲೂ ಅಕ್ರಮ ನೇಮಕಾತಿ ನಡೆಸಿದ ಆರೋಪಗಳು ಕೇಳಿಬಂದಿದ್ದವು.

ವಿಟಿಯು ವೀಸಿ ಹುದ್ದೆಗೆ ಕಳಂಕಿತರ ಹೆಸರು: ಆರೋಪ  
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ನೂತನ ಕುಲಪತಿ ಹುದ್ದೆಗೆ ಉತ್ತಮ ಶೈಕ್ಷಣಿಕ ಅರ್ಹತೆ ಹಾಗೂ ಯಾವುದೇ ಆರೋಪಗಳಿಲ್ಲದ ಅಭ್ಯರ್ಥಿಗಳನ್ನು ನಿರ್ಲಕ್ಷಿಸಿ ಶೋಧನಾ ಸಮಿತಿಯು ವಿವಿಧ ಅಕ್ರಮ, ಭ್ರಷ್ಟಾಚಾರದ ಆರೋಪ, ದೂರು ಹಾಗೂ ತನಿಖೆ ಎದುರಿಸುತ್ತಿರುವವರ ಹೆಸರುಗಳನ್ನು ಶಿಫಾರಸು ಮಾಡಿರುವ ಆರೋಪ ದಟ್ಟವಾಗಿ ಕೇಳಿಬಂದಿತ್ತು.

Tap to resize

Latest Videos

ಈ ಹಿನ್ನೆಲೆಯಲ್ಲಿ ವಿಟಿಯು ಕುಲಪತಿ ಹುದ್ದೆಯ ಆಕಾಂಕ್ಷಿಗಳಾಗಿದ್ದ ವಿವಿಧ ಶಿಕ್ಷಣ ತಜ್ಞರು ಮತ್ತು ಅರ್ಜಿದಾರರು ಶೋಧನಾ ಸಮಿತಿ ಮಾಡಿರುವ ಮೂರು ಹೆಸರನ್ನು ಸರ್ಕಾರ ಹಾಗೂ ರಾಜ್ಯಪಾಲರು ತಿರಸ್ಕರಿಸಿ ಹೊಸ ಶೋಧನಾ ಸಮಿತಿ ರಚಿಸಿ ಹೆಸರು ಪಡೆಯಬೇಕೆಂದು ಆಗ್ರಹಿಸಲಾಗಿತ್ತು.

ಶೋಧನಾ ಸಮಿತಿಯು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಹಾಲಿ ಕುಲಪತಿ ಪ್ರೊ.ವಿದ್ಯಾಶಂಕರ್‌, ವಿಟಿಯು ಪ್ರಸಕ್ತ ಕುಲಸಚಿವ ಪ್ರೊ.ಆನಂದ್‌ ದೇಶಪಾಂಡೆ ಮತ್ತು ಗೋವಾದ ಎನ್‌ಐಟಿ ನಿರ್ದೇಶಕ ಪ್ರೊ.ಗೋಪಾಲ ಮುಗೇರಾಯ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ, ಈ ಮೂವರ ಮೇಲೂ ಒಂದಿಲ್ಲೊಂದು ಆರೋಪ, ದೂರುಗಳಿವೆ. ಶೋಧನಾ ಸಮಿತಿ ಕಣ್ಣು ಮುಚ್ಚಿ ಇಂತಹವರ ಹೆಸರನ್ನು ಆಯ್ಕೆ ಮಾಡಿರುವುದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಲಾಗಿತ್ತು.

KSOU: ಮುಕ್ತ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ..!

ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ರಾಜ್ಯದ ಉನ್ನತ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲರೊಬ್ಬರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ಶೋಧನಾ ಸಮಿತಿ ಶಿಫಾರಸು ಮಾಡಿರುವ ಮೂವರಲ್ಲಿ ಒಬ್ಬ ವ್ಯಕ್ತಿ ಪೊಲೀಸ್‌ ತನಿಖೆ ಎದುರಿಸುತ್ತಿದ್ದಾರೆ, ಇನ್ನೊಬ್ಬರನ್ನು ಎಐಸಿಟಿಇಯಿಂದ ನಿರ್ಬಂಧಿಸಲಾಗಿದೆ. ಮತ್ತೊಬ್ಬರ ವಿರುದ್ಧ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಸಂಬಂಧ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದರು. ಶೋಧನಾ ಕಮಿಟಿ ಶಿಫಾರಸು ಮಾಡಿದ ಮೂರು ಹೆಸರುಗಳಲ್ಲಿ ಯಾವುದನ್ನಾದರೂ ರಾಜ್ಯಪಾಲರು ಆಯ್ಕೆ ಮಾಡಿದರೆ, ನೇಮಕಾತಿ ವಿವಾದಾತ್ಮಕವಾಗಿರುತ್ತದೆ. ರಾಜ್ಯಪಾಲರು ನೇಮಕಾತಿ ಆದೇಶಕ್ಕೂ ಮೊದಲು ಅಭ್ಯರ್ಥಿಗಳ ವಿವರಗಳನ್ನು ಪಡೆಯುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಮತ್ತೊಬ್ಬ ಅರ್ಜಿದಾರರು ಹೇಳಿದ್ದರು.

 

KSOU ಕುಲಪತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಆಡಿಯೋ ಬಿಡುಗಡೆ ಮಾಡಿದ ನಿವೃತ್ತ ಪ್ರಾಧ್ಯಾಪರ ಮೇಲೆ ಹಲ್ಲೆಗೆ ಯತ್ನ

ಕುಲಪತಿ ಹುದ್ದೆಗೆ ಆಯ್ಕೆ ಮಾಡುವ ವ್ಯಕ್ತಿಯ ವಿರುದ್ಧ ಯಾವುದೇ ಭ್ರಷ್ಟಾಚಾರ, ಅಪರಾಧ ಕೃತ್ಯ, ಕ್ರಿಮಿನಲ್‌ ಪ್ರಕರಣಗಳು ಇರಬಾರದೆಂಬ ನಿಯಮಗಳಿವೆ. ಇದೆಲ್ಲವನ್ನು ಉಲ್ಲಂಘಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ ಎಂದು ವಿವಿಧ ಅರ್ಜಿದಾರರು ದೂರಿದ್ದರು.

click me!