
ಬೆಂಗಳೂರು (ಜೂ.19): ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ತೀವ್ರ ಕುಸಿದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ, 2024-25ನೇ ಸಾಲಿನಲ್ಲಿ ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ನೋಟಿಸ್ ಜಾರಿಗೊಳಿಸಿ ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸಿದೆ. ಅದೇ ರೀತಿ ಫಲಿತಾಂಶ ಕುಸಿದಿರುವ ಅನುದಾನಿತ ಶಾಲೆಗಳಿಗೆ ಸರ್ಕಾರದ ವೇತನಾನುದಾನ ತಡೆಹಿಡಿಯಲು, ವಿಷಯವಾರು ಶಿಕ್ಷಕರ ವಾರ್ಷಿಕ ವೇತನ ಬಡ್ತಿ ಕಡಿತಕ್ಕೆ ಸೂಚಿಸಿದೆ. ಆದರೆ, ಕಡಿಮೆ ಫಲಿತಾಂಶ ಪಡೆದಿರುವ ಅನುದಾನ ರಹಿತ ಖಾಸಗಿ ಶಾಲೆಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ಅವರು ಇಲಾಖೆಯ ಎಲ್ಲಾ ಜಿಲ್ಲಾ ಉಪ ನಿರ್ದೇಶಕರುಗಳಿಗೆ (ಡಿಡಿಪಿಐ)ಗಳಿಗೆ ಆದೇಶ ನೀಡಿದ್ದು, ಶೇ.60 ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಬೇಕು. ಅವರು ನೀಡುವ ಸಮಜಾಯಿಷಿ ಸಮರ್ಪಕವಾಗಿಲ್ಲದಿದ್ದರೆ ಕಾನೂನಾತ್ಮಕವಾಗಿ ಶಿಸ್ತುಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ. ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಜಿಲ್ಲಾ ಡಿಡಿಪಿಐಗಳು ಕಡಿಮೆ ಫಲಿತಾಂಶ ಬಂದಿರುವ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರುಗಳಿಗೆ ನೋಟಿಸ್ ಜಾರಿಗೊಳಿಸಲಾರಂಭಿಸಿದ್ದಾರೆ.
ನೋಟಿಸ್‌ನಲ್ಲಿ ಏನಿದೆ?: ನಿಮ್ಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ, ಕಲಿಕೆಯ ಮಟ್ಟ ಉನ್ನತಗೊಳಿಸಿ ಫಲಿತಾಂಶ ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಲಾಖೆ ನಿರ್ದೇಶನ ನೀಡಿತ್ತು. ಆ ನಿರ್ದೇಶನದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದಿರುವುದು ನಿಮ್ಮ ಶಾಲೆಯ ಫಲಿತಾಂಶದಿಂದ ಕಂಡುಬಂದಿದೆ. ನಿಮ್ಮ ಈ ಧೋರಣೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ತೋರಿಸುತ್ತಿದೆ.
ನೀವು ಶೈಕ್ಷಣಿಕವಾಗಿ ಶಾಲೆಗಳ ಶಿಕ್ಷಕರುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮ ಪಡಿಸುವಲ್ಲಿ ಸರಿಯಾದ ಮಾರ್ಗದರ್ಶನ ನೀಡದೆ ಕರ್ತವ್ಯ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 12ರಡಿ ನೋಟಿಸ್ ಜಾರಿಗೊಳಿಸಲಾಗಿದ್ದು, ನಿಮ್ಮ ಕರ್ತವ್ಯ ನಿರ್ಲಕ್ಷ್ಯಕ್ಕೆ ಏಕೆ ನಿಯಮಾನುಸಾರ ಕ್ರಮ ಜರುಗಿಸಬಾರದು ಎಂಬುದಕ್ಕೆ ಲಿಖಿತ ಸಮಜಾಯಿಷಿ ನೀಡಲು ಸೂಚಿಸಿದೆ. ಈ ಪತ್ರ ತಲುಪಿದ 7 ದಿನಗಳಲ್ಲಿ ಉತ್ತರ ನೀಡಬೇಕು. ಇಲ್ಲದಿದ್ದರೆ ನೀವು ಹೇಳುವುದು ಏನೂ ಇಲ್ಲವೆಂದು ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರುಗಳಿಗೆ ಜಾರಿ ಮಾಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಅನುದಾನಿತ ಶಾಲೆಗಳ ಅನುದಾನಕ್ಕೇ ಬ್ರೇಕ್!: ಇನ್ನು, ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಅನುದಾನಿತ ಪ್ರೌಢ ಶಾಲೆಗಳ ವಿಷಯವಾರು ಶಿಕ್ಷಕರ ವಾರ್ಷಿಕ ವೇತನ ಬಡ್ತಿ ತಡೆಹಿಡಿಯಲು ಮತ್ತು ನಿರಂತರವಾಗಿ ಫಲಿತಾಂಶ ಕುಸಿಯುತ್ತಿರುವ ಶಾಲೆಗಳಿಗೆ ಸರ್ಕಾರದಿಂದ ನೀಡುತ್ತಿರುವ ವೇತನಾನುದಾನವನ್ನೇ ಕಡಿತಗೊಳಿಸಲು ಸೂಚಿಸಲಾಗಿದೆ.
ಈ ಸಂಬಂಧ ಪ್ರೌಢ ಶಿಕ್ಷಣ ನಿರ್ದೇಶಕರು ಎಲ್ಲಾ ಜಿಲ್ಲಾ ಡಿಡಿಪಿಐಗಳು ಮತ್ತು ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಅನುದಾನಿತ ಶಾಲೆಗಳಲ್ಲಿ ವಿಷಯವಾರು ಫಲಿತಾಂಶ ಪರಿಗಣಿಸಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ವಿಷಯ ಶಿಕ್ಷಕರನ್ನು ಗುರುತಿಸಿ ಅಂಥವರ ವಾರ್ಷಿಕ ವೇತನ ಬಡ್ತಿ ತಡೆಹಿಡಿಯುವುದು. ವಿಷಯ ಶಿಕ್ಷಕರು ನಿರಂತರ ಮೂರು ವರ್ಷಗಳಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ನೀಡಿದ್ದಲ್ಲಿ ಅಂತಹ ವಿಷಯ ಶಿಕ್ಷಕರ ವೇತನಾನುದಾನ ತಡೆಹಿಡಿಯುವುದು. ಯಾವುದೇ ಶಾಲೆ ಸತತ 5 ವರ್ಷ ನಿರಂತರವಾಗಿ ಶೇ.50 ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರೆ ಶಾಲೆಗೆ ನೀಡುತ್ತಿರುವ ಸಂಪೂರ್ಣ ವೇತನಾನುದಾನವನ್ನೇ ನಿಲ್ಲಿಸಬೇಕು ಎಂದು ಹೇಳಲಾಗಿದೆ.
ಶೇ.60ಕ್ಕಿಂತ ಕಡಿಮೆ ಫಲಿತಾಂ ಪಡೆದಿರುವ ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳಿಗೆ ನೋಟಿಸ್ ನೀಡಿ ಉತ್ತರ ಪಡೆದು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ಎಲ್ಲಾ ಜಿಲ್ಲಾ ಡಿಡಿಪಿಐ ಮತ್ತು ಬಿಇಒಗಳಿಗೆ ಸೂಚಿಸಲಾಗಿದೆ. ಶಾಲಾ ಮುಖ್ಯಶಿಕ್ಷಕರು, ಆಡಳಿತ ಮಂಡಳಿಗಳು ನೀಡುವ ಸಮಜಾಯಿಷಿ ಆಧರಿಸಿ ಕ್ರಮ ಜರುಗಿಸಲಾಗುವುದು.
- ಡಾ. ತ್ರಿಲೋಕ್ ಚಂದ್ರ, ಶಾಲಾ ಶಿಕ್ಷಣ ಇಲಾಖೆ ಆಯುಕ್ತ