
ಬೆಂಗಳೂರು (ಮೇ.30): ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶಕ್ಕೆ ಕಾಮೆಡ್-ಕೆ ನಡೆಸಿದ್ದ 2026ನೇ ಸಾಲಿನ ಯುಜಿಇಟಿ ಮತ್ತು ಯೂನಿಗೇಜ್ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಮೊದಲ 10 ರ್‍ಯಾಂಕ್‌ಗಳು ಹೊರ ರಾಜ್ಯದ ವಿದ್ಯಾರ್ಥಿಗಳ ಪಾಲಾಗಿವೆ. ಈ ಪೈಕಿ ಐದು ರ್‍ಯಾಂಕ್‌ಗಳನ್ನು ಜಾರ್ಖಂಡ್ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ರಾಜ್ಯದ 150 ಎಂಜಿನಿಯರಿಂಗ್ ಕಾಲೇಜುಗಳು ಮತ್ತು ದೇಶದ ವಿವಿಧ ಸದಸ್ಯ ವಿವಿಗಳಲ್ಲಿನ ಎಂಜಿನಿಯರಿಂಗ್ ಸೀಟುಗಳ ಪ್ರವೇಶಕ್ಕೆ ಮೇ 9ರಂದು ದೇಶಾದ್ಯಂತ 171 ನಗರಗಳಲ್ಲಿನ 303 ಕೇಂದ್ರಗಳಲ್ಲಿ ಈ ಬಾರಿಯ ಕಾಮೆಡ್-ಕೆ ಯುಜಿಇಟಿ ಮತ್ತು ಯೂನಿಗೇಜ್ ಪರೀಕ್ಷೆ ನಡೆಸಲಾಗಿತ್ತು. ನೋಂದಣಿಯಾಗಿದ್ದ 1.30 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಪೈಕಿ 1,10,774 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರೆಲ್ಲರ ಫಲಿತಾಂಶ, ರ್‍ಯಾಂಕ್ ಕಾರ್ಡ್ ಅನ್ನು ವೆಬ್‌ಸೈಟ್ www.comedk.orgನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಲಾಗಿನ್ ಮೂಲಕ ಪಡೆಯಬಹುದು ಎಂದು ಕಾಮೆಡ್-ಕೆ ತಿಳಿಸಿದೆ.
3,497 ಕರ್ನಾಟಕದ ವಿದ್ಯಾರ್ಥಿಗಳು ಸೇರಿ ಒಟ್ಟು 11,207 ಮಂದಿ 90ರಿಂದ 100ನೇ ಪರ್ಸೆಂಟೈಲ್ ನಡುವೆ ಫಲಿತಾಂಶ ಪಡೆದಿದ್ದಾರೆ. 80ರಿಂದ 90ರ ಪರ್ಸೆಂಟೈಲ್ ನಡುವೆ 11,385, 70 ರಿಂದ 80ನೇ ಪರ್ಸೆಂಟೈಲ್ ನಡುವೆ 10,940 ಅಭ್ಯರ್ಥಿಗಳಿದ್ದಾರೆ ಎಂದು ಕಾಮೆಡ್ ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ। ಎಸ್.ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷವೂ ಕೌನ್ಸೆಲಿಂಗ್ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ತಮ್ಮ ಲಾಗಿನ್ ಮೂಲಕ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಕೌನ್ಸೆಲಿಂಗ್ ದಿನಾಂಕಗಳ ಅಪ್‌ಡೇಟ್‌ಗಾಗಿ ವೆಬ್‌ಸೈಟ್ ವೀಕ್ಷಿಸುತ್ತಿರಿ. ಲಭ್ಯವಿರುವ ಸೀಟ್ ಸಂಖ್ಯೆ, ಶುಲ್ಕ, ಕೌನ್ಸೆಲಿಂಗ್ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಜಾರ್ಖಂಡ್‌ನ ರಾಂಚಿಯ ದರ್ಶಿಲ್ ಮೋದಿ ಮೊದಲ ರ್‍ಯಾಂಕ್ ಪಡೆದಿದ್ದರೆ, ಅದೇ ರಾಜ್ಯದ ಪ್ರಿಯಾನುಜ್ ಭಾಗ್ಬಾತಿ, ಆರ್ಶ್ ಪರಾಶರ್, ಇಶಾಂಕ್ ಅಗರ್ವಾಲ್ ಮತ್ತು ಅನಿಲ್ ಶುಲ್ಕಾ ಕ್ರಮವಾಗಿ 2, 4, 5 ಮತ್ತು 6ನೇ ರ್‍ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ. 3ನೇ ರ್‍ಯಾಂಕ್ ಉತ್ತರಾಖಂಡದ ವಿದ್ಯಾರ್ಥಿ ಶ್ರೇಷ್ಠ ಗುಪ್ತಾ ಪಾಲಾಗಿದೆ. ಉಳಿದಂತೆ ಆಂಧ್ರದ ನರೇಂದ್ರ ಬಾಬು ಗರಿ ಮಹಿತ್, ಛತ್ತೀಸ್‌ಗಢದ ದೃಷ್ಟಿ ಸಚ್ದಿಯೋ, ಪಂಜಾಬ್‌ನ ಮಾನಸ್ ಜಿಂದಾಲ್, ಬಿಹಾರದ ಆದಿತ್ಯ ಕುಮಾರ್ ಕ್ರಮವಾಗಿ 7, 8, 9 ಮತ್ತು 10ನೇ ರ್‍ಯಾಂಕ್ ಪಡೆದಿದ್ದಾರೆ.