ಹೊಸ ಹಾಸ್ಟೆಲ್‌ ಬೇಡ, ಹಳೆ ಹಾಸ್ಟೆಲ್‌ ಕಾಮಗಾರಿ ಮುಗಿಸಿ: ಸಿಎಂ ಬಿಎಸ್‌ವೈ

By Kannadaprabha NewsFirst Published Jan 28, 2021, 9:45 AM IST
Highlights

ಕಾಮಗಾರಿಯಲ್ಲಿ ಅವ್ಯವಹಾರ ಆಗದಂತೆ ಎಚ್ಚರಿಕೆ ವಹಿಸಿ| ಶಿಷ್ಯ ವೇತನ ಬಾಕಿ ಇರಿಸಿಕೊಳ್ಳದೆ ಹಣ ಮಂಜೂರು ಮಾಡಿ| ಹಾಸ್ಟೆಲ್‌ ಕಾಮಗಾರಿಗಳ ಬಗ್ಗೆ ಗಮನ ನೀಡಿ| ಕಾಮಗಾರಿಗಳಲ್ಲಿ ಯಾವುದೇ ಆವ್ಯವಹಾರ ನಡೆಯದಂತೆ ಹಾಗೂ ಹಾಸ್ಟೆಲ್‌ಗಳ ವ್ಯವಸ್ಥೆಯಲ್ಲಿ ಲೋಪಗಳಾಗದಂತೆ ನೋಡಿಕೊಳ್ಳಬೇಕು: ಬಿಎಸ್‌ವೈ ಸೂಚನೆ| 

ಬೆಂಗಳೂರು(ಜ.28): ವಿದ್ಯಾರ್ಥಿಗಳ ಶಿಷ್ಯ ವೇತನ ಮತ್ತು ಪ್ರಸ್ತುತ ನಡೆಯುತ್ತಿರುವ ಹಾಸ್ಟೆಲ್‌ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಹೊಸ ಹಾಸ್ಟೆಲ್‌ ಯೋಜನೆಗಳು ಸದ್ಯಕ್ಕೆ ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಬುಧವಾರ ತಮ್ಮ ನಿವಾಸದಲ್ಲಿ ನಡೆದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಿಷ್ಯವೇತನ ಪಾವತಿ ಬಗ್ಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಸೂಚನೆ ನೀಡಿದರು.
ಶಿಷ್ಯ ವೇತನಗಳನ್ನು ಬಾಕಿ ಇರಿಸಿಕೊಳ್ಳದೆ ಹಣವನ್ನು ಮಂಜೂರು ಮಾಡಿ. ಹಾಸ್ಟೆಲ್‌ ಕಾಮಗಾರಿಗಳ ಬಗ್ಗೆ ಗಮನ ನೀಡಿ. ಕಾಮಗಾರಿಗಳಲ್ಲಿ ಯಾವುದೇ ಆವ್ಯವಹಾರ ನಡೆಯದಂತೆ ಹಾಗು ಹಾಸ್ಟೆಲ್‌ಗಳ ವ್ಯವಸ್ಥೆಯಲ್ಲಿ ಲೋಪಗಳಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ನಿಯಮದಂತೆ ಶಿಷ್ಯ ವೇತನ, ಶುಲ್ಕ ವಿನಾಯಿತಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಬೇಕು. ಇದಕ್ಕೆ ಅಗತ್ಯವಾಗಿರುವ ಅನುದಾನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ.

ವಿದ್ಯಾಸಿರಿ ಯೋಜನೆಯಡಿ ಇನ್ನೂ .8 ಕೋಟಿ ಅನುದಾನ ರಾಜ್ಯ ಸರ್ಕಾರದಿಂದ ಬರಬೇಕಿದೆ. 24,330ರಷ್ಟುಹಾಸ್ಟೆಲ್‌ಗಳಿದ್ದು ಇವುಗಳ ನಿರ್ವಹಣೆಗೆ ಅಗತ್ಯವಾದ ಹಣವನ್ನು ಒದಗಿಸಬೇಕು. ಈಗ ಗರಿಷ್ಠ 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಇರಲು ಅವಕಾಶವಿದೆ. ಆದರೆ ಉತ್ತಮ ಸೌಲಭ್ಯ ಮತ್ತು ಸ್ಥಳಾವಕಾಶ ಇರುವ ವಿದ್ಯಾರ್ಥಿ ನಿಲಯಗಳಲ್ಲಿ ಗರಿಷ್ಠ 125 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಮನವಿ ಮಾಡಿದ್ದೇವೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಿಂದುಳಿವ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ’ಕನ್ನಡ ಪ್ರಭ’ಕ್ಕೆ ತಿಳಿಸಿದ್ದಾರೆ.

ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರೇ ಗಮನಿಸಿ!

ಇಲಾಖೆಯ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೂ ಪ್ರವೇಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ನಿಯಮಗಳಲ್ಲಿ ಬದಲಾವಣೆ ತರಬೇಕು ಎಂದು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದೇವೆ. ವಿದ್ಯಾಸಿರಿ ಯೋಜನೆಯಡಿಯಲ್ಲಿ ವಿದ್ಯಾರ್ಥಿ ನಿಲಯ ಲಭಿಸದವರಿಗೆ ಬಸ್‌ ಚಾಜ್‌ರ್‍ ಕೊಡುವ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

ಈಗ ಹಾಸ್ಟೆಲ್‌ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಅನ್ಯ ರಾಜ್ಯದ ಸಂಸ್ಥೆಯೊಂದಕ್ಕೆ ನೀಡಿದ್ದೇವೆ. ಈ ಸಂಸ್ಥೆಯ ಕಾಮಗಾರಿ ಮತ್ತು ವರ್ತನೆಯ ಬಗ್ಗೆ ವ್ಯಾಪಕ ದೂರುಗಳು ಬಂದಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯ ಗುತ್ತಿಗೆಯನ್ನು ಮರುಪರಿಶೀಲಿಸುವ ಚಿಂತನೆ ನಡೆಸಲಾಗಿದೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳೊಂದಿಗೆ ನಡೆದ ಉನ್ನತ ಮಟ್ಟದ ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಶ್ರೀರಾಮುಲು ಗೈರು ಹಾಜರಾಗಿದ್ದರು. ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್‌, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
 

click me!