10ನೇ ಕ್ಲಾಸಲ್ಲಿ ಜಸ್ಟ್‌ ಪಾಸಾದರೂ ಬ್ಯಾನರ್‌ ಕಟ್ಟಿ ಸಂಭ್ರಮಾಚರಣೆ..!

By Kannadaprabha News  |  First Published May 12, 2024, 8:29 AM IST

ಹ್ಯಾಸ್ಲಿನ್‌ ಎಂಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಪರೀಕ್ಷೆ ಪಾಸಾಗುತ್ತಾನೋ ಇಲ್ಲವೊ ಎಂಬ ಗೊಂದಲದಲ್ಲಿ ಆತನ ಸ್ನೇಹಿತರಿದ್ದರು. ಕೊನೆಗೆ ರಿಸಲ್ಟ್‌ ಬರುವಾಗ ಹ್ಯಾಸ್ಲಿನ್‌ ಪಾಸಾಗಿಬಿಟ್ಟಿದ್ದ. ಇದೇ ಖುಷಿಯಲ್ಲಿ ಅವನ ಸ್ನೇಹಿತರು ಪಚ್ಚನಾಡಿಯ ಮಂಗಳಾನಗರದ ರಸ್ತೆ ಬದಿಯಲ್ಲಿ ದೊಡ್ಡ ಬ್ಯಾನರನ್ನೇ ಅಳವಡಿಸಿ ಜಸ್ಟ್‌ ಪಾಸಾದ ಸ್ನೇಹಿತನಿಗೆ ವಿಭಿನ್ನ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬ್ಯಾನರ್‌ ಜಾಲತಾಣದಲ್ಲಿ ವೈರಲ್‌ ಆಗಿದೆ.


ಮಂಗಳೂರು(ಮೇ.12): ಶೇ.99 ಅಂಕ ಗಳಿಸಿದರೂ ಕಡಿಮೆಯಾಯಿತೆಂದು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕುವ ಈ ಕಾಲಘಟ್ಟದಲ್ಲಿ 625ಕ್ಕೆ ಕೇವಲ 300 ಅಂಕಗಳೊಂದಿಗೆ ಜಸ್ಟ್‌ ಪಾಸಾದ ಮಂಗಳೂರಿನ ವಿದ್ಯಾರ್ಥಿಯೊಬ್ಬನಿಗೆ ಆತನ ಸ್ನೇಹಿತರು ಅಭಿನಂದನಾ ಬ್ಯಾನರನ್ನೇ ಹಾಕಿ ಭರ್ಜರಿಯಾಗಿ ಸಂಭ್ರಮಾಚರಣೆ ಮಾಡಿದ್ದಾರೆ.

ನಗರದ ಪಚ್ಚನಾಡಿಯ ಹ್ಯಾಸ್ಲಿನ್‌ ಎಂಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಪರೀಕ್ಷೆ ಪಾಸಾಗುತ್ತಾನೋ ಇಲ್ಲವೊ ಎಂಬ ಗೊಂದಲದಲ್ಲಿ ಆತನ ಸ್ನೇಹಿತರಿದ್ದರು. ಕೊನೆಗೆ ರಿಸಲ್ಟ್‌ ಬರುವಾಗ ಹ್ಯಾಸ್ಲಿನ್‌ ಪಾಸಾಗಿಬಿಟ್ಟಿದ್ದ. ಇದೇ ಖುಷಿಯಲ್ಲಿ ಅವನ ಸ್ನೇಹಿತರು ಪಚ್ಚನಾಡಿಯ ಮಂಗಳಾನಗರದ ರಸ್ತೆ ಬದಿಯಲ್ಲಿ ದೊಡ್ಡ ಬ್ಯಾನರನ್ನೇ ಅಳವಡಿಸಿ ಜಸ್ಟ್‌ ಪಾಸಾದ ಸ್ನೇಹಿತನಿಗೆ ವಿಭಿನ್ನ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬ್ಯಾನರ್‌ ಜಾಲತಾಣದಲ್ಲಿ ವೈರಲ್‌ ಆಗಿದೆ.
ಮಾರ್ಕ್ಸ್‌ ಕಡಿಮೆಯಾಯಿತೆಂದು ಆತ್ಮಹತ್ಯೆ ಮಾಡುವ ಮಕ್ಕಳು ಇರುವಾಗ ಜಸ್ಟ್ ಪಾಸಾದರೂ ಸಂಭ್ರಮಿಸಿದ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳಿಗೆ ಪಾಠ ಎಂದು ನೆಟ್ಟಿಗರು ಧನಾತ್ಮಕವಾಗಿ ಕಮೆಂಟಿಸಿದ್ದಾರೆ.

Tap to resize

Latest Videos

undefined

ಪರೀಕ್ಷೆ ಕಟ್ಟುನಿಟ್ಟು: ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ?

ಬ್ಯಾನರ್‌ ಕೂಡ ಡಿಫರೆಂಟ್‌!:

ಬ್ಯಾನರ್ ಅಳವಡಿಸಿದ ಸ್ನೇಹಿತರು ವಿಭಿನ್ನವಾಗಿಯೇ ಒಕ್ಕಣೆ ಬರೆಸಿದ್ದಾರೆ. ‘ಅಪ್ಪ ಅಮ್ಮನ ಆಶೀರ್ವಾದದಿಂದ, ಊರವರ ಬೈಗುಳದಿಂದ, ಊರವರ ಪ್ರೋತ್ಸಾಹದಿಂದ, ಟ್ಯೂಷನ್‌ ಮಹಾತ್ಮೆಯಿಂದ, ಶಾಲೆಯ ಕಿರಿಕಿರಿಯಿಂದ, ಶಿಕ್ಷಕರ ಬೋಧನೆಯಿಂದ, ಸೈಕಲ್‌- ಕ್ರಾಕ್ಸ್‌- ಪಿಯುಸಿ ಆಮಿಷದಿಂದ ಎಲ್ಲರ ಕುತೂಹಲ, ಬ್ರೂಸ್ಲಿ (ಹ್ಯಾಸ್ಲಿನ್‌) ಪಾಸೋ ಫೇಲೋ, ಇಂದು ಆ ಚರ್ಚೆಗೆ ತೆರೆ ಬಿದ್ದಿದೆ. ತೋಚಿದ್ದು ಗೀಚಿ ಫೇಲ್ ಆಗುವವನು ಹರಕೆಯ ಬಲದಿಂದ, ಪ್ರಯತ್ನದ ಫಲದಿಂದ ಹೇಗೋ ಒಟ್ಟಾರೆ ನಮ್ಮ ಬ್ರೂಸ್ಲಿ ಜಸ್ಟ್‌ ಪಾಸಾಗಿರೋದೆ ನಮಗೆಲ್ಲ ಸಂಭ್ರಮ ಸಂಭ್ರಮ.. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 300 ಅಂಕ ಪಡೆದು ಉತ್ತೀರ್ಣನಾದ ಹ್ಯಾಸ್ಲಿನ್‌ ನಿಮಗೆ ಅಭಿನಂದನೆಗಳು’ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ. ಬ್ಯಾನರ್‌ ಬರೆದವರು- ಹ್ಯಾಸ್ಲಿನ್‌ (ಬ್ರೂಸ್ಲಿ) ಹಿತೈಷಿಗಳು, ಯುವ ಫ್ರೆಂಡ್ಸ್‌ ಮಂಗಳಾನಗರ ಎಂದೂ ಉಲ್ಲೇಖಿಸಲಾಗಿದೆ. ಬ್ಯಾನರ್‌ನಲ್ಲಿ ಜಸ್ಟ್ ಪಾಸಾದ ಹ್ಯಾಸ್ಲಿನ್‌ನ ದೊಡ್ಡ ಫೋಟೊವನ್ನೂ ಅಳವಡಿಸಿರುವುದು ವಿಶೇಷ.

click me!