ಮತ್ತೆ ಕೊರೋನಾ ದಾಳಿಯ ಭೀತಿ| ಜಿಂದಾಲ್‌ನಿಂದ ಮತ್ತೆ ಎರಡು ಜಿಲ್ಲೆಗೆ ಅಪಾಯದ ಆತಂಕ| ಒಂದೇ ದಿನ 26 ಪ್ರಕರಣಗಳು| ಸೋಂಕು ಇರುವುದು ಗೊತ್ತಾಗುತ್ತಿದ್ದಂತೆಯೇ ಎಲ್ಲ ವಿದ್ಯಾರ್ಥಿಗಳಿಗೆ ಹೋಂ ಐಸೊಲೇಷನ್|
ಬಳ್ಳಾರಿ(ಮಾ.11): ಜಿಲ್ಲೆಯಲ್ಲಿ ಮತ್ತೆ ಕೊರೋನಾ ದಾಳಿಯ ಆತಂಕ ಶುರುವಾಗಿದೆ. ಸಂಡೂರು ತಾಲೂಕಿನ ಜಿಂದಾಲ್ ಕಾರ್ಖಾನೆಯ ವಿ.ವಿ. ನಗರದ ಕೆ. ಬ್ಲಾಕ್ ವಸತಿ ನಿಲಯದಲ್ಲಿರುವ 11 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು ಇದರಿಂದ ಜಿಲ್ಲೆಯಲ್ಲಿ ಮತ್ತೆ ಕೊರೋನಾ ದಾಳಿಯ ಭೀತಿ ಎದುರಾಗಿದೆ.
ಕೊರೋನಾ ವೈರಸ್‌ನ ಎರಡನೇ ಅಲೆಯ ಹಿನ್ನಲೆಯಲ್ಲಿ ಜಿಂದಾಲ್‌ನ ವಸತಿ ನಿಲಯಗಳಲ್ಲಿದ್ದ ಜಿಲ್ಲೆ ಹಾಗೂ ವಿವಿಧ ಜಿಲ್ಲೆಗಳ 130 ವಿದ್ಯಾರ್ಥಿಗಳ ಪೈಕಿ 90 ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಲಾಗಿ, 11 ವಿದ್ಯಾರ್ಥಿಗಳಿಗೆ ಸೊಂಕು ಹರಡಿರುವುದು ಖಚಿತಗೊಂಡಿದೆ. ಸೋಂಕು ಕಂಡು ಬಂದಿರುವ ಈ ವಿದ್ಯಾರ್ಥಿಗಳು ಒಪಿಜೆ ಕೇಂದ್ರದ ಕಾಲೇಜಿನಲ್ಲಿ ನರ್ಸಿಂಗ್ ಕಲಿಯುತ್ತಿದ್ದರು. ಸೋಂಕು ಇರುವುದು ಗೊತ್ತಾಗುತ್ತಿದ್ದಂತೆಯೇ ಎಲ್ಲ ವಿದ್ಯಾರ್ಥಿಗಳನ್ನು ಹೋಂ ಐಸೊಲೇಷನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಂದಾಲ್‌ನಿಂದ ಮತ್ತೆ ಕೊರೋನಾ ಆತಂಕ:
ಕಳೆದ ವರ್ಷ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹಬ್ಬಲು ಜಿಂದಾಲ್‌ನ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿ ಬಂದಿದ್ದವು. ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ಮಾಡುವ ಜಿಂದಾಲ್‌ನಲ್ಲಿ ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಜಿಂದಾಲ್‌ನ ಕಾರ್ಮಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೈರಸ್ ಕಂಡು ಬಂತು. ಬಳ್ಳಾರಿ, ಸಂಡೂರು, ಹೊಸಪೇಟೆ ತಾಲೂಕಿನಿಂದ ಜಿಂದಾಲ್‌ಗೆ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರಿಗೆ ವೈರಸ್ ಕಂಡು ಬಂದಿದ್ದರಿಂದ ಎಲ್ಲ ಕಡೆ ಹಬ್ಬಲು ಕಾರಣವಾಯಿತು.
ಕರ್ನಾಟಕದಲ್ಲಿ ಮತ್ತೆ ಏರುತ್ತಿದೆ ಕೊರೋನಾ ಸೋಂಕಿನ ಪ್ರಮಾಣ: ಇರಲಿ ಎಚ್ಚರ
ಜಿಲ್ಲೆಯಲ್ಲಿ ಸಾವಿರಾರು ಜನರಲ್ಲಿ ವೈರಸ್ ಕಂಡು ಬಂದು 597 ಜನರು ಸಾವನ್ನಪ್ಪಿದರು. ಇದಕ್ಕೆ ಜಿಂದಾಲ್ ನೇರ ಹೊಣೆ ಎಂದು ಅನೇಕ ಸಂಘಟನೆಗಳು ಆರೋಪಿಸಿದ್ದವು. ಜಿಂದಾಲ್‌ನಲ್ಲಿ ಸೋಂಕು ಹಬ್ಬುವಿಕೆ ಹೆಚ್ಚಾಗಿದ್ದರಿಂದ ಜಿಲ್ಲಾಡಳಿತ ಸಹ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು. ಇದೀಗ ಮತ್ತೆ ಜಿಂದಾಲ್‌ನಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜಿಂದಾಲ್ ಕಾರ್ಖಾನೆ ಸುತ್ತಮುತ್ತಲ ಪ್ರದೇಶದ ಗ್ರಾಮೀಣ ಭಾಗದ ಜನರಲ್ಲಿ ಕೊರೋನಾ ಭೀತಿ ಆವರಿಸಿದೆ.
ಒಂದೇ ದಿನ 26 ಪ್ರಕರಣಗಳು:
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹಾವಳಿ ಸಂಪೂರ್ಣ ನಿಯಂತ್ರಣಕ್ಕೆ ಬಂತು ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುವಾಗಲೇ ಎರಡು ಜಿಲ್ಲೆಗಳಲ್ಲಿ ಸೋಂಕಿನ ದಾಳಿ ಆತಂಕ ಮೂಡಿಸಿದೆ. ನಿತ್ಯ 4ರಿಂದ 5 ಪ್ರಕರಣಗಳು ಕಂಡು ಬರುತ್ತಿದ್ದ ಎರಡು ಜಿಲ್ಲೆಗಳಲ್ಲಿ ಮಂಗಳವಾರ ಒಂದೇ ದಿನದಲ್ಲಿ 26 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 81ಕ್ಕೇರಿದೆ. ಸಂಡೂರು ತಾಲೂಕಿನಲ್ಲಿ 11 ಹಾಗೂ ಹೊಸಪೇಟೆ ತಾಲೂಕಿನಲ್ಲಿ 15 ಪ್ರಕರಣಗಳು ಮಂಗಳವಾರ ಪತ್ತೆಯಾಗಿವೆ. 81 ಸಕ್ರೀಯ ಪಾಸಿಟಿವ್ ಪ್ರಕರಣಗಳಲ್ಲಿ ಬಳ್ಳಾರಿ ತಾಲೂಕು 30, ಸಂಡೂರು 17 ಹಾಗೂ ಹೊಸಪೇಟೆ ತಾಲೂಕಿನಲ್ಲಿ 22 ಇವೆ. ಸಿರುಗುಪ್ಪ 5, ಕೂಡ್ಲಿಗಿ 4, ಹಡಗಲಿ 1, ಹಗರಿಬೊಮ್ಮನಹಳ್ಳಿ 1 ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ 1 ಪಾಸಿಟಿವ್ ಪ್ರಕರಣ ಸಕ್ರೀಯವಾಗಿದೆ.
ಜಿಂದಾಲ್‌ನಲ್ಲಿ 11 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಖಚಿತವಾದ ಹಿನ್ನಲೆಯಲ್ಲಿ ಜಿಂದಾಲ್‌ನಲ್ಲಿ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿ ವೈರಸ್ ಹರಡದಂತೆ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಜಿಲ್ಲೆಯ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಬಳ್ಳಾರಿ ಡಿಎಚ್‌ಒ ಡಾ. ಎಲ್. ಜನಾರ್ದನ ರೆಡ್ಡಿ ತಿಳಿಸಿದ್ದಾರೆ.